
ಬೆಳಗಾವಿ: ರಾಜ್ಯದಲ್ಲಿ ಸುಮಾರು 42 ಸಾವಿರ ಪೌರ ಕಾರ್ಮಿಕರಿದ್ದು, ಮುಂದಿನ ದಿನಗಳಲ್ಲಿ ಇವರೆಲ್ಲರಿಗೂ ಖಾಯಂ ನೇಮಕಾತಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ವಿವಿಧ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೇಮಕವಾದ ಪೌರಕಾರ್ಮಿಕರಿಗೆ ನೇಮಕಾತಿ ಆದೇಶ ಪತ್ರ ವಿತರಿಸಿ ಮಾತನಾಡಿದ ಅವರು, ಪೌರಕಾರ್ಮಿಕರಿಗೆ 2000 ರೂ. ಸಂಕಷ್ಟ ಭತ್ಯೆ ನೀಡಲಾಗುತ್ತಿದ್ದು, ಅವರ ಆರೋಗ್ಯ ,ಅವರ ಮಕ್ಕಳ ಆರೋಗ್ಯ ಹಿತರಕ್ಷಣೆಗೆ ಆದ್ಯತೆ ನೀಡಲಾಗಿದೆ ಎಂದರು.
ಎಸ್ ಸಿ ಎಸ್ ಟಿ ಜನಾಂಗಕ್ಕೆ ಮೀಸಲಾತಿ ಹೆಚ್ಚಳ ಮಾಡಲಾಗಿದೆ. ಈ ನಿರ್ಣಯಕ್ಕೆ ಗಟ್ಟಿಯಾಗಿ ನಿಲ್ಲಲು ಸರ್ಕಾರ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಪೌರ ನೌಕರರ ಸೇವೆಯನ್ನು ಸರ್ಕಾರ ಗುರುತಿಸಿದೆ. ಬರುವ ದಿನಗಳಲ್ಲಿ ಪೌರನೌಕರರ ಮಕ್ಕಳಿಗೆ ಉತ್ತಮ ವಿದ್ಯೆ ನೀಡಿ, ಅವರ ಭವಿಷ್ಯವನ್ನು ಉಜ್ವಲಗೊಳಿಸಬೇಕು. ಇದಕ್ಕೆ ಸರ್ಕಾರ ಎಲ್ಲ ಸಹಕಾರ ನೀಡುತ್ತದೆ ಎಂದು ಅವರು ತಿಳಿಸಿದರು.
ಎಸ್ ಸಿ ಎಸ್ ಟಿ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ತರಬೇತಿಯನ್ನು ನೀಡುವಂತೆ, ಪೌರನೌಕರರ ಮಕ್ಕಳು ಸಿಇಟಿ ಸೇರಿದಂತೆ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ವಿಶೇಷ ತರಬೇತಿಯನ್ನು ನೀಡಲು ಸರ್ಕಾರ ಸಿದ್ಧವಿದೆ. ಪೌರಕಾರ್ಮಿಕರ ಆರೋಗ್ಯ ರಕ್ಷಣೆ, ಮಕ್ಕಳ ಶಿಕ್ಷಣ, ಮನೆ ನಿರ್ಮಾಣಗಳಿಗೆ ವಿಶೇಷ ಕಾರ್ಯಕ್ರಮವನ್ನು ರೂಪಿಸಲಾಗಿದ್ದು, ಪೌರಕಾರ್ಮಿಕರ ಇವುಗಳ ಲಾಭವನ್ನು ಪಡೆಯಬೇಕು ಎಂದರು.
Advertisement