'ಚಾಣಕ್ಯ ವಿಶ್ವವಿದ್ಯಾಲಯ ಮಸೂದೆ-2021' ಬಹುದೊಡ್ಡ ಹಗರಣ: ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ

ರಾಜ್ಯದ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಚಾಣಕ್ಯ ಖಾಸಗಿ ವಿಶ್ವವಿದ್ಯಾಲಯ ಮಸೂದೆ 2021ನ್ನು ವಿರೋಧಿಸುತ್ತಿದೆ. ಶಿಕ್ಷಣ ಮತ್ತು ಸಾಮಾಜಿಕ ಅಧ್ಯಯನ ಕೇಂದ್ರದ ಸದಸ್ಯರೆಲ್ಲರೂ ಆರ್ ಎಸ್ ಎಸ್ ಸದಸ್ಯರಾಗಿದ್ದಾರೆ. ಈ ಶಿಕ್ಷಣ ಸಂಸ್ಥೆಯಿಂದ ಸಮಾಜದ ಬಹುತೇಕ ವರ್ಗದ ಜನರಿಗೆ ಪ್ರಯೋಜನವಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯದ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಚಾಣಕ್ಯ ಖಾಸಗಿ ವಿಶ್ವವಿದ್ಯಾಲಯ ಮಸೂದೆ 2021ನ್ನು ವಿರೋಧಿಸುತ್ತಿದೆ. ಶಿಕ್ಷಣ ಮತ್ತು ಸಾಮಾಜಿಕ ಅಧ್ಯಯನ ಕೇಂದ್ರದ ಸದಸ್ಯರೆಲ್ಲರೂ ಆರ್ ಎಸ್ ಎಸ್ ಸದಸ್ಯರಾಗಿದ್ದಾರೆ. ಈ ಶಿಕ್ಷಣ ಸಂಸ್ಥೆಯಿಂದ ಸಮಾಜದ ಬಹುತೇಕ ವರ್ಗದ ಜನರಿಗೆ ಪ್ರಯೋಜನವಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಉದ್ದೇಶಿತ ಚಾಣಕ್ಯ ಖಾಸಗಿ ವಿಶ್ವವಿದ್ಯಾಲಯಕ್ಕೆ ಭೂ ಹಂಚಿಕೆ ದೊಡ್ಡ ಹಗರಣ, ಧ್ವನಿಮತದ ಮೂಲಕ ಅಂಗೀಕಾರವಾಗಿರುವ ಚಾಣಕ್ಯ ವಿಶ್ವವಿದ್ಯಾಲಯ ಮಸೂದೆಯನ್ನು ತಕ್ಷಣ ಸರ್ಕಾರ ಹಿಂತೆಗೆದುಕೊಳ್ಳಬೇಕು ಎಂದು ಸಿದ್ದರಾಮಯ್ಯ ಸೇರಿದಂತೆ ಡಿ ಕೆ ಶಿವಕುಮಾರ್ ಹಾಗೂ ಇತರ ಕಾಂಗ್ರೆಸ್ ನಾಯಕರು ಆಗ್ರಹಿಸಿದರು.

ಅಭಿವೃದ್ಧಿ ಕೆಲಸಗಳಿಗೆ ಕೋವಿಡ್-19 ಲಾಕ್ ಡೌನ್, ಆರ್ಥಿಕ ಕುಸಿತ ಕಾರಣ ನೆಪವೊಡ್ಡುವ ಸರ್ಕಾರ ಆಸ್ತಿಯನ್ನು ಖಾಸಗಿಯವರಿಗೆ ಮಾರಾಟ ಮಾಡಲು ಹೊರಟಿರುವುದು ಏಕೆ, ಖಾಸಗಿ ವಿಶ್ವವಿದ್ಯಾಲಯಕ್ಕೆ ಜಮೀನು ಪರಭಾರೆ ರದ್ದುಪಡಿಸಬೇಕು ಎಂದರು.

ಈ ಬಗ್ಗೆ ಸದನದಲ್ಲಿ ಚರ್ಚೆಗೆ ಅವಕಾಶ ಮಾಡಿಕೊಡಲಿಲ್ಲ ಎಂದು ಕೂಡ ಸಿದ್ದರಾಮಯ್ಯನವರು ಆರೋಪಿಸಿದ್ದು ಮುಂದಿನ ದಿನಗಳಲ್ಲಿ ಕಾನೂನಾತ್ಮಕ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಚಾಣಕ್ಯ ವಿಶ್ವವಿದ್ಯಾಲಯದಲ್ಲಿರುವವರೆಲ್ಲರೂ ಆರ್ ಎಸ್ ಎಸ್ ಸದಸ್ಯರಾಗಿದ್ದಾರೆ. ಆರ್ ಎಸ್ಎಸ್ ಸಂಸ್ಥೆಗೆ ಸಚಿವ ಸಂಪುಟ ನಿರ್ಣಯ ಮೂಲಕ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ಸೇರಿರುವ ಜಮೀನು ಪರಭಾರೆ ಮಾಡಲಾಗಿದೆ. ಕೆಐಎಡಿಬಿ ಅಭಿವೃದ್ಧಿಪಡಿಸಿದ 300 ಕೋಟಿಯಿಂದ 400 ಕೋಟಿ ರೂಪಾಯಿ ಮೌಲ್ಯದ 116.16 ಎಕರೆ ಭೂಮಿಯನ್ನು ಕೇವಲ 50 ಕೋಟಿ ರೂಪಾಯಿಗೆ ನೀಡಲಾಗಿದೆ. ರೈತರಿಗೆ ಪರಿಹಾರವಾಗಿ ಕೊಟ್ಟಿರುವ ಮೊತ್ತ ಕೇವಲ 175 ಕೋಟಿ ರೂಪಾಯಿ. ಸರ್ಕಾರ ಚಾಣಕ್ಯ ವಿಶ್ವವಿದ್ಯಾಲಯ ಹೆಸರಿನಲ್ಲಿ ಆರ್ ಎಸ್ ಎಸ್ ಸಂಸ್ಥೆಗೆ ಬಳುವಳಿಯಾಗಿ ಜಮೀನು ಕೊಟ್ಟಿದೆ. ಇದೊಂದು ಬಹು ದೊಡ್ಡ ಹಗರಣ ಎಂದು ತೀವ್ರ ಆರೋಪ ಮಾಡಿದರು.

ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ತರಾತುರಿಯಲ್ಲಿ ಭೂಮಿ ಪರಭಾರೆ ಮಾಡಲಾಗಿದೆ. ಬಿ ಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ಸಂಪುಟದಲ್ಲಿ ತೀರ್ಮಾನಿಸಿ ಭೂ ಹಂಚಿಕೆ ಮಾಡಲಾಗಿದೆ. ಇದು ಮನುವಾದಿಗಳ ವಿಶ್ವವಿದ್ಯಾಲಯ ಆಗಲಿದೆ. ಎಲ್ಲ ನಿಬಂಧನೆಗಳನ್ನು ಗಾಳಿಗೆ ತೂರಿ ಭೂ ಪರಭಾರೆ ಮಾಡಲಾಗಿದೆ. ಜಮೀನು ಕೊಡುವಾಗ ಮಾರುಕಟ್ಚೆ ಮೌಲ್ಯ ಪರಿಗಣಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡಿ, ನನಗೆ ಸಹ ವಿದ್ಯಾಸಂಸ್ಥೆ ನಡೆಸಿ ಅನುಭವವಿದೆ. ಖಾಸಗಿ ವಿಶ್ವವಿದ್ಯಾಲಯ ಹೇಗಿರಬೇಕು, ಯಾರು ನಡೆಸಬೇಕೆಂದು ಮುಖ್ಯವಾಗುತ್ತದೆ. ಆರ್ ಎಸ್ ಎಸ್ ಸಂಸ್ಥೆಗೆ ಹಿಂಬಾಗಿಲಿಂದ ಏಕೆ ಭೂಮಿ ನೀಡುತ್ತೀರಿ, ಇದರಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com