ಎತ್ತಿನ ಗಾಡಿ ಆಯ್ತು, ಸೈಕಲ್ ಆಯ್ತು, ಈಗ ಟಾಂಗಾ ಮೂಲಕ ವಿಧಾನಸೌಧಕ್ಕೆ ಕಾಂಗ್ರೆಸ್ ನಾಯಕರ ಜಾಥಾ: ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ

ಎತ್ತಿನ ಗಾಡಿ ಆಯ್ತು, ಸೈಕಲ್ ಜಾಥಾ ಆಯ್ತು ಇದೀಗ ಟಾಂಗಾ ಮೂಲಕ ಕಾಂಗ್ರೆಸ್ ನಾಯಕರು ವಿಧಾನಸೌಧದತ್ತ ಜಾಥಾ ಹೊರಟು ವಿಧಾನಸೌಧ ತಲುಪಿದ್ದಾರೆ. 
ಟಾಂಗಾ ಮೂಲಕ ಕಾಂಗ್ರೆಸ್ ನಾಯಕರ ಪ್ರತಿಭಟನೆ
ಟಾಂಗಾ ಮೂಲಕ ಕಾಂಗ್ರೆಸ್ ನಾಯಕರ ಪ್ರತಿಭಟನೆ

ಬೆಂಗಳೂರು: ಎತ್ತಿನ ಗಾಡಿ ಆಯ್ತು, ಸೈಕಲ್ ಜಾಥಾ ಆಯ್ತು ಇದೀಗ ಟಾಂಗಾ ಮೂಲಕ ಕಾಂಗ್ರೆಸ್ ನಾಯಕರು ವಿಧಾನಸೌಧದತ್ತ ಜಾಥಾ ಹೊರಟು ವಿಧಾನಸೌಧ ತಲುಪಿದ್ದಾರೆ. 

ಇಂಧನ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಸಮರ ಸಾರಿರುವ ಕಾಂಗ್ರೆಸ್ ಕೇಂದ್ರ ಮತ್ತು ರಾಜ್ಯಸರ್ಕಾರಗಳು ಜನರ ರಕ್ತ ಹೀರುತ್ತಿದೆ, ಸಾಮಾನ್ಯ ಮತ್ತು ಬಡ ವರ್ಗಗಳ ಜನರಿಗೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜೀವನ ನಡೆಸಲು ಕಷ್ಟವಾಗುತ್ತಿದೆ, ಹಲವು ಕಡೆಗಳಲ್ಲಿ ಜನರು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುತ್ತಿದ್ದಾರೆ ಎಂದು ಆರೋಪಿಸಿ ಸರ್ಕಾರದ ಗಮನ ಸೆಳೆಯಲು ಟಾಂಗಾ ಮೂಲಕ ಪ್ರತಿಭಟನಾ ಜಾಥ ಹೊರಟಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಿಂದ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು, ಶಾಸಕರು ಮತ್ತು ಕಾರ್ಯಕರ್ತರು ವಿಧಾನಸೌಧದತ್ತ ಜಾಥಾ ಹೊರಟಿದ್ದಾರೆ. ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಒಂದೇ ಟಾಂಗಾದಲ್ಲಿ ಹೊರಟಿದ್ದಾರೆ.

ಕಾರ್ಯಕರ್ತರ ಟಾಂಗಾಗಳಿಗೆ ಪೊಲೀಸರ ತಡೆ: ಈ ವೇಳೆ ಜನದಟ್ಟಣೆ, ಸಂಚಾರ ದಟ್ಟಣೆಯಾಗುತ್ತಿರುವುದನ್ನು ಮನಗಂಡ ಪೊಲೀಸರು ಕಾಂಗ್ರೆಸ್ ನಾಯಕರು, ಶಾಸಕರಿಗೆ ಮಾತ್ರ ಹೋಗಲು ಅವಕಾಶ ನೀಡಿದ್ದು, ಕಾರ್ಯಕರ್ತರ ಟಾಂಗಾಗಳಿಗೆ ತಡೆಯೊಡ್ಡಿದ್ದಾರೆ. ಎಂಟು ಟಾಂಗಾಗಳಿಗೆ ಮಾತ್ರ ಅರ್ಧದಿಂದ ಮುಂದೆ ವಿಧಾನಸೌಧದತ್ತ ಹೋಗಲು ಅವಕಾಶ ನೀಡಲಾಗಿದೆ.  

ಬಳಿಕ ಮಾಧ್ಯಮಗಳೊಂದಿಗೆ ವಿಧಾನಸೌಧದಲ್ಲಿ ಮಾತನಾಡಿದ ಡಿ ಕೆ ಶಿವಕುಮಾರ್, ಲೋಕಸಭಾ ಸ್ಪೀಕರ್ ಅವರನ್ನು ವಿಧಾನಮಂಡಲ ಅಧಿವೇಶನದಲ್ಲಿ ಮಾತನಾಡಲು ಬಂದಿದ್ದಾರೆ. ಇಂದು ಇಂಧನ ಸೇರಿದಂತೆ ಅಗತ್ಯ ವಸ್ತುಗಳು, ಮನೆ ನಿರ್ಮಾಣ ಮಾಡುವ ವಸ್ತುಗಳ ಬೆಲೆ ಗಗನಕ್ಕೇರಿದೆ, ಕೊರೋನಾ ಬಂದ ಮೇಲೆ ಜನರ ಆದಾಯ ಕಡಿಮೆಯಾಗಿದೆ ಹೊರತು ಖರ್ಚು ಕಡಿಮೆ ಆಗಿಲ್ಲ.

ನಾವು ಎಷ್ಟೇ ಹೇಳಿದರೂ ಎಮ್ಮೆ ಚರ್ಮದ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ, ಸರ್ಕಾರಕ್ಕೆ ಕಣ್ಣು, ಕಿವಿ, ಬಾಯಿ ಯಾವುದೂ ಇಲ್ಲ. ನಮ್ಮ ಹೋರಾಟ ನಿರಂತರ. ಅಕ್ಟೋಬರ್ ತಿಂಗಳಿನಲ್ಲಿ ರಾಜ್ಯದ ಪ್ರತಿ ಗ್ರಾಮ ಪಂಚಾಯತಿನಲ್ಲಿ ಕೂಡ ಹೋರಾಟ ಮಾಡಲಿದ್ದೇವೆ ಎಂದರು.

ಸರ್ಕಾರದ ಯೋಜನೆಗಳು, ಕಾರ್ಯಕ್ರಮಗಳು ಜನಸಾಮಾನ್ಯರಿಗೆ ಬಡವರ್ಗದವರಿಗೆ ತಲುಪುತ್ತಿಲ್ಲ. ಜನರ ರಕ್ತವನ್ನು ಸರ್ಕಾರ ಹೀರುತ್ತಿದೆ. ಜನರ ಧ್ವನಿಯಾಗಿ ನಾವು ಈ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.

ನಂತರ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ ಸರ್ಕಾರ ವಿರುದ್ಧ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ನಮ್ಮ ಮೂರನೇ ಹೋರಾಟ ಇದು. ಇವತ್ತು ಟಾಂಗಾ ಗಾಡಿ ಮೇಲೆ ಬಂದು ಪ್ರತಿಭಟನೆ ಮಾಡಿದ್ದೇವೆ. ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾದ ಮೇಲೆ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಜನಸಾಮಾನ್ಯರು, ರೈತರು, ಕಾರ್ಮಿಕರು, ಬಡವರಿಗೆ ಬದುಕು ದುಸ್ತರವಾಗಿದೆ. ಜನರ ಮನೆಗಳಿಗೆ ಬೆಂಕಿ ಬಿದ್ದಿದೆ.

10-15 ಸಾವಿರ ಮನೆ ಖರ್ಚು ಮಾಡುತ್ತಿದ್ದವರ ಮನೆಖರ್ಚು ಇಂದು 15 ಸಾವಿರವಾಗಿದೆ. ಪಿಂಚಣಿ ಪಡೆಯುವರಿಗೆ, ಜನಸಾಮಾನ್ಯರ ಆದಾಯ ಹೆಚ್ಚಾಗಿಲ್ಲ. ಹೀಗಿರುವಾಗ ಬಡ ಮತ್ತು ಮಧ್ಯಮ ವರ್ಗದವರು ಜೀವನ ನಡೆಸುವುದು ಹೇಗೆ, ಇಡೀ ಪರಿಸ್ಥಿತಿ ಅಸ್ತವ್ಯಸ್ತವಾಗುತ್ತಿದೆ ಎಂದು ಬೇಸರ ಹೊರಹಾಕಿದರು.

ಹಿಂದೆ ಡಾ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಪೆಟ್ರೋಲ್ ಬೆಲೆ 40 ರೂಪಾಯಿಯಷ್ಟು ಇರುವಂತೆ ನೋಡಿಕೊಂಡಿದ್ದರು. ಪೆಟ್ರೋಲ್, ಡೀಸೆಲ್ ಬೆಲೆ ಸೀಮಿತ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಅಚ್ಛೇ ದಿನ್ ಆಯೇಗಾ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಮೋದಿ ಮತ್ತು ಬಿಜೆಪಿಯವರು ಇಂದು ಬಡವರ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ. ಇದರ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು. 

ಕಾಂಗ್ರೆಸ್ ಯಾವತ್ತಿಗೂ ಜನಸಾಮಾನ್ಯರ ಪರವಾಗಿದೆ, ಬಿಜೆಪಿಯವರಂತೆ ಕಾರ್ಪೊರೇಟರ್ ಗಳ ಪರವಾಗಿಲ್ಲ, ಶ್ರೀಮಂತರ ಮೇಲೆ ಹೆಚ್ಚಿನ ತೆರಿಗೆ ಹಾಕಲಿ, ಜನಸಾಮಾನ್ಯರ ಜೀವನದ ಮೇಲೆ ಬರೆ ಎಳೆಯುವುದು ಏಕೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com