ಸಿಸಿಬಿ ಪೊಲೀಸರ ದಾಳಿ : ಶ್ಯಾಮನೂರು ಶಿವಶಂಕರಪ್ಪ ಪುತ್ರ ಎಸ್ ಎಸ್ ಮಲ್ಲಿಕಾರ್ಜುನ್‌ ಫಾರ್ಮ್‌ನಲ್ಲಿ ಕೃಷ್ಣಮೃಗ- ಚುಕ್ಕೆ ಜಿಂಕೆ ಸೇರಿ ವನ್ಯ‌ಜೀವಿಗಳು ಪತ್ತೆ!

ದಾವಣಗೆರೆ ಜಿಲ್ಲೆಯ ಮಾಜಿ ಸಚಿವ ಹಾಗೂ ಶಾಮನೂರು ಶಿವಶಂಕರಪ್ಪ ಪುತ್ರ ಎಸ್​.ಎಸ್. ಮಲ್ಲಿಕಾರ್ಜುನ ಅವರ ರೈಸ್ ಮಿಲ್​ನಲ್ಲಿ ವನ್ಯ‌ಜೀವಿಗಳು ಪತ್ತೆಯಾಗಿವೆ.
ಎಸ್ ಎಸ್ ಮಲ್ಲಿಕಾರ್ಜುನ್
ಎಸ್ ಎಸ್ ಮಲ್ಲಿಕಾರ್ಜುನ್

ಬೆಂಗಳೂರು: ದಾವಣಗೆರೆ ಜಿಲ್ಲೆಯ ಮಾಜಿ ಸಚಿವ ಹಾಗೂ ಶಾಮನೂರು ಶಿವಶಂಕರಪ್ಪ ಪುತ್ರ ಎಸ್​.ಎಸ್. ಮಲ್ಲಿಕಾರ್ಜುನ ಅವರ ರೈಸ್ ಮಿಲ್​ನಲ್ಲಿ ವನ್ಯ‌ಜೀವಿಗಳು ಪತ್ತೆಯಾಗಿವೆ. ದಾವಣಗೆರೆ ನಗರದ ಬಂಬೂಬಜಾರ್ ರಸ್ತೆಯಲ್ಲಿ ಇರುವ ಕಲ್ಲೇಶ್ವರ ರೈಸ್ ಮಿಲ್​ ಮೇಲೆ ನಿನ್ನೆ ಬೆಂಗಳೂರು ಸಿಸಿಬಿ ಹಾಗೂ ಅರಣ್ಯ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ 29 ವನ್ಯ ಜೀವಿಗಳು ಪತ್ತೆಯಾಗಿವೆ.

ಏಳು ಚುಕ್ಕೆ ಜಿಂಕೆಗಳು, 10 ಕೃಷ್ಣಮೃಗಗಳು, ಏಳು ಕಾಡುಹಂದಿಗಳು, ಮೂರು ಮುಂಗುಸಿಗಳು, ಎರಡು ನರಿಗಳು ಸಿಕ್ಕಿವೆ. ಅವುಗಳನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಹೆಬ್ಬಾಳದಲ್ಲಿ ಡಿ.18ರಂದು ಜಿಂಕೆ ಚರ್ಮ, ಕೊಂಬು, ಮೂಳೆ ಮಾರಾಟ ಮಾಡಲು ಬಂದಿದ್ದ ಸೆಂಥಿಲ್‌ ಎಂಬ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದ ಸಿಸಿಬಿ ಪೊಲೀಸರು ಆತನ ವಿಚಾರಣೆಗೆ ಒಳಪಡಿಸಿದ್ದರು. ದಾವಣಗೆರೆಯಿಂದ ಚರ್ಮ ತಂದಿರುವುದಾಗಿ ಆತ ಬಾಯ್ಬಿಟ್ಟಿದ್ದ. ಈ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದಾಗ ಜೀವಂತ ವನ್ಯಪ್ರಾಣಿಗಳು ಸಿಕ್ಕಿವೆ’ ಎಂದು ಮೂಲಗಳು ತಿಳಿಸಿವೆ.

ಸಿಸಿಬಿ ಪೊಲೀಸರು ಸೆಂಥಿಲ್‌ನನ್ನು ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಫಾರ್ಮ್‌ನಲ್ಲಿದ್ದ ಕಾರ್ಮಿಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಮುಂದಿನ ಕ್ರಮಕ್ಕೆ ಪ್ರಕರಣವನ್ನು ಸ್ಥಳೀಯ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com