ಪ್ರತಿ ಜಿಲ್ಲೆ, ನಗರ ವ್ಯಾಪ್ತಿಯಲ್ಲಿ ಸೈಬರ್ ಪೊಲೀಸ್ ಠಾಣೆ ಸ್ಥಾಪನೆ: ಗೃಹ ಸಚಿವ ಆರಗ ಜ್ಞಾನೇಂದ್ರ

ಸೈಬರ್ ಅಪರಾಧಗಳನ್ನು ಸಮರ್ಥವಾಗಿ ನಿಭಾಯಿಸಲು ಹಾಗೂ  ವಂಚನೆಗೊಳಗಾದವರ ನೆರವಿಗಾಗಿ ಬೆಂಗಳೂರು ನಗರದಲ್ಲಿ 8  ಹಾಗೂ ಪ್ರತಿ ಜಿಲ್ಲೆ ಹಾಗೂ ನಗರ ವ್ಯಾಪ್ತಿಯಲ್ಲಿ ವಿಶೇಷ ಸೈಬರ್ ಪೊಲೀಸ್ ಠಾಣೆಗಳನ್ನು ತೆರೆದು, ಅಪರಾಧ ಪತ್ತೆ ಹಚ್ಚಲು ಸೈಬರ್ ತಜ್ಞರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನಪರಿಷತ್ತಿಗೆ ತಿಳಿಸಿದರು.
ಗೃಹ ಸಚಿವ ಆರಗ ಜ್ಞಾನೇಂದ್ರ
ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಳಗಾವಿ: ಸೈಬರ್ ಅಪರಾಧಗಳನ್ನು ಸಮರ್ಥವಾಗಿ ನಿಭಾಯಿಸಲು ಹಾಗೂ  ವಂಚನೆಗೊಳಗಾದವರ ನೆರವಿಗಾಗಿ ಬೆಂಗಳೂರು ನಗರದಲ್ಲಿ 8  ಹಾಗೂ ಪ್ರತಿ ಜಿಲ್ಲೆ ಹಾಗೂ ನಗರ ವ್ಯಾಪ್ತಿಯಲ್ಲಿ ವಿಶೇಷ ಸೈಬರ್ ಪೊಲೀಸ್ ಠಾಣೆಗಳನ್ನು ತೆರೆದು, ಅಪರಾಧ ಪತ್ತೆ ಹಚ್ಚಲು ಸೈಬರ್ ತಜ್ಞರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನಪರಿಷತ್ತಿಗೆ ತಿಳಿಸಿದರು.

ಪ್ರಶ್ನೋತ್ತರ ವೇಳೆಯಲ್ಲಿ ಅವರು, ಪೊಲೀಸರಿಗೆ ಆಧುನಿಕ ತರಬೇತಿ ನೀಡಲು ಸಿ.ಐ.ಡಿ ಘಟಕದಲ್ಲಿ ವಿಶೇಷ ತರಬೇತಿ ವಿಭಾಗವನ್ನು ಸ್ಥಾಪಿಸಲಾಗಿದೆ. ಒಟ್ಟು 3657 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ, ಸರ್ಕಾರಿ ಅಭಿಯೋಜಕರು, ಇನ್ನಿತರೆ ಕಾನೂನು ಜಾರಿ ಸಂಸ್ಥೆಗಳಿಗೆ ತರಬೇತಿ ನೀಡಲಾಗಿದೆ. ರಾಜ್ಯದ ಗೃಹ ಇಲಾಖೆ ಗುಜರಾತಿನ ಅಹಮದಬಾದ್ ವಿಧಿ ವಿಜ್ಞಾನ ವಿಶ್ವವಿದ್ಯಾಲಯದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಅಲ್ಲಿ ರಾಜ್ಯದ  ಆಸಕ್ತ ಪೊಲೀಸ್ ಅಧಿಕಾರಿಗಳಿಗೆ ತರಬೇತಿ ಕೊಡಿಸಿ ನೇಮಕಾತಿ ಮಾಡಲಾಗಿದೆ ಎಂದರು.

ಕೇಂದ್ರ ಸರ್ಕಾರ ಸೈಬರ್ ದೂರುಗಳನ್ನು ದಾಖಲಿಸಲು ನ್ಯಾಶನಲ್ ಸೈಬರ್ ಕ್ರೈಂ ರಿಪೋರ್ಟಿಂಗ್ ಪೋರ್ಟಲ್ ಸ್ಥಾಪಿಸಿದೆ. ಇದರಲ್ಲಿ ರಾಜ್ಯಕ್ಕೆ ಸಂಬಂಧಿಸಿದಂತೆ  ಒಟ್ಟು 80,379 ದೂರುಗಳು ದಾಖಲಾಗಿವೆ. 53,229 ದೂರುಗಳು ಪರಿಶೀಲನಾ ಹಂತದಲ್ಲಿವೆ. 14,960 ದೂರುಗಳನ್ನು ಪರಿಶೀಲಿಸಿ ಮುಕ್ತಾಯಗೊಳಿಸಲಾಗಿದೆ. 901 ದೂರುಗಳು ತಿರಸ್ಕರಿಸಲ್ಪಟ್ಟಿವೆ. 5,734 ಪ್ರಕರಣಗಳ ವಿಚಾರಣೆ ಬಾಕಿಯಿದೆ. ಒಟ್ಟು 528 ಪ್ರಕರಣಗಲ್ಲಿ ಎಪ್.ಐ.ಆರ್. ದಾಖಲಿಸಲಾಗಿದೆ. 2,028 ಪ್ರಕರಣಗಳ ದೂರುದಾರರು ಹಿಂಪಡೆದಿದ್ದಾರೆ ಎಂದು ಅವರು ಸದನಕ್ಕೆ ಮಾಹಿತಿ ನೀಡಿದರು.

ಅಶ್ಲೀಲ ದೃಶ್ಯಗಳು, ಸಮಾಜಘಾತುಕ ವಿಚಾರಗಳ ಫೋಸ್ಟಿಂಗ್  ಕುರಿತು ದೂರು ಸಲ್ಲಿಸಲು ಪ್ರತಿ ಜಿಲ್ಲೆ ಹಾಗೂ ನಗರಗಳಲ್ಲಿ ಕುಂದುಕೊರತೆ ವಿಭಾಗಗಳನ್ನು ಸ್ಥಾಪಿಸಲಾಗಿದೆ. ಇದರೊಂದಿಗೆ ವಿದ್ಯಾರ್ಥಿಗಳು ಹಾಗೂ ಯುವಕ ಯುವತಿಯರಿಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ. ಇದಕ್ಕೆ ಶಿಕ್ಷಕರು, ಪೋಷಕರ ಸಹಕಾರದ ಅಗತ್ಯವಿದೆ ಎಂದರು. 

ಶಾಸಕ  ಪಿ.ಆರ್.ರಮೇಶ್ ಮಾತನಾಡಿ ಕಾಮೋತ್ತೇಜಕ ದೃಶ್ಯಗಳನ್ನು ಜಾಲತಾಣಗಳಲ್ಲಿ ವೀಕ್ಷಿಸುವ ಗೀಳು ಯುವಜನರಲ್ಲಿ ಹೆಚ್ಚಾಗಿದೆ. ಇದು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸರ್ವೇ ಸಾಮಾನ್ಯವಾಗಿದೆ. ಇದರಿಂದ ವಿದ್ಯಾರ್ಥಿಗಳ ಜೀವನ ಹಾಳಾಗುತ್ತಿದೆ. ಹಿಂದೂ ಸಂಸ್ಕೃತಿಯೂ ನಾಶವಾಗುತ್ತಿದೆ. ದುಷ್ಟ ಹಾಗೂ ಬಾಹ್ಯ ಶಕ್ತಿಗಳು ವ್ಯವಸ್ಥಿತವಾಗಿ ದೇಶದ ಯುವಜನರನ್ನು ಇದರ ದಾಸರನ್ನಾಗಿ ಮಾಡುತ್ತಿವೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಸಾಮಾಜಿಕ ಜಾಲತಾಣ ಹಾಗೂ ವೆಬ್‌ಸೈಟ್‌ಗಳಲ್ಲಿನ ಕಾಮೋತ್ತೇಜಕ ದೃಶ್ಯಗಳನ್ನು ನಿಷೇಧಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com