'ಬೊಮ್ಮಾಯಿ ಸರ್ಕಾರ ಭ್ರಷ್ಟ ಮತ್ತು ನಿರ್ಜೀವ': ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ
ಮೈಸೂರು: ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಭ್ರಷ್ಟ ಮತ್ತು ನಿರ್ಜೀವ ಎಂದು ವ್ಯಾಖ್ಯಾನಿಸಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳಲ್ಲಿ ಶೇಕಡಾ 90ರಷ್ಟನ್ನು ಈಡೇರಿಸಿಲ್ಲ ಎಂದು ಆರೋಪಿಸಿದ್ದಾರೆ.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘ (MDJA) ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ, ರಾಜ್ಯ ಸರ್ಕಾರ ತನ್ನದೇ ಸಚಿವರ ವಿರುದ್ಧ ಭ್ರಷ್ಟಾಚಾರದ ನ್ಯಾಯಾಂಗ ತನಿಖೆಯನ್ನು ಪ್ರಾರಂಭಿಸಲು ವಿಫಲವಾಗಿದೆ,ಸರ್ಕಾರ ಭ್ರಷ್ಟಾಚಾರವನ್ನು ಬೆಂಬಲಿಸುತ್ತಿದೆ ಎಂದು ಇದು ತೋರಿಸುತ್ತದೆ ಎಂದು ಆಪಾದಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗಂಭೀರ ಆರೋಪಗಳು ಬಂದಾಗ, ಆರೋಪವನ್ನು ಸಮರ್ಥಿಸಿಕೊಳ್ಳುವ ಬದಲು ಸ್ವತಂತ್ರ ಸಂಸ್ಥೆಯಿಂದ ತನಿಖೆಗೆ ಸರ್ಕಾರ ಆದೇಶಿಸಬೇಕು. ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಗುತ್ತಿಗೆದಾರರ ಸಂಘದವರು ಕೂಡ ಕಾಮಗಾರಿಗೆ ಶೇ 40ರಷ್ಟು ಕಮಿಷನ್ ಕೇಳುತ್ತಿದ್ದಾರೆ ಎಂದು ಆರೋಪ ಮಾಡಿರುವಾಗ ಇದಕ್ಕಿಂತ ದೃಷ್ಟಾಂತ ಬೇರೆ ಬೇಕೆ ಎಂದು ಕೇಳಿದರು.
ಗುತ್ತಿಗೆದಾರರ ಸಂಘದ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಒಟ್ಟು ಯೋಜನಾ ವೆಚ್ಚದಲ್ಲಿ ಗುತ್ತಿಗೆದಾರರು ಶೇಕಡಾ 20ರಷ್ಟು ಕಮಿಷನ್ ಇಟ್ಟುಕೊಂಡು ಶೇಕಡಾ 15ರಷ್ಟು ಜಿಎಸ್ ಟಿಗೆ ಹೋಗುತ್ತದೆ. ಉಳಿದವುಗಳೊಂದಿಗೆ, ಯೋಜನೆಯನ್ನು ಹೇಗೆ ಪೂರ್ಣಗೊಳಿಸಬಹುದು, ಇದು ಕೆಲಸದ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವಂತೆ ಮಾಡುತ್ತದೆ ಎಂದು ಸಮಸ್ಯೆಯನ್ನು ಸಿದ್ದರಾಮಯ್ಯ ಬಿಚ್ಚಿಟ್ಟರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ