ಬಾಬಾಬುಡನ್ ಗಿರಿ ದತ್ತ ಪೀಠದ ಮುಜಾವರ್ ನೇಮಕ ವಿವಾದ: ರಾಜ್ಯ ಸರ್ಕಾರದ ಆದೇಶ ರದ್ದುಪಡಿಸಿದ ಹೈಕೋರ್ಟ್
ಚಿಕ್ಕಮಗಳೂರಿನ ಬಾಬಾಬುಡನ್ ಗಿರಿ ದತ್ತಾತ್ರೇಯ ಪೀಠದ ಪೂಜಾ ಕೈಂಕರ್ಯ ನೆರವೇರಿಸಲು ಮುಜಾವರ್ ನೇಮಕ ಮಾಡಿ 2018ರ ಮಾರ್ಚ್ 19ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಮಂಗಳವಾರ ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ.
Published: 28th September 2021 05:14 PM | Last Updated: 28th September 2021 05:48 PM | A+A A-

ಹೈಕೋರ್ಟ್
ಬೆಂಗಳೂರು: ಚಿಕ್ಕಮಗಳೂರಿನ ಬಾಬಾಬುಡನ್ ಗಿರಿ ದತ್ತಾತ್ರೇಯ ಪೀಠದ ಪೂಜಾ ಕೈಂಕರ್ಯ ನೆರವೇರಿಸಲು ಮುಜಾವರ್ ನೇಮಕ ಮಾಡಿ 2018ರ ಮಾರ್ಚ್ 19ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಮಂಗಳವಾರ ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ.
“ಪ್ರಕರಣವನ್ನು ಹೊಸದಾಗಿ ಪರಿಗಣಿಸಿ, ಕಾನೂನಿನ ಪ್ರಕಾರ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶಿಸುತ್ತಿದ್ದೇನೆ. ಉನ್ನತಮಟ್ಟದ ಸಮಿತಿಯ ವರದಿಯ ಬಗ್ಗೆ ಯಾವುದೇ ಉಲ್ಲೇಖ ಮಾಡಲಾಗಿಲ್ಲ” ಎಂದು ನ್ಯಾಯಮೂರ್ತಿ ಪಿ ಎಸ್ ದಿನೇಶ್ ಕುಮಾರ್ ನೇತೃತ್ವದ ಏಕಸದಸ್ಯ ಪೀಠವು ತೀರ್ಪಿನಲ್ಲಿ ಹೇಳಿದೆ.
ದತ್ತಪೀಠದಲ್ಲಿ ಪೂಜೆ ನೆರವೇರಿಸಲು ಮುಜಾವರ್ ಅವರನ್ನು ನೇಮಕ ಮಾಡಿ 2018ರ ಮಾರ್ಚ್ 19ರಂದು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಶ್ರೀಗುರು ದತ್ತಾತ್ರೇಯ ಪೀಠ ದೇವಸ್ಥಾನ ಸಂವರ್ಧನಾ ಸಮಿತಿ 2018ರ ಏಪ್ರಿಲ್ ನಲ್ಲಿ ಹೈಕೋರ್ಟ್ ಗೆ ತಕರಾರು ಮನವಿ ಸಲ್ಲಿಸಿತ್ತು.
ಅರ್ಜಿ ಕುರಿತು ಸುದೀರ್ಘ ವಾದ-ಪ್ರತಿವಾದ ಆಲಿಸಿ, ವಿಚಾರಣೆ ಪೂರ್ಣಗೊಳಿಸಿದ್ದ ಹೈಕೋರ್ಟ್ 2021ರ ಆಗಸ್ಟ್ ತಿಂಗಳಲ್ಲಿ ತೀರ್ಪು ಕಾಯ್ದಿರಿಸಿತ್ತು.
ಇನ್ನು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೀಡಿರುವ ನಿರ್ದೇಶನವನ್ನು ಸ್ವಾಗತಿಸಿದ ಕನ್ನಡ ಮತ್ತು ಸಂಸ್ಕೃತಿಕ ಸಚಿವ ಸುನೀಲ್ ಕುಮಾರ್ ಅವರು, ಹಿಂದೂಗಳ ಶ್ರದ್ಧಾಕೇಂದ್ರವಾದ ಚಿಕ್ಕಮಗಳೂರಿನ ಐತಿಹಾಸಿಕ ದತ್ತಾತ್ರೇಯ ಪೀಠ ಕುರಿತಂತೆ ಇವತ್ತು ಘನ ನ್ಯಾಯಾಲಯ ವಿಶೇಷ ತೀರ್ಪು ಕೊಟ್ಟಿದೆ. ಇದನ್ನು ನಾನು ಸ್ವಾಗತಿಸುತ್ತೇನೆ. ಹಿಂದೂ ಅರ್ಚಕರ ನೇಮಕ ಮಾಡುವ ಕುರಿತಂತೆ ರಾಜ್ಯ ಸರ್ಕಾರ ಒಂದು ಸಮಿತಿ ರಚಿಸಿ, ಅದರ ಅಭಿಪ್ರಾಯ ತೆಗೆದುಕೊಂಡು ಹಿಂದೂ ಅರ್ಚಕರ ನೇಮಕ ಮಾಡಬೇಕು ಎಂದು ಹೇಳಿದ್ದಾರೆ.
ಈ ಹಿಂದೆ ಸುಪ್ರೀಂಕೋರ್ಟ್ ಕೂಡ ಇದೇ ರೀತಿ ಅಭಿಪ್ರಾಯ ವ್ಯಕ್ತಪಡಿಸಿತ್ತು. ಆದರೆ, ಅಂದಿನ ಕಾಂಗ್ರೆಸ್ ಸರ್ಕಾರ, ಕೋರ್ಟ್ ಆದೇಶ ಉಲ್ಲಂಘಿಸಿ, ಅಲ್ಲಿ ಹಿಂದೂ ಅರ್ಚಕರ ಬದಲಾಗಿ, ಮುಜಾವರ್ ಸಮುದಾಯದವರಿಗೆ ಪೂಜೆ ಮಾಡಲು ಅವಕಾಶ ನೀಡುವ ಮೂಲಕ ಭಕ್ತರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದರು ಎಂದು ಸುನೀಲ್ ಕುಮಾರ್ ಹೇಳಿದ್ದಾರೆ.