
ಬೆಂಗಳೂರು: ತುಮಕೂರು ಜಿಲ್ಲೆಯ ಶಿರಾ ಬಳಿಯ ಕಳ್ಳಂಬೆಳ್ಳದಲ್ಲಿ ಗುರುವಾರ ನಸುಕಿನ ಜಾವ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಸರ್ಕಾರದಿಂದ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಈ ಬಗ್ಗೆ ಮಾತನಾಡಿದ ಅವರು, ರಸ್ತೆ ಅಪಘಾತದಲ್ಲಿ ಮೃತಪಟ್ಟವರೆಲ್ಲರೂ ರಾಯಚೂರು ಮೂಲದ ಬಡ ಕೂಲಿ ಕಾರ್ಮಿಕರಾಗಿದ್ದಾರೆ. ಘಟನೆ ತೀವ್ರ ದುಃಖ ತಂದಿದೆ. ಈಗಾಗಲೇ ಪ್ರಧಾನ ಮಂತ್ರಿಗಳು ಮೃತರ ಕುಟುಂಬಸ್ಥರಿಗೆ 2 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರ ಚಿಕಿತ್ಸೆಗೆ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ರಾಜ್ಯ ಸರ್ಕಾರ ವತಿಯಿಂದ 5 ಲಕ್ಷ ರೂಪಾಯಿ ಕೊಡಲು ನಿರ್ಧರಿಸಿದ್ದು ಈ ಬಗ್ಗೆ ತುಮಕೂರು ಜಿಲ್ಲಾಧಿಕಾರಿ ಜೊತೆ ಮಾತನಾಡಿದ್ದೇನೆ ಎಂದರು.
ಗಾಯಗೊಂಡವರ ಚಿಕಿತ್ಸೆಯ ವೆಚ್ಚವನ್ನು ಸಂಪೂರ್ಣವಾಗಿ ಸರ್ಕಾರವೇ ಭರಿಸಲಿದೆ. ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ಕೊಡಿಸಲು ವ್ಯವಸ್ಥೆ ಮಾಡಲಾಗುತ್ತಿದ್ದು ಇಬ್ಬರನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದರು.
ಅಪಘಾತ ಹೇಗಾಯಿತು?: ಇಂದು ನಸುಕಿನ ಜಾವ 4 ಗಂಟೆ ಸುಮಾರಿಗೆ ತುಮಕೂರು ಬಳಿ ರಾಷ್ಟ್ರೀಯ ಹೆದ್ದಾರಿ-48 ನಲ್ಲಿ ಸಂಭವಿಸಿದ ಅಪಘಾತದಲ್ಲಿ ರಾಯಚೂರು ಮೂಲದ ಒಂಬತ್ತು ಕಾರ್ಮಿಕರು ಮೃತಪಟ್ಟಿದ್ದು, 14 ಮಂದಿ ಗಾಯಗೊಂಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ-48 ರ ಬಾಲೇನಹಳ್ಳಿ ಗೇಟ್‌ನಲ್ಲಿ ಟ್ರಕ್‌ಗೆ ಕ್ರೂಸರ್ ಜೀಪ್ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ನಾಲ್ವರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿದಂತೆ ಒಂಬತ್ತು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಇನ್ನು 14 ಮಂದಿ ಗಾಯಗೊಂಡಿದ್ದಾರೆ. ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಹಲವರು ಘಟನೆ ಬಗ್ಗೆ ಸಂತಾಪ ಸೂಚಿಸಿದ್ದು, ಪ್ರಧಾನಿ ಪರಿಹಾರವನ್ನು ಘೋಷಿಸಿದ್ದಾರೆ.
ಸಂತ್ರಸ್ತರೆಲ್ಲರೂ ಕೂಲಿ ಕಾರ್ಮಿಕರಾಗಿದ್ದು, ರಾಯಚೂರು ಜಿಲ್ಲೆಯ ಕುರಕುಂದ ಸೇರಿದಂತೆ ವಿವಿಧ ಗ್ರಾಮಗಳಿಂದ ಬಂದವರು. ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಉದ್ಯೋಗ ಅರಸಿ ಬೆಂಗಳೂರಿಗೆ ತೆರಳುತ್ತಿದ್ದರು. ಮೃತರನ್ನು ಚಾಲಕ ಕೃಷ್ಣಪ್ಪ, ಸುಜಾತ, ವಿನೋದ, ಲಕ್ಷ್ಮಿ ಎಂದು ಗುರುತಿಸಲಾಗಿದ್ದು, ಉಳಿದ ಐವರ ಗುರುತು ಪತ್ತೆಯಾಗಬೇಕಿದೆ. ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದವರನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ವೈಎಸ್ ಪಾಟೀಲ್, ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಶಹಾಪುರವಾಡ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಟ್ರಕ್ ನ್ನು ಹಿಂದಿಕ್ಕುವ ಯತ್ನದಲ್ಲಿ ಕ್ರೂಸರ್ ಚಾಲಕ ಅಪಘಾತ ಪೀಡಿತ ವಲಯ ಎಂದು ಹೇಳಲಾದ ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡು ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಮಲ್ಟಿ ಯುಟಿಲಿಟಿ ವಾಹನದೊಳಗೆ 24 ಜನರು ತಮ್ಮ ವಸ್ತುಗಳನ್ನು ಪ್ಯಾಕ್ ಮಾಡಿಕೊಂಡು ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು (MUV). ಕಳ್ಳಂಬೆಳ್ಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ಇದೊಂದು ದುರದೃಷ್ಟಕರ ಘಟನೆ, ಡಿಸಿ ಮತ್ತು ಎಸ್ಪಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದೇನೆ ಎಂದಿದ್ದಾರೆ.
Advertisement