ಗಡಿ ವಿವಾದ: ಮುಂದಿನ ವಾರ ಕರ್ನಾಟಕ-ಮಹಾರಾಷ್ಟ್ರ ಸಿಎಂಗಳ ಜೊತೆ ಅಮಿತ್ ಶಾ ಮಾತುಕತೆ, ಸೋಮವಾರ ಕೇಂದ್ರಕ್ಕೆ ಸಂಸದರ ನಿಯೋಗ

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ಮತ್ತೆ ತಾರಕಕ್ಕೇರಿದೆ. ಗಡಿ ಭಾಗದ ಜನರಿಗೆ, ಅಲ್ಲಿನ ಜನಪ್ರತಿನಿಧಿಗಳಿಗೆ ಮತ್ತು ಎರಡೂ ರಾಜ್ಯಗಳ ಸರ್ಕಾರಕ್ಕೆ ಇದು ಬಹಳ ಮುಖ್ಯ ವಿಷಯವಾಗಿದೆ. ಕಳೆದ ಹತ್ತು ಹದಿನೈದು ದಿನಗಳಿಂದ ಬೆಳಗಾವಿ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. 
ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ನಿಜಲಿಂಗಪ್ಪ ಅವರ ಜನ್ಮದಿನದ ಅಂಗವಾಗಿ ವಿಧಾನಸೌಧದಲ್ಲಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿ ಪುಸ್ತಕ ಬಿಡುಗಡೆ
ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ನಿಜಲಿಂಗಪ್ಪ ಅವರ ಜನ್ಮದಿನದ ಅಂಗವಾಗಿ ವಿಧಾನಸೌಧದಲ್ಲಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿ ಪುಸ್ತಕ ಬಿಡುಗಡೆ

ಬೆಂಗಳೂರು: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ಮತ್ತೆ ತಾರಕಕ್ಕೇರಿದೆ. ಗಡಿ ಭಾಗದ ಜನರಿಗೆ, ಅಲ್ಲಿನ ಜನಪ್ರತಿನಿಧಿಗಳಿಗೆ ಮತ್ತು ಎರಡೂ ರಾಜ್ಯಗಳ ಸರ್ಕಾರಕ್ಕೆ ಇದು ಬಹಳ ಮುಖ್ಯ ವಿಷಯವಾಗಿದೆ. ಕಳೆದ ಹತ್ತು ಹದಿನೈದು ದಿನಗಳಿಂದ ಬೆಳಗಾವಿ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. 

ಇದಕ್ಕೆ ಸಂಬಂಧಪಟ್ಟಂತೆ ಇಂದು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯದ ನಿಲುವು ಮತ್ತು ವಾಸ್ತವಾಂಶಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮುಂದಿಟ್ಟಿದ್ದೇನೆ. ಅವರು ಮುಂದಿನ ವಾರ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸುವ ಸಾಧ್ಯತೆಯಿದೆ ಎಂದಿದ್ದಾರೆ.

ಗಡಿ ವಿವಾದ ಸಂಬಂಧಪಟ್ಟಂತೆ ಸದ್ಯದಲ್ಲಿಯೇ ಸರ್ವಪಕ್ಷ ಸಭೆ ಕರೆಯಲಾಗುವುದು ಎಂಬುದನ್ನು ಸಹ ಸಿಎಂ ಬೊಮ್ಮಾಯಿಯವರು ಹೇಳಿದ್ದಾರೆ. 

ಮಹಾರಾಷ್ಟ್ರದ ವಿರೋಧ ಮೈತ್ರಿಕೂಟ ಮಹಾ ವಿಕಾಸ್ ಅಘಾಡಿಯ ಸಂಸದರ ನಿಯೋಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ನಿನ್ನೆ ಭೇಟಿ ಮಾಡಿದ ಬೆನ್ನಲ್ಲೆ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಮಹಾರಾಷ್ಟ್ರದ ನಿಯೋಗವು ಕೇಂದ್ರ ಗೃಹಸಚಿವರನ್ನು ಭೇಟಿಯಾಗಿರುವುದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ, ನಾವು ಕೂಡ ಗೃಹಸಚಿವರನ್ನು ಭೇಟಿಯಾಗಿ ರಾಜ್ಯದ ನ್ಯಾಯ ಸಮ್ಮತ ನಿಲುವನ್ನು ತಿಳಿಸುತ್ತೇವೆ ಎಂದು ಬೊಮ್ಮಾಯಿ ಹೇಳಿದ್ದಾರೆ. 

ಮಹಾರಾಷ್ಟ್ರದ ನಿಯೋಗ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿರುವುದು ಯಾವುದೇ ವ್ಯತ್ಯಾಸ ಆಗುವುದಿಲ್ಲ. ಈ ಹಿಂದೆ ಕೂಡ ಮಹಾರಾಷ್ಟ್ರ ಈ ರೀತಿಯ ಪ್ರಯತ್ನ ಮಾಡಿದೆ‌. ಈ ಪ್ರಕರಣ ಸುಪ್ರೀಂ ಕೊರ್ಟ್​​ನಲ್ಲಿದೆ. ಸುಪ್ರೀಂ ಕೋರ್ಟ್​ನಲ್ಲಿ ನಮ್ಮ ನ್ಯಾಯ ಸಮ್ಮತ ಪ್ರಕರಣ ಗಟ್ಟಿಯಾಗಿದೆ. ಗಡಿ ವಿಚಾರದಲ್ಲಿ ನಮ್ಮ ಸರ್ಕಾರ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸಿಎಂ ಬೊಮ್ಮಾಯಿ ಟ್ವೀಟ್ ಮೂಲಕ ಕೂಡ ತಿಳಿಸಿದ್ದಾರೆ. 

ಸೋಮವಾರ ರಾಜ್ಯ ಸಂಸದರು ಭೇಟಿ: ಗಡಿ ವಿಚಾರದಲ್ಲಿ ಸೋಮವಾರ ಕರ್ನಾಟಕದ ಸಂಸದರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲು ತಿಳಿಸಿದ್ದೇನೆ. ನಾನೂ ಕೂಡ ರಾಜ್ಯದ ನ್ಯಾಯ ಸಮ್ಮತ ನಿಲುವನ್ನು  ಅಮಿತ್ ಶಾ ಅವರಿಗೆ ತಿಳಿಸಲು ಕರೆ ಮಾಡಿದ್ದೇನೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ತಿಳಿಸಿ ನನ್ನನ್ನು ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳನ್ನು ದೆಹಲಿಗೆ ಬರಲು ಹೇಳುತ್ತೇನೆ ಎಂದಿದ್ದಾರೆ. ಬಹುಶಃ ಅಮಿತ್ ಶಾ ಅವರನ್ನು ಡಿಸೆಂಬರ್ 14 ಅಥವಾ 15ರಂದು ಭೇಟಿ ಮಾಡಲು ಹೇಳಬಹುದು ಎಂದರು. 

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಿಸೆಂಬರ್ 14 ರಂದು ರಾಷ್ಟ್ರ ರಾಜಧಾನಿಯಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಎರಡು ರಾಜ್ಯಗಳ ನಡುವಿನ ಗಡಿ ವಿವಾದವನ್ನು ಶಮನಗೊಳಿಸುವ ಪ್ರಯತ್ನ ಮಾಡಬಹುದು ಎಂಬ ಭರವಸೆಯಿದೆ. ನಮ್ಮ ರಾಜ್ಯದ ನಿಲುವು, ವಾಸ್ತವಾಂಶ, ವಿವರಗಳನ್ನು ಈಗಾಗಲೇ ಕೇಂದ್ರದ ಮುಂದೆ ಹೇಳಿದ್ದೇನೆ ಎಂದರು.

ಗಡಿ ವಿವಾದದ ಕುರಿತು ಚರ್ಚಿಸಲು ಸರ್ಕಾರ ಸರ್ವಪಕ್ಷ ಸಭೆ ಕರೆಯಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಆಗ್ರಹದ ಬಗ್ಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಸಿದ್ದರಾಮಯ್ಯ ಮತ್ತು ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ ಇಬ್ಬರನ್ನೂ ಭೇಟಿ ಮಾಡುವುದಾಗಿ ಹೇಳಿದರು.

ನಿನ್ನೆ ಸಿದ್ದರಾಮಯ್ಯ ಅವರ ಜೊತೆ ಮಾತನಾಡಿ, ಮುಂದಿನ ಬೆಳವಣಿಗೆಗಳ ಬಗ್ಗೆ ತಿಳಿಸುತ್ತೇನೆ ಎಂದು ಹೇಳಿದ್ದೆ, ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಇಬ್ಬರ ಬಳಿಯೂ ಮಾತನಾಡುತ್ತೇನೆ ಎಂದರು.

ಈ ವಾರದ ಆರಂಭದಲ್ಲಿ ಗಡಿ ಘರ್ಷಣೆ ತೀವ್ರಗೊಂಡಿತ್ತು, ಎರಡೂ ರಾಜ್ಯಗಳ ವಾಹನಗಳನ್ನು ಗುರಿಯಾಗಿಸಿಕೊಂಡು ಹಾನಿ ಮಾಡಲಾಗಿತ್ತು. ಬೆಳಗಾವಿಯಲ್ಲಿ ಉದ್ವಿಗ್ನ ವಾತಾವರಣದ ನಡುವೆ ಕನ್ನಡ ಮತ್ತು ಮರಾಠಿ ಪರ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಇದರ ಬೆನ್ನಲ್ಲೇ ಕರ್ನಾಟಕ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳು ಪರಸ್ಪರ ದೂರವಾಣಿ ಮೂಲಕ ಮಾತನಾಡಿ ಎರಡೂ ಕಡೆ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಒಪ್ಪಿಗೆ ಸೂಚಿಸಿದರು.

ಗಡಿ ವಿವಾದ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಇಂದು ನಿನ್ನೆಯದಲ್ಲ. ಭಾಷಾವಾರು ರಾಜ್ಯಗಳ ಮರುವಿಂಗಡಣೆ ನಂತರ ಗಡಿ ಸಮಸ್ಯೆಯು 1957ರಲ್ಲಿ ಆರಂಭವಾಗಿತ್ತು. ಹಿಂದಿನ ಬಾಂಬೆ ಪ್ರೆಸಿಡೆನ್ಸಿಯ ಭಾಗವಾಗಿದ್ದ ಬೆಳಗಾವಿಯ ಮೇಲೆ ಮಹಾರಾಷ್ಟ್ರವು ಹಕ್ಕು ಸಾಧಿಸಿತು, ಇಲ್ಲಿ ಮರಾಠಿ ಮಾತನಾಡುವ ಜನಸಂಖ್ಯೆ ದೊಡ್ಡ ಮಟ್ಟದಲ್ಲಿದೆ. ಪ್ರಸ್ತುತ ಕರ್ನಾಟಕದ ಭಾಗವಾಗಿರುವ 814 ಮರಾಠಿ ಮಾತನಾಡುವ ಹಳ್ಳಿ ತನಗೆ ಸೇರಬೇಕೆಂದು ಮಹಾರಾಷ್ಟ್ರ ವಾದಿಸುತ್ತಿದೆ. 

ರಾಜ್ಯಗಳ ಮರುವಿಂಗಡಣೆ ಕಾಯ್ದೆ ಮತ್ತು 1967 ರ ಮಹಾಜನ್ ಆಯೋಗದ ವರದಿಯ ಪ್ರಕಾರ ಭಾಷಾವಾರು ರೇಖೆಗಳ ಮೇಲೆ ಮಾಡಿದ ಗಡಿರೇಖೆಯನ್ನು ಕರ್ನಾಟಕವು ನಿರ್ವಹಿಸುತ್ತದೆ. ಬೆಳಗಾವಿ ಜಿಲ್ಲೆಯ ಕರ್ನಾಟಕ ರಾಜ್ಯದ ಅವಿಭಾಜ್ಯ ಅಂಗವಾಗಿದೆ ಎಂಬ ಪ್ರತಿಪಾದನೆಯಂತೆ, ಬೆಂಗಳೂರಿನ ವಿಧಾನಸೌಧದ ಮಾದರಿಯಲ್ಲಿ ಸುವರ್ಣ ವಿಧಾನ ಸೌಧವನ್ನು ಬೆಳಗಾವಿಯಲ್ಲಿ ನಿರ್ಮಿಸಿದೆ. ಅಲ್ಲಿ ವಿಧಾನಮಂಡಲದ ಅಧಿವೇಶನವನ್ನು ನಡೆಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com