
ಬೆಂಗಳೂರು: ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಳೆದ ಎರಡು ತಿಂಗಳಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ಒಟ್ಟು 59 ಜನರು ಸಾವನ್ನಪ್ಪಿದ್ದಾರೆ.
ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಮುಂದುವರಿದಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಸಂಬಂಧಪಟ್ಟ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಮತ್ತು ಸಂತ್ರಸ್ತರಿಗೆ ವಿಳಂಬ ಮಾಡದೇ ಪರಿಹಾರ ನೀಡುವಂತೆ ಸೂಚಿಸಿದರು
59 ಮಂದಿ ಸಾವನ್ನಪ್ಪಿರುವ ಹೊರತಾಗಿಯೂ (ಕಳೆದ ಎರಡು ದಿನಗಳಲ್ಲಿ ಏಳು ಮಂದಿ ಸೇರಿದಂತೆ) ಐದು ಜನರು ಕಾಣೆಯಾಗಿದ್ದಾರೆ. 36 ಮಂದಿ ಗಾಯಗೊಂಡಿದ್ದಾರೆ. 11 ಜಿಲ್ಲೆಗಳಲ್ಲಿ 39 ಸಾವುಗಳು ವರದಿಯಾಗಿ 111 ಗ್ರಾಮಗಳು ತೀವ್ರವಾಗಿ ಬಾಧಿತವಾಗಿವೆ. ಪದೇ ಪದೇ ಭೂಕುಸಿತ ಸಂಭವಿಸುತ್ತಿರುವ ಕೊಡಗು ಜಿಲ್ಲೆಯ ಬಗ್ಗೆ ವಿಶೇಷ ಗಮನ ಹರಿಸಬೇಕು ಎಂದು ಸಿಎಂ ಸೂಚಿಸಿದ್ದಾರೆ. ತಹಶೀಲ್ದಾರ್‌ಗಳು ಪರಿಹಾರ ಕೇಂದ್ರಗಳಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಮಾಡಬೇಕು ಮತ್ತು ಅದನ್ನು ಡಿಸಿಗಳು ಮೇಲ್ವಿಚಾರಣೆ ಮಾಡಬೇಕು ಎಂದು ಆದೇಶಿಸಿದ್ದಾರೆ.
ಇನ್ನೂ ಸೋಮವಾರ ರಾತ್ರಿ ಸಕ್ಕರೆ ನಾಡು ಮಂಡ್ಯ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿದಿದೆ. ವರುಣನ ಅಬ್ಬರಕ್ಕೆ ಜಿಲ್ಲೆಯ ಜನರು ನಲುಗಿ ಹೋಗಿದ್ದು, ಕೆರೆ ಕಟ್ಟೆಗಳು ತುಂಬಿದ್ದು, ನದಿಗಳು ಉಕ್ಕಿ ಹರಿಯುತ್ತಿವೆ. ಇದರಿಂದ ಜಿಲ್ಲೆಯಾದ್ಯಂತ ಜನ ಜೀವನ ಅಸ್ತವ್ಯಸ್ತಗೊಂಡಿದೆ. ರಾತ್ರಿ ಸುರಿದ ಭಾರೀ ಮಳೆಗೆ ನಗರದ ರಸ್ತೆಗಳು ಕಾಲುವೆಯಂತಾಗಿ ಜನರು ಮತ್ತು ವಾಹನ ಸವಾರರು ಪರದಾಡುವಂತಾಗಿತ್ತು.
ಇನ್ನು ಬೂದನೂರು ಬಳಿ ಕೆರೆ ತುಂಬಿ ಹರಿದ ಪರಿಣಾಮ ಮೈಸೂರು -ಬೆಂಗಳೂರು ಹೆದ್ದಾರಿ ಮುಳುಗಡೆಯಾಗಿ ವಾಹನ ಸವಾರರು ಪರದಾಡುವಂತಾಯಿತು. ಹೊಳಲು ಗ್ರಾಮಕ್ಕೆ ಮಳೆ ನೀರು ನುಗ್ಗಿದ್ದು, ಜನರು ಪರದಾಡುವಂತಾಗಿದೆ. ಬಹುತೇಕ ಕೆರೆಗಳು ತುಂಬಿ ಹರಿಯುತ್ತಿರುವ ಕಾರಣ ಮಂಡ್ಯ - ನಾಗಮಂಗಲ, ಮಂಡ್ಯ- ಮೇಲುಕೋಟೆ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ಮದ್ದೂರು ಬಳಿ ಬಿದರಕೋಟೆ ಸಮೀಪ ಶಿಂಷಾ ಕಾಲುವೆ ಒಡೆದಿದ್ದು ರಸ್ತೆ ಮತ್ತು ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು, ಮದ್ದೂರು ಬಿದರಕೋಟೆ ಸಂಪರ್ಕ ಕಡಿತಗೊಂಡಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿದ ರಣಭೀಕರ ಮಳೆ ಜನಜೀವನವನ್ನ ಅಸ್ತವ್ಯಸ್ತಗೊಳಿಸಿದೆ. ಜಿಲ್ಲೆಯ ಭಟ್ಕಳ ಪಟ್ಟಣದ ಜನ ಎಂದಿಗೂ ಕಂಡು ಕೇಳರಿಯದ ಮಳೆ ಇಂದು ಸುರಿದಿದೆ. ಸೋಮವಾರ ರಾತ್ರಿಯಿಂದ ಆರಂಭವಾದ ಮಳೆಯಿಂದಾಗಿ ಅನೇಕ ಗ್ರಾಮಗಳು ಜಲಾವೃತವಾಗಿದ್ದು, ಜನ ಪರದಾಡುತ್ತಿದ್ದಾರೆ. ಭಟ್ಕಳ ಪಟ್ಟಣ ಇತಿಹಾಸದಲ್ಲೇ ಮೊದಲ ಬಾರಿಗೆ ಕಂಡು ಕೇಳರಿಯದಂಥ ಪ್ರವಾಹ ಪರಿಸ್ಥಿತಿಗೆ ತುತ್ತಾಗಿದೆ.
ರಾತ್ರಿಯಿಂದ ಬೆಳಗ್ಗಿನವರೆಗೆ ಸುರಿದ ಮಳೆಗೆ ನಿರೀಕ್ಷೆಯೇ ಇರದಷ್ಟು ನೀರು ತುಂಬಿ ಭಟ್ಕಳ ಪಟ್ಟಣ ಭಾಗದಲ್ಲೇ ಹತ್ತಾರು ಗ್ರಾಮಗಳು ಜಲಾವೃತವಾಗಿವೆ. ಒಮ್ಮೆಲೆ ನಗರ ಭಾಗದಲ್ಲಿ ನೀರು ತುಂಬಲಾರಂಭಿಸಿದ್ದು, ಜನ ಕಂಗಾಲಾಗಿದ್ದಾರೆ.
ವೆಂಕಟಾಪುರ, ಚೌಥ್ನಿ, ಶರಾಬಿ ಹೊಳೆಗಳು ತುಂಬಿ ಹರಿದ ಪರಿಣಾಮ ಪಟ್ಟಣ ಭಾಗದ ಕೋಕ್ತಿ, ಆಸರಕೇರಿ, ಮೂಡಭಟ್ಕಳ, ಮುಟ್ಟಳ್ಳಿ, ಚೌಥ್ನಿ, ಮುಂಡಳ್ಳಿ ಭಾಗ ಸಂಪೂರ್ಣ ಜಲಾವೃತವಾಗಿದೆ. ರಾಷ್ಟ್ರೀಯ ಹೆದ್ದಾರಿಯ ಶಂಸುದ್ದೀನ್ ಸರ್ಕಲ್, ರಂಗಿನಕಟ್ಟೆ, ಶಿರಾಲಿಯಲ್ಲಿ ಸೊಂಟದ ಮಟ್ಟ ನೀರು ನಿಂತು ವಾಹನಗಳು ಓಡಾಡದ ಪರಿಸ್ಥಿತಿ ಎದುರಾಗಿದೆ. ಭಟ್ಕಳದ ಶಂಸುದ್ದೀನ್ ವೃತ್ತದಿಂದ ಪೇಟೆಯ ಹೂವಿನ ಚೌಕದವರೆಗೆ ಭಾರೀ ನೀರು ನಿಂತಿದ್ದು, ಸಣ್ಣಪುಟ್ಟ ವಾಹನಗಳು ಕೂಡ ತೇಲಿ ಹೋಗಿವೆ. ಮುಂಜಾಗ್ರತಾ ಕ್ರಮವಾಗಿ ಭಟ್ಕಳದ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.
Advertisement