ಅಶ್ವತ್ಥ ನಾರಾಯಣ
ಅಶ್ವತ್ಥ ನಾರಾಯಣ

ಮುಂಬೈನಲ್ಲಿ ಮರಾಠಿ ಭಾಷಿಕರ ಸಂಖ್ಯೆ‌ ಎಷ್ಟಿದೆ‌ ಪ್ರಶ್ನಿಸಬಹುದೆ?: ಸಚಿವ ಅಶ್ವತ್ಥ ನಾರಾಯಣ ತಿರುಗೇಟು

ರಾಜ್ಯದ ಕೆಲವು ಪ್ರದೇಶಗಳನ್ನು‌ ಕೇಂದ್ರಾಡಳಿತ ಮಾಡಬೇಕೆಂದು ಹೇಳಿಕೆ‌ ನೀಡಿದ ಶಿವಸೇನಾ ಮುಖಂಡ ಉದ್ಧವ್ ಠಾಕ್ರೆಗೆ ಮುಂಬಯಿಯಲ್ಲಿ ಮರಾಠಿ ಭಾಷಿಕರು ಎಷ್ಟು ಸಂಖ್ಯೆಯಲ್ಲಿದ್ದಾರೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ

ಬೆಂಗಳೂರು: ರಾಜ್ಯದ ಕೆಲವು ಪ್ರದೇಶಗಳನ್ನು‌ ಕೇಂದ್ರಾಡಳಿತ ಮಾಡಬೇಕೆಂದು ಹೇಳಿಕೆ‌ ನೀಡಿದ ಶಿವಸೇನಾ ಮುಖಂಡ ಉದ್ಧವ್ ಠಾಕ್ರೆಗೆ ಮುಂಬಯಿಯಲ್ಲಿ ಮರಾಠಿ ಭಾಷಿಕರು ಎಷ್ಟು ಸಂಖ್ಯೆಯಲ್ಲಿದ್ದಾರೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ. ಇದನ್ನು ನಾವು ಪ್ರಶ್ನಿಸಿದರೆ ಅವರಿಗೇ ಸಮಸ್ಯೆಯಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಕೆ. ಅಶ್ವತ್ಥನಾರಾಯಣ ಹೇಳಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿವಿವಾದ ಮುಗಿದ ಅಧ್ಯಾಯ. ಆಗಾಗ ಈ ವಿಚಾರ ತೆಗೆಯುತ್ತ ಅವರಿಗೂ, ಜನರಿಗೂ ಸಮಸ್ಯೆ ತಂದಿಡುತ್ತಿದ್ದಾರೆ. ಜನರ ಬಗ್ಗೆ ಕಾಳಜಿಯಿಲ್ಲದ‌ ಅವರು ರಾಜಕೀಯ ಹಾಗೂ‌ ಸ್ವಾರ್ಥಕ್ಕಾಗಿ‌ ಹೀಗೆ ಮಾಡುತ್ತಿದ್ದಾರೆ. ಇಂತಹ ನಾಯಕರು ಸಮಾಜಕ್ಕೆ ಸಮಸ್ಯೆ‌ ಹಾಗೂ ಭಾರ. ಬೆಳಗಾವಿ, ನಿಪ್ಪಾಣಿ, ಕಾರವಾರ ಕೇಂದ್ರಾಡಳಿತ ಪ್ರದೇಶವಾಗಬೇಕೆಂಬ ಆಲೋಚನೆ ಅವರಿಗೆ ಹೇಗೆ ಬಂತು ತಿಳಿಯುತ್ತಿಲ್ಲ ಎಂದರು.

ಕೋವಿಡ್ ನೆಪದಲ್ಲಿ ಅವಧಿಪೂರ್ವ‌ ಚುನಾವಣೆ ನಡೆಸಲು‌ ಬಿಜೆಪಿ ಮುಂದಾಗಿದೆ' ಎನ್ನುವ ಡಿ.ಕೆ. ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಸಚಿವರು, 'ಡಿ.ಕೆ. ಶಿವಕುಮಾರ‌ ಅವರಿಗೆ ತಿಳಿವಳಿಕೆ‌ ಕೊರತೆ. ಹಲವಾರು ಜವಾಬ್ದಾರಿ ನಿರ್ವಹಿಸಿರುವ ಅವರು, ವಿಶ್ವದಾದ್ಯಂತ ಏನಾಗುತ್ತಿದೆ ಎನ್ನುವುದು ತಿಳಿದಿಲ್ಲವೇ? ಅವರಿಗೆ ರಾಜಕೀಯ ಮತ್ತು ಚುನಾವಣೆ ಬಿಟ್ಟರೆ, ಜನರ ಸಮಸ್ಯೆ ಹಾಗೂ ಆರೋಗ್ಯದ ಚಿಂತನೆಯಿಲ್ಲ. ಅಧಿಕಾರ ಕಳೆದುಕೊಂಡ ಅವರಿಗೆ ಬಹಳ ಸಂಕಟವಾಗುತ್ತಿದೆ. ಇದೀಗ ಅದರ ಹಪಾಹಪಿ, ಹಸಿವು ಹೆಚ್ಚಿರುವುದರಿಂದ‌ ಹೀಗೆಲ್ಲ ಹೇಳಿಕೆ ನೀಡುತ್ತಿದ್ದಾರೆ' ಎಂದು ವ್ಯಂಗ್ಯವಾಡಿದರು.

'ಯಾವ್ಯಾವ ಸಮುದಾಯಕ್ಕೆ ಎಷ್ಟೆಷ್ಟು‌ ಮೀಸಲಾತಿ ನೀಡಬೇಕು ಎನ್ನುವ ಕುರಿತು ಹಿಂದುಳಿದ ವರ್ಗದ ಆಯೋಗಕ್ಕೆ ಶಿಫಾರಸು‌ ಕಳುಹಿಸಲಾಗಿದೆ. ಆಯೋಗದ ವರದಿ ಆಧರಿಸಿ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ. ಒಕ್ಕಲಿಗರಿಗೆ ಶೇ 3ರಷ್ಟು ಮೀಸಲಾತಿ ಬೇಡ. ನಾವು ಭಿಕ್ಷುಕರಲ್ಲ ಎಂದು ಹೇಳುವ ಮೂಲಕ ಡಿ.ಕೆ. ಶಿವಕುಮಾರ್ ಒಮ್ಮೆಲೆ‌ ಜಾಗೃತರಾಗಿದ್ದಾರೆ. ಅವರ ಸರ್ಕಾರ ಇದ್ದಾಗ ಈ ಮೀಸಲಾತಿ ಭಿಕ್ಷೆ ಅನಿಸಿರಲಿಲ್ಲವೇ? ಅವರನ್ನು ಅವರೇ‌ ಪ್ರಶ್ನಿಸಿಕೊಳ್ಳಲಿ' ಎಂದು ಹೇಳಿದರು.

Related Stories

No stories found.

Advertisement

X
Kannada Prabha
www.kannadaprabha.com