ಅರಣ್ಯ ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದನೆ, ಬೆಂಕಿ ಹಚ್ಚುವಂತೆ ಪ್ರಚೋದನೆ: ಶಾಸಕ ಸುರೇಶ್ ಗೌಡ ವಿರುದ್ಧ ದೂರು ದಾಖಲಿಸಲು ಚಿಂತನೆ!

ರಾಜ್ಯ ಉಪ ವಲಯ ಅರಣ್ಯಾಧಿಕಾರಿಗಳ ಸಂಘ ಹಾಗೂ ಕರ್ನಾಟಕ ರಾಜ್ಯ ಅರಣ್ಯ ರಕ್ಷಕರ ಮತ್ತು ವೀಕ್ಷಕರ ಸಂಘದ ಸದಸ್ಯರು ಮೈಸೂರು ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ (ಸಿಎಫ್) ಮಾಲತಿ ಪ್ರಿಯಾ ಅವರನ್ನು ಭೇಟಿ ಮಾಡಿ ಶಾಸಕರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದರು.
ಸುರೇಶ್ ಗೌಡ
ಸುರೇಶ್ ಗೌಡ

ಮಂಡ್ಯ: ಶಾಸಕ ಸುರೇಶ್ ಗೌಡ ಅರಣ್ಯ ಸಿಬ್ಬಂದಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವಂತಹ ಘಟನೆ ನಾಗಮಂಗಲ ತಾಲೂಕಿನ ಹಾಲತಿ ಗ್ರಾಮದಲ್ಲಿ ನಡೆದಿದ್ದು ಕರ್ನಾಟಕ ರಾಜ್ಯ ಉಪ ವಲಯ ಅರಣ್ಯಾಧಿಕಾರಿಗಳ ಸಂಘ ಹಾಗೂ ಕರ್ನಾಟಕ ರಾಜ್ಯ ಅರಣ್ಯ ರಕ್ಷಕರ ಮತ್ತು ವೀಕ್ಷಕರ ಸಂಘದ ಸದಸ್ಯರು ಮೈಸೂರು ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ (ಸಿಎಫ್) ಮಾಲತಿ ಪ್ರಿಯಾ ಅವರನ್ನು ಭೇಟಿ ಮಾಡಿ ಶಾಸಕರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದರು.

ಜಮೀನು ವಿಚಾರವಾಗಿ ಅರಣ್ಯ ಇಲಾಖೆ ಹಾಗೂ ರೈತರ ನಡುವೆ ಘರ್ಷಣೆ ಉಂಟಾಗಿದೆ. ಸರ್ವೆ ನಂ 135ರಲ್ಲಿ ಅರಣ್ಯ ಇಲಾಖೆ ನೆಡು ತೋಪು ಬೆಳೆಸಿದೆ. ಅದೇ ಜಮೀನಿಗಾಗಿ ರೈತರು ಬಗರ್ ಹುಕುಂ ಸಾಗುವಳಿ ಅರ್ಜಿ ಸಲ್ಲಿಸಿದ್ದರು. ಜಮೀನು ವಶಪಡಿಸಿಕೊಳ್ಳಲು ಬಂದ ಅಧಿಕಾರಿಗಳ ವಿರುದ್ಧ ರೈತರ ಅಸಮಾಧಾನಗೊಂಡಿದ್ದು, ಗಾಳಿಯಲ್ಲಿ ಗುಂಡು ಹಾರಿಸಿ ರೈತರನ್ನು ಅಧಿಕಾರಿಗಳು ಬೆದರಿಸಿದ್ದಾರೆ.

ನಾಗಮಂಗಲ ತಾಲೂಕು ಹಾಲತಿ ಗ್ರಾಮದಲ್ಲಿ 374 ಎಕರೆ ಪರಿಭಾವಿತ ಅರಣ್ಯ ಪ್ರದೇಶವಿದೆ. ಈ ಪ್ರದೇಶವನ್ನು ಯಾವುದೇ ಇಲಾಖೆಗೂ ವರ್ಗಾವಣೆ ಮಾಡಿಲ್ಲ. ಅರಣ್ಯ ಪ್ರದೇಶವಾಗಿಯೇ ಉಳಿದುಕೊಂಡಿದೆ. ವಿವಾದವೇ ಇಲ್ಲದ ಅರಣ್ಯ ಜಮೀನಿಗೆ ಜಂಟಿ ಸರ್ವೆ ಮಾಡಿಸುವ ಅಗತ್ಯವೇನಿದೆ ಎನ್ನುವುದು ಅರಣ್ಯಾಧಿಕಾರಿಗಳ ಪ್ರಶ್ನೆಯಾಗಿದೆ. ಸುಪ್ರೀಂಕೋರ್ಟ್ ಆದೇಶಾನುಸಾರ ಅರಣ್ಯ ಪ್ರದೇಶ ಸಂರಕ್ಷಣೆ ನಮ್ಮ ಜವಾಬ್ದಾರಿಯಾಗಿದೆ. ಜನಪ್ರತಿನಿಗಳಾದವರು ಇದನ್ನು ಅರ್ಥ ಮಾಡಿಕೊಳ್ಳಬೇಕೇ ವಿನಃ ಅರಣ್ಯಾಧಿಕಾರಿಗಳಿಗೆ ಧಮ್ಕಿ ಹಾಕುವಂತಹ ಕೆಳಮಟ್ಟಕ್ಕೆ ಇಳಿಯಬಾರದು. ಜನರಿಗೆ ದಿಕ್ಕು ತಪ್ಪಿಸಿ ಪ್ರಚೋದನಕಾರಿಯಾಗಿ ಮಾತನಾಡುವುದು ಸರಿಯಲ್ಲ. ಅರಣ್ಯಭೂಮಿ, ಸಾಗುವಳಿ ಭೂಮಿಗಳಿಗಿರುವ ವ್ಯತ್ಯಾಸಗಳನ್ನು ಜನರಿಗೆ ಅರ್ಥೈಸಿಕೊಡದೆ ಜನಪ್ರತಿನಿಧಿ ಎನ್ನುವುದನ್ನು ಮರೆತು ಗೂಂಡಾವರ್ತನೆ ಪ್ರದರ್ಶಿಸಿರುವುದಕ್ಕೆ ಅಧಿಕಾರಿ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ನಾಗಮಂಗಲ ತಾಲೂಕಿನ ಹಾಲತಿ ಗ್ರಾಮದಲ್ಲಿ ಅರಣ್ಯ ಸಂರಕ್ಷಣೆಗೆ ಮುಂದಾಗಿದ್ದ ಅಧಿಕಾರಿಗಳಿಗೆ ಶಾಸಕ ಕೆ.ಸುರೇಶ್‌ಗೌಡರು ತುಚ್ಛ ಮಾತುಗಳಿಂದ ಹೀನಾಯವಾಗಿ ನಿಂದಿಸುತ್ತಾ, ಗುಂಡು ಹೊಡೆಯುವ, ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳನ್ನು ತಮ್ಮ ಗ್ರಾಮಕ್ಕೆ ಬಿಡಬೇಡಿ, ರೈತರಿಗೆ ತೊಂದರೆ ನೀಡುವ ಯಾವುದೇ ಅಧಿಕಾರಿಗೆ ಬೆಂಕಿ ಹಚ್ಚುವಂತೆ ಸುರೇಶ್ ಗೌಡ ಸ್ಥಳೀಯ ನಿವಾಸಿಗಳಿಗೆ  ಸೂಚಿಸಿದ್ದಾರೆ.  ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಶಾಸಕರು  ದೌರ್ಜನ್ಯ ಎಸಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಶಾಸಕರ ವಿರುದ್ಧ ಅರಣ್ಯ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪರಿಸರವಾದಿಗಳು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮೈಲಾರಪಟ್ಟಣ, ಹಂದೇನಹಳ್ಳಿ, ದೇವರ ಮಲ್ಲನಾಯಕನಹಳ್ಳಿ ಗ್ರಾಮಗಳಲ್ಲಿಯೂ ಇಂತಹ ಘಟನೆಗಳು ವರದಿಯಾಗುತ್ತಿದ್ದು, ಅರಣ್ಯ ಪ್ರದೇಶದಲ್ಲಿ ಗ್ರಾಮಸ್ಥರು ಮರಗಳನ್ನು ಕಡಿದು ಜಮೀನಿನಲ್ಲಿ ಸಾಗುವಳಿ ಮಾಡುತ್ತಿದ್ದಾರೆ. ಅರಣ್ಯ ಸಿಬ್ಬಂದಿ ತಡೆಯಲು ಮುಂದಾದಾಗ ಸುರೇಶ್ ಗೌಡರು ಗ್ರಾಮಸ್ಥರಿಗೆ ಅಟ್ರಾಸಿಟಿ ಪ್ರಕರಣ ದಾಖಲಿಸುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.

ಶನಿವಾರ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದು ಸಂಘದ ಅಧ್ಯಕ್ಷ ಸಿದ್ದರಾಜು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. ಭೂಮಿ ಅರಣ್ಯ ಇಲಾಖೆಗೆ ಸೇರಿದ್ದು, ಅದನ್ನು ರಕ್ಷಿಸುವುದು ಅರಣ್ಯಾಧಿಕಾರಿಗಳ ಕರ್ತವ್ಯ. ಹೀಗಾಗಿ ಶಾಸಕರ ವಿರುದ್ಧ ದೂರು ದಾಖಲಿಸುತ್ತೇವೆ ಎಂದು ಹೇಳಿದ್ದಾರೆ.

ಜೆಡಿಎಸ್ ಶಾಸಕರೊಬ್ಬರು ಅರಣ್ಯ ಸಿಬ್ಬಂದಿಯನ್ನು ನಿಂದಿಸಿರುವುದು ಕೇವಲ ಇದೊಂದು ಘಟನೆ ಮಾತ್ರವಲ್ಲ. ರಾಜ್ಯದಾದ್ಯಂತ ಅರಣ್ಯ ಅಧಿಕಾರಿಗಳು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಾಗ ಪ್ರತಿದಿನವೂ ಕಿರುಕುಳ ಅಥವಾ ದೌರ್ಜನ್ಯವನ್ನು ಎದುರಿಸುತ್ತಾರೆ ಎಂದು ಹೇಳಿದ್ದಾರೆ. ಒಂದು ತಿಂಗಳಲ್ಲಿ ರಾಜಕಾರಣಿಗಳು ಮತ್ತು ಪ್ರಭಾವಿ ವ್ಯಕ್ತಿಗಳಿಂದ ಕನಿಷ್ಠ ಮೂರು ಕಿರುಕುಳ, ನಿಂದನೆ, ಸಾವು ಮತ್ತು ಅತ್ಯಾಚಾರ ಬೆದರಿಕೆ ಪ್ರಕರಣಗಳು ಬರುತ್ತವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸರ್ಕಾರಿ ನೌಕರರನ್ನು ಕರ್ತವ್ಯಕ್ಕೆ ಅಡ್ಡಿಪಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅರಣ್ಯ ಸಿಬ್ಬಂದಿ ಆಗ್ರಹಿಸಿದ್ದಾರೆ. ಅರಣ್ಯ ಸೇವೆಗಳನ್ನು ಕೇಂದ್ರ ಸೇವೆಗಳ ಪಟ್ಟಿಯ ಭಾಗವನ್ನಾಗಿ ಮಾಡಬೇಕು ಎಂದು ಪಿಸಿಸಿಎಫ್‌ಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳ ಸಂಘ ಒತ್ತಾಯಿಸಿದೆ.

ಹೆಚ್ಚುತ್ತಿರುವ ಪ್ರಕರಣಗಳಿಂದ ಬೇಸರಗೊಂಡಿರುವ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಅರಣ್ಯ ಕರ್ತವ್ಯದ ಸಿಬ್ಬಂದಿಗೆ ತರಬೇತಿ ನೀಡುವುದರೊಂದಿಗೆ, ಅಂತಹ ಸಂದರ್ಭಗಳನ್ನು ನಿಭಾಯಿಸುವ ಬಗ್ಗೆ ನೇಮಕಾತಿ ತರಬೇತಿಯನ್ನು ಪ್ರಾರಂಭಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com