ಸ್ವಾತಂತ್ರ್ಯ ಅಮೃತ ಮಹೋತ್ಸವ, ಕ್ವಿಟ್ ಇಂಡಿಯಾ ಚಳವಳಿಗೆ 80 ವರ್ಷ: ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ರಾಜ್ಯಪಾಲರ ಭೇಟಿ

ಭಾರತ ದೇಶ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಿಸುತ್ತಿರುವುದರ ಮಧ್ಯೆ ಬ್ರಿಟಿಷರನ್ನು ದೇಶ ಬಿಟ್ಟು ತೊಲಗಿಸಿ ಚಳವಳಿಯಾದ ಆಂಗ್ಲಭಾಷೆಯಲ್ಲಿ ಜನಪ್ರಿಯವಾದ Quit India Movement ಗೆ ಈಗ 80ನೇ ವಾರ್ಷಿಕೋತ್ಸವ ಘಳಿಗೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
Updated on

ಬೆಂಗಳೂರು: ಭಾರತ ದೇಶ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಿಸುತ್ತಿರುವುದರ ಮಧ್ಯೆ ಬ್ರಿಟಿಷರನ್ನು ದೇಶ ಬಿಟ್ಟು ತೊಲಗಿಸಿ ಚಳವಳಿಯಾದ ಆಂಗ್ಲಭಾಷೆಯಲ್ಲಿ ಜನಪ್ರಿಯವಾದ Quit India Movement ಗೆ ಈಗ 80ನೇ ವಾರ್ಷಿಕೋತ್ಸವ ಘಳಿಗೆ.

ಕ್ವಿಟ್ ಇಂಡಿಯಾ ಚಳವಳಿ ಆರಂಭವಾಗಿದ್ದು ಆಗಸ್ಟ್ 9, 1942ರಲ್ಲಿ, ಆ ದಿನ ದೇಶದ ಪಿತಾಮಹ ಮಹಾತ್ಮಾ ಗಾಂಧಿ 'ಮಾಡು ಇಲ್ಲವೇ ಮಡಿ' ಎಂಬ ಜನಪ್ರಿಯ ಘೋಷವಾಕ್ಯದೊಂದಿಗೆ ಚಳವಳಿಗೆ ಚಾಲನೆ ನೀಡಿದ್ದರು. ಬ್ರಿಟಿಷರಡಿಯಲ್ಲಿ ಭಾರತೀಯರು ಗುಲಾಮರ ರೀತಿಯಲ್ಲಿ ಜೀವನ ನಡೆಸುವುದನ್ನು ಕೊನೆಗಾಣಿಸಿ ಇಂಗ್ಲಿಷರನ್ನು ಭಾರತದಿಂದ ಓಡಿಸಲು ಆರಂಭವಾದ ಉಗ್ರ ಹೋರಾಟವಿದು. 

ಭಾರತದ ಸ್ವಾತಂತ್ರ್ಯ ಇತಿಹಾಸದಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ವಿಶೇಷ ಸ್ಥಾನಮಾನವಿದೆ. ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಹಿರಿಯ ಮತ್ತು ಮಡಿದುಹೋದ ಸ್ವಾತಂತ್ರ್ಯ ಹೋರಾಟಗಾರರನ್ನು ಭಾರತೀಯರು ನೆನಪಿಸಿಕೊಳ್ಳುವುದು ವಾಡಿಕೆ. 

ಅಂದು ಕರ್ನಾಟಕದ ಇತಿಹಾಸವನ್ನು ತೆಗೆದುಕೊಂಡರೆ ಕ್ವಿಟ್ ಇಂಡಿಯಾ ಚಳವಳಿ ಹಿಂಸಾರೂಪಕ್ಕೆ ತಿರುಗಿತ್ತು. ಧಾರವಾಡ, ಬೆಳಗಾವಿ, ಮೈಸೂರು, ವಿಜಯಪುರ, ಬೆಂಗಳೂರು ನಗರಗಳಂತಹ ಜಿಲ್ಲೆಗಳಲ್ಲಿ ಹಲವು ವಿದ್ಯಾರ್ಥಿಗಳು, ಯುವಕರು ಸ್ವಾತಂತ್ರ್ಯ ಚಳವಳಿಗೆ ಧುಮುಕಿದ್ದರು. ಈ ನಿಟ್ಟಿನಲ್ಲಿ ಕ್ವಿಟ್ ಇಂಡಿಯಾ ಚಳವಳಿಯೂ ಭಾರತದ ಇತಿಹಾಸದಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದೆ.

ಸ್ವಾತಂತ್ರ್ಯ ಹೋರಾಟಗಾರರ ಮನೆಗಳಿಗೆ ರಾಜ್ಯಪಾಲರ ಭೇಟಿ: ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ದೇಶದ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಮತ್ತು ಕ್ವಿಟ್ ಇಂಡಿಯಾ ಚಳವಳಿಯ 80ನೇ ವರ್ಷಾಚರಣೆ ಸಂದರ್ಭದಲ್ಲಿ ವಿಶಿಷ್ಟ ಕೆಲಸಕ್ಕೆ ಮುಂದಾಗಿದ್ದಾರೆ.

ಸಾಮಾನ್ಯವಾಗಿ ಸ್ವಾತಂತ್ರ್ಯ ದಿನಾಚರಣೆ ದಿನ ರಾಜಭವನದ ಗಾಜಿನ ಮನೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಕರೆದು ಅವರ ಜೊತೆ ರಾಜ್ಯಪಾಲರು ಚಹಾ ಸೇವನೆ ಮಾಡುವುದು ಸಂಪ್ರದಾಯ. ಆದರೆ ಈ ಬಾರಿ ರಾಜ್ಯಪಾಲರೊಬ್ಬರು ಮೊದಲ ಬಾರಿಗೆ ಸ್ವಾತಂತ್ರ್ಯ ಹೋರಾಟಗಾರರ ಮನೆಗಳಿಗೆ ಭೇಟಿ ಕೊಟ್ಟು ಅವರನ್ನು ಸನ್ಮಾನಿಸಲಿದ್ದಾರೆ.

ರಾಜ್ಯಪಾಲರ ಈ ಯೋಜನೆ ಬಗ್ಗೆ ಅವರ ವಿಶೇಷ ಕಾರ್ಯದರ್ಶಿ ಆರ್ ಪ್ರಭುಶಂಕರ್ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅವರಿಗೆ ಪತ್ರ ಬರೆದಿದ್ದರಂತೆ. ಅದಕ್ಕೆ ಸರ್ಕಾರದಿಂದ ಒಪ್ಪಿಗೆ ಸಿಕ್ಕಿದೆ.

ರಾಜ್ಯಪಾಲರ ಭೇಟಿಗೆ ಇಬ್ಬರು ಹೋರಾಟಗಾರರ ಆಯ್ಕೆ: ರಾಜ್ಯಪಾಲರ ಭೇಟಿ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕೂಡ ಜೊತೆಯಾಗಲಿದ್ದಾರೆ. ಬೆಂಗಳೂರಿನ ಮಲ್ಲೇಶ್ವರದಲ್ಲಿರುವ 101 ವರ್ಷದ ನಾಗಭೂಷಣ್ ರಾವ್ ಮತ್ತು ಹಲಸೂರಿನ ಆರ್ ನಾರಾಯಣಮ್ಮ ಅವರನ್ನು ಆಯ್ಕೆ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ರಾಜ್ಯಪಾಲರು ಜಿಲ್ಲಾಧಿಕಾರಿಗಳು ಆಯಾ ಜಿಲ್ಲೆಗಳಲ್ಲಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರರನ್ನು ಗುರುತಿಸಿ ಅವರ ಮನೆಗೆ ತೆರಳಿ ಸನ್ಮಾನ ಮಾಡಲು ಸೂಚಿಸುವಂತೆ ಕೂಡ ಪತ್ರ ಬರೆದಿದ್ದರು.

ಇಂದು ಹಲವು ಸ್ವಾತಂತ್ರ್ಯ ಹೋರಾಟಗಾರರು ಬದುಕುಳಿದಿಲ್ಲ. ಇಂದು ಇರುವವರು 100 ವರ್ಷ ದಾಟಿದವರಾಗಿದ್ದಾರೆ. ಅವರು ದೇಶಕ್ಕಾಗಿ ಮಾಡಿದ ತ್ಯಾಗ ಮತ್ತು ಅವರ ವಯೋಮಾನ ಗುರುತಿಸಿ ರಾಜ್ಯಪಾಲರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಅವರ ಕಚೇರಿ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com