ಡಿ.6ರಂದು ಬೆಳಗಾವಿಗೆ ಹೋಗಿಯೇ ಹೋಗುತ್ತೇನೆ, ನನಗೆ ಸಿಎಂ ಬೊಮ್ಮಾಯಿ ಪತ್ರ ಬಂದಿಲ್ಲ: ಮಹಾರಾಷ್ಟ್ರ ಸಚಿವ ಚಂದ್ರಕಾಂತ್ ಪಾಟೀಲ್

ಕರ್ನಾಟಕ-ಮಹಾರಾಷ್ಟ್ರ ಮಧ್ಯೆ ಗಡಿ ವಿವಾದ ಮುಂದುವರಿಯುತ್ತಿರುವುದರ ಮಧ್ಯೆ ನಾಡಿದ್ದು ಡಿಸೆಂಬರ್ 6ರಂದು ಬೆಳಗಾವಿಗೆ ಹೋಗಿಯೇ ತೀರುತ್ತೇನೆ ಎಂದು ಮಹಾರಾಷ್ಟ್ರದ ಸಚಿವ ಚಂದ್ರಕಾಂತ್ ಪಾಟೀಲ್ ಹೇಳಿದ್ದಾರೆ.
ಮಹಾರಾಷ್ಟ್ರ ಸಟಿವ ಚಂದ್ರಕಾಂತ್ ಪಾಟೀಲ್(ಸಂಗ್ರಹ ಚಿತ್ರ)
ಮಹಾರಾಷ್ಟ್ರ ಸಟಿವ ಚಂದ್ರಕಾಂತ್ ಪಾಟೀಲ್(ಸಂಗ್ರಹ ಚಿತ್ರ)
Updated on

ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಮಧ್ಯೆ ಗಡಿ ವಿವಾದ ಮುಂದುವರಿಯುತ್ತಿರುವುದರ ಮಧ್ಯೆ ನಾಡಿದ್ದು ಡಿಸೆಂಬರ್ 6ರಂದು ಬೆಳಗಾವಿಗೆ ಹೋಗಿಯೇ ತೀರುತ್ತೇನೆ ಎಂದು ಮಹಾರಾಷ್ಟ್ರದ ಸಚಿವ ಚಂದ್ರಕಾಂತ್ ಪಾಟೀಲ್ ಹೇಳಿದ್ದಾರೆ.

ಮಹಾರಾಷ್ಟ್ರ ಸಚಿವರುಗಳಾದ ಚಂದ್ರಕಾಂತ್ ಪಾಟೀಲ್ ಮತ್ತು ಶುಂಭುರಾಜ್ ದೇಸಾಯಿಯವರು ಇಂದು ಬೆಳಗಾವಿಗೆ ಕಾರ್ಯಕ್ರಮಕ್ಕೆ ಭೇಟಿಯಾಗಬೇಕಾಗಿತ್ತು. ಆದರೆ ಬೆಳಗಾವಿಯಲ್ಲಿ ಗಡಿ ವಿವಾದ, ಕನ್ನಡ ಬಾವುಟ ಹಾರಿಸಿದ್ದ ವಿದ್ಯಾರ್ಥಿ ಮೇಲೆ ಹಲ್ಲೆ ವಿಚಾರದಲ್ಲಿ ಗಲಾಟೆಯಿಂದಾಗಿ ಭದ್ರತೆ ದೃಷ್ಟಿಯಿಂದ ಮುಂದೂಡಲ್ಪಟ್ಟಿತ್ತು. 

ಆದರೆ ಇದೀಗ ಬೆಳಗಾವಿಗೆ ಹೋಗಿಯೇ ತೀರುತ್ತೇವೆ ಎಂದು ಮಹಾರಾಷ್ಟ್ರದ ಗಡಿ ಸಮನ್ವಯ ಸಚಿವ ಚಂದ್ರಕಾಂತ ಪಾಟೀಲ್ ತಿಳಿಸಿದ್ದಾರೆ. ಕರ್ನಾಟಕಕ್ಕೆ ಭೇಟಿ ನೀಡದಂತೆ ಸಂದೇಶ ರವಾನಿಸಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಈ ಹಿಂದೆ ತಿಳಿಸಿದ್ದರು. ಆದರೆ ಸಿಎಂ ಪತ್ರಕ್ಕೂ ಕ್ಯಾರೆ ಎನ್ನದೆ ಸಚಿವ ಚಂದ್ರಕಾಂತ ಪಾಟೀಲ್ ಮೊಂಡುತನ ಮುಂದುವರೆಸಿದ್ದಾರೆ.

ಇಂದು ಮುಂಬೈನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಚಂದ್ರಕಾಂತ ಪಾಟೀಲ್, ನನಗೆ ಯಾವುದೇ ಫ್ಯಾಕ್ಸ್ ಆಗಲಿ, ಬೊಮ್ಮಾಯಿ ಪತ್ರವಾಗಲಿ ತಲುಪಿಲ್ಲ. ನಾನು ಇಂದು ಬೆಳಗಾವಿಗೆ ಹೋಗಬೇಕಿತ್ತು. ಆದರೆ ಡಿಸೆಂಬರ್​ 6ರಂದು ಡಾ.ಬಿ.ಆರ್​.ಅಂಬೇಡ್ಕರ್​ ಪರಿನಿರ್ವಾಣ ದಿನ ಇದೆ. ಅಂದು ಬೆಳಗಾವಿಯಲ್ಲಿ ಹಲವು ಕಾರ್ಯಕ್ರಮಗಳು ಇರುತ್ತವೆ. ಎಲ್ಲರೂ ಸಹ ನನಗೆ ಡಿಸೆಂಬರ್ 6ರಂದು ಆಗಮಿಸುವಂತೆ ವಿನಂತಿಸಿದ್ದಾರೆ. ನಾನು ಡಿಸೆಂಬರ್ 6ರಂದೇ ಬೆಳಗಾವಿಗೆ ಭೇಟಿ ನೀಡುತ್ತೇನೆ. ಗಡಿ ಭಾಗದ ಜನ, ಗಡಿ ಹೋರಾಟದಲ್ಲಿ ಮೃತಪಟ್ಟ ಹುತಾತ್ಮರ ನಿವಾಸಕ್ಕೆ ಭೇಟಿ ನೀಡುತ್ತೇನೆ. ಈ ಪೈಕಿ ಅಂಬೇಡ್ಕರ್ ಉದ್ಯಾನವನದಲ್ಲಿರುವ ಬೃಹತ್ ಅಂಬೇಡ್ಕರ್ ಪ್ರತಿಮೆಗೆ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದೇನೆ ಎಂದು ತಿಳಿಸಿದ್ದಾರೆ.

ನಾವು ಯಾವುದೇ ಸಂಘರ್ಷ ಮಾಡಲು ಬೆಳಗಾವಿಗೆ ಹೋಗುತ್ತಿಲ್ಲ. 865 ಮರಾಠಿ ಭಾಷಿಕ ಹಳ್ಳಿಗಳಿಗೆ ಮಹಾರಾಷ್ಟ್ರ ಸರ್ಕಾರ ಏನು ಸೌಲಭ್ಯ ನೀಡಬಹುದು ಎಂಬ ಬಗ್ಗೆ ಚರ್ಚಿಸಲು ತೆರಳುತ್ತಿದ್ದೇನೆ. 865 ಹಳ್ಳಿಗಳು ಸಮಾಧಾನದಿಂದ ಇದ್ದಾರಂದ್ರೆ ಅದರ ಲಾಭ ನಿಮಗೆ ಇದೆ. ಕರ್ನಾಟಕ ಸರ್ಕಾರದ ನಾಗರಿಕರಿಗೆ ನೀವು ಅವರಿಗೆ ಸೌಲಭ್ಯ ನೀಡಲೇಬೇಕಾಗುತ್ತದೆ. ಆದರೆ 865 ಮರಾಠಿ ಭಾಷಿಕ ಜನರನ್ನು ಮಹಾರಾಷ್ಟ್ರದ ನಾಗರಿಕರೆಂದು ನಾವು ಸೌಲಭ್ಯ ನೀಡುತ್ತೇವೆ. ಯಾವುದೇ ನಿಷೇಧ ಹೇರಿದರೂ ನಾನು ನಿಲ್ಲುವ ಮನುಷ್ಯನಲ್ಲ. ನನಗೆ ನೀವು ಧಮ್ಕಿ ನೀಡಬೇಡಿ. ನಾವು ಸಮನ್ವಯದಿಂದ ಜನರ ಮನಸ್ಥಿತಿ ತಿಳಿದು ಅವರಿಗೆ ಮಹಾರಾಷ್ಟ್ರ ಸರ್ಕಾರದ ನಿಲುವು ತಿಳಿಸಲು ತೆರಳುತ್ತಿದ್ದೇವೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com