ಕೊಡವರಿಗೆ ಬಂದೂಕು ಪರವಾನಗಿ ವಿನಾಯ್ತಿಯನ್ನು ಎತ್ತಿ ಹಿಡಿದ ಹೈಕೋರ್ಟ್
ಬಂದೂಕನ್ನು ಹೊಂದಿರುವುದಕ್ಕೆ ಪರವಾನಗಿ ಪಡೆಯುವುದರಿಂದ ಕೊಡವರಿಗೆ ಸಂವಿಧಾನ, ಕಾನೂನಿನಲ್ಲಿ ನೀಡಲಾಗಿರುವ ವಿನಾಯ್ತಿಯನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿದೆ.
Published: 23rd September 2021 03:26 PM | Last Updated: 23rd September 2021 03:32 PM | A+A A-

ಕರ್ನಾಟಕ ಹೈಕೋರ್ಟ್
ಬೆಂಗಳೂರು: ಬಂದೂಕನ್ನು ಹೊಂದಿರುವುದಕ್ಕೆ ಪರವಾನಗಿ ಪಡೆಯುವುದರಿಂದ ಕೊಡವರಿಗೆ ಸಂವಿಧಾನ, ಕಾನೂನಿನಲ್ಲಿ ನೀಡಲಾಗಿರುವ ವಿನಾಯ್ತಿಯನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿದೆ.
ಬುಧವಾರದಿಂದ ಜಾರಿಗೆ ಬರುವಂತೆ ಕರ್ನಾಟಕ ಹೈಕೋರ್ಟ್ ನ ಹಂಗಾಮಿ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮ ಹಾಗೂ ಸಚಿನ್ ಶಂಕರ್ ಮಗದುಮ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದ್ದು, ಅವರಿಗೆ ವಿನಾಯ್ತಿ ದೊರೆತಿರುವುದು ಸರಿಯಾಗಿದೆ. 10 ವರ್ಷಗಳ ಕಾಲ ವಿನಾಯ್ತಿ ಇರಲಿದ್ದು, ಅನಿರ್ದಿಷ್ಟವಾದ ವಿನಾಯ್ತಿ ಅಲ್ಲ ಎಂದು ಕೋರ್ಟ್ ಹೇಳಿದೆ.
"ವಿನಾಯ್ತಿ ಕೆಲವು ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ ಎಂದು ಕೋರ್ಟ್ ಹೇಳಿದೆ. ಕೊಡವರಿಗೆ ಹಾಗೂ ಜಮ್ಮ ಬಾಣೆ ಭೂಮಿ ಮಾಲಿಕರಿಗೆ ಬಂದೂಕು ಪರವಾನಗಿ ಪಡೆಯುವುದರಿಂದ ವಿನಾಯಿತಿ ನೀಡಿ ಕೇಂದ್ರ ಸರ್ಕಾರ (ಗೃಹ ಸಚಿವಾಲಯ) 2019ರ ಅ.29ರಂದು ಅಧಿಸೂಚನೆ ಹೊರಡಿಸಿತ್ತು. ಈ ಅಧಿಸೂಚನೆಯ ಪ್ರಕಾರ ಶಸ್ತ್ರಾಸ್ತ ಕಾಯ್ದೆ-1959ರ ಸೆಕ್ಷನ್ 41 ಅನುಸಾರ ಕೊಡವರಿಗೆ ಹಾಗೂ ಜಮ್ಮಾ ಬಾಣೆ ಭೂಮಿ ಹೊಂದಿರುವವರಿಗೆ 10 ವರ್ಷಗಳ ಅವಧಿಗೆ ಬಂದೂಕು ಪರವಾನಗಿ ವಿನಾಯಿತಿ ಸಿಗಲಿದೆ. ಕೊಡವರು ಸ್ವಾತಂತ್ರ್ಯ ಪೂರ್ವದಿಂದಲೂ ಬಂದೂಕು ಪರವಾನಗಿ ಹೊಂದುವುದರಿಂದ ವಿನಾಯಿತಿ ಪಡೆಯುತ್ತಿದ್ದಾರೆ. ಅವರಿಗೆ ಬಂದೂಕು ಪರವಾನಗಿ ಶಸ್ತ್ರಾಸ್ತ್ರ ಕಾಯ್ದೆಯಡಿ ವಿನಾಯಿತಿ ನೀಡಿರುವುದು ಕಾನೂನುಬದ್ಧವಾಗಿದೆ. ಈ ಅಧಿಸೂಚನೆ ಸಂವಿಧಾನ ಮಾನ್ಯವಾಗಿದೆ, ಆದ್ದರಿಂದ ಅಧಿಸೂಚನೆಯನ್ನು ಎತ್ತಿ ಹಿಡಿಯಲಾಗಿದೆ ಎಂದು ಕೋರ್ಟ್ ಹೇಳಿದೆ.
ಗಾಳಿಬೀಡು ನಿವಾಸಿ, ನಿವೃತ್ತ ಸೇನಾಧಿಕಾರಿ ವೈ.ಕೆ. ಚೇತನ್ ಅ.29 ರ ಅಧಿಸೂಚನೆಯನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಈಗ ಈ ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥಗೊಳಿಸಿದೆ.