ಆರಾಧನಾ ಕಾರ್ಯಕ್ರಮಕ್ಕಾಗಿ 49.74 ಕೋಟಿ ರೂ. ಅನುದಾನ ಬಿಡುಗಡೆ
ಬೆಂಗಳೂರು: 2022-23 ನೇ ಸಾಲಿನ ಆರಾಧನಾ ಕಾರ್ಯಕ್ರಮಕ್ಕಾಗಿ 49.74 ಕೋಟಿ ರೂಪಾಯಿಗಳ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಅವರು ಶನಿವಾರ ತಿಳಿಸಿದ್ದಾರೆ.
ಪರಿಶಿಷ್ಟ ಜಾತಿ, ಪಂಗಡ, ಲಂಬಾಣಿ ತಾಂಡಾ, ವಡ್ಡರ ಕೇರಿ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗಗಳು ವಾಸವಿರುವ ಸ್ಥಳಗಳಲ್ಲಿನ ದೇವಾಲಯ, ಪೂಜಾ ಮಂದಿರ, ಹಾಗೂ ಪ್ರಾರ್ಥನಾ ಮಂದಿರಗಳ ದುರಸ್ತಿ, ಜೀರ್ಣೋದ್ಧಾರ ಹಾಗೂ ನವ ನಿರ್ಮಾಣಗಳ ಯೋಜನೆಗೆ ಸಂಬಂಧಿಸಿದ ಆರಾಧನಾ ಯೋಜನೆಗೆ ಮುಜರಾಯಿ ಇಲಾಖೆಯಿಂದ ಪ್ರಸ್ತುತ 2022-23ನೇ ಸಾಲಿನಲ್ಲಿ 49.74 ಕೋಟಿ ರೂಪಾಯಿಗಳ ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ ಎಂದು ಮುಜರಾಯಿ ಹಜ್ ಮತ್ತು ವಕ್ಫ್ ಸಚಿವರಾದ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮ ಪ್ರಕಟಣೆ ಬಿಡುಗಡೆಗೊಳಿಸಿರುವ ಅವರು, 19.09.2011 ರ ಸರಕಾರದ ಆದೇಶದಲ್ಲಿ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯ ಮಾರ್ಗಸೂಚಿಗಳ ಅನ್ವಯ 2022-23 ನೇ ಸಾಲಿನ ಆರಾಧನಾ ಕಾರ್ಯಕ್ರಮಕ್ಕಾಗಿ ವಿಧಾನಸಭಾ ಕ್ಷೇತ್ರವಾರು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಜನ ಸಂಖ್ಯೆ ಆಧಾರದಲ್ಲಿ ಎಸ್.ಸಿ.ಪಿ ಯಡಿಯಲ್ಲಿ ರೂ. 19.38 ಕೋಟಿ ಹಾಗೂ ಟಿ.ಎಸ್.ಪಿ ಯೋಜನೆಯಡಿ ರೂ. 30.36 ಕೋಟಿ ಒಟ್ಟಾರೆ 49.74 ಕೋಟಿಗಳ ಅನುದಾನವನ್ನು ವಿಧಾನಸಭಾ ಕ್ಷೇತ್ರಗಳ ಸಂಖ್ಯೆಯ ಆಧಾರದಲ್ಲಿ 31 ಜಿಲ್ಲೆಗಳಿಗೂ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ