ಬೆಂಗಳೂರು: ಇಬ್ಬರು ವೈದ್ಯ ಸಹೋದರರ ಮೇಲೆ ಸ್ಥಳೀಯ ರಾಜಕಾರಣಿ ಸಂಬಂಧಿಕರಿಂದ ಹಲ್ಲೆ

ಎಂ ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ 45 ವರ್ಷದ ಮೂತ್ರಶಾಸ್ತ್ರಜ್ಞ ಮತ್ತು ಸರ್ಕಾರಿ ವೈದ್ಯರಾಗಿದ್ದ ಅವರ ಸಹೋದರನ ಮೇಲೆ ಸ್ಥಳೀಯ ರಾಜಕಾರಣಿಯೊಬ್ಬರ ಸಂಬಂಧಿಕರು ಎಂದು ಹೇಳಲಾದ ಇಬ್ಬರು ವ್ಯಕ್ತಿಗಳು ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಎಂ ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ 45 ವರ್ಷದ ಮೂತ್ರಶಾಸ್ತ್ರಜ್ಞ ಮತ್ತು ಸರ್ಕಾರಿ ವೈದ್ಯರಾಗಿದ್ದ ಅವರ ಸಹೋದರನ ಮೇಲೆ ಸ್ಥಳೀಯ ರಾಜಕಾರಣಿಯೊಬ್ಬರ ಸಂಬಂಧಿಕರು ಎಂದು ಹೇಳಲಾದ ಇಬ್ಬರು ವ್ಯಕ್ತಿಗಳು ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಮೂತ್ರಶಾಸ್ತ್ರಜ್ಞ ವೈದ್ಯ ತಮ್ಮ ಕಾರಿನಲ್ಲಿ ಮನೆಗೆ ಮರಳುತ್ತಿದ್ದಾಗ ಕಮ್ಮನಹಳ್ಳಿ ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದೆ. ಇಂಜಿನ್ ವೈಫಲ್ಯದಿಂದ ವೈದ್ಯರ ಕಾರು ಇದ್ದಕ್ಕಿದ್ದಂತೆ ನಿಂತಿತು. ಹಿಂದೆ ಎಸ್‌ಯುವಿಯಲ್ಲಿದ್ದ ಶಂಕಿತ ವ್ಯಕ್ತಿ ಹಾರ್ನ್ ಮಾಡಲು ಪ್ರಾರಂಭಿಸಿದ್ದಾನೆ.

ವೈದ್ಯರು ಪರಿಸ್ಥಿತಿಯನ್ನು ವಿವರಿಸಲು ಪ್ರಯತ್ನಿಸಿದಾಗ, ಆರೋಪಿಯು ವೈದ್ಯನ ಕಾರಿನ ಮುಂದೆ ಮತ್ತೊಂದು ಎಸ್‌ಯುವಿಯಲ್ಲಿದ್ದ ತನ್ನ ಸಂಬಂಧಿಯೊಂದಿಗೆ ಆತನ ಮೇಲೆ ಹಲ್ಲೆ ಮಾಡಲು ಪ್ರಾರಂಭಿಸಿದ್ದಾನೆ. ಈ ವೇಳೆ  ತನ್ನ ಸಹಾಯಕ್ಕಾಗಿ ಸಹೋದರನನ್ನು  ವೈದ್ಯರು ಕರೆದಿದ್ದಾರೆ ಈ ವೇಳೆ ಆರೋಪಿಗಳು ಅವರನ್ನೂ  ಥಳಿಸಿದ್ದಾರೆ.

ಮೂತ್ರಶಾಸ್ತ್ರಜ್ಞ ಡಾ.ಪುವ್ವಾಡ ಸಂದೀಪ್ ಮತ್ತು ಅವರ ಸಹೋದರ ಸರ್ಕಾರಿ ವೈದ್ಯ ಡಾ.ವಂಶಿ ಅವರ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದಾರೆ.  ನಮ್ಮ ಮುಖ ಮತ್ತು ಎದೆಗೆ ಹೊಡೆದರು. ನನ್ನ ಬಲ ಕಿವಿಗೆ ಗಾಯವಾಗಿ ನೋವು ಅನುಭವಿಸುತ್ತಿದ್ದೇನೆ. ನನ್ನ ಬಾಯಿಯಲ್ಲಿ ಹೊಲಿಗೆ ಹಾಕಲಾಗಿದೆ. ನನಗೆ ಸಂಪೂರ್ಣ ವಿಶ್ರಾಂತಿ  ಪಡೆಯುವಂತೆಸೂಚಿಸಲಾಗಿದೆ ಎಂದು ಸಂದೀಪ್ ಹೇಳಿದ್ದಾರೆ.

ಕಳೆದ ಶುಕ್ರವಾರ ಸಂಜೆ 6.45 ರಿಂದ 7 ಗಂಟೆಯ ನಡುವೆ ಈ ಘಟನೆ ನಡೆದಿದೆ. ಸಂದೀಪ್ ಕಲ್ಯಾಣ್ ನಗರದ ಎಚ್ ಆರ್ ಬಿಆರ್ ಲೇಔಟ್ 2ನೇ ಬ್ಲಾಕ್ ನಿವಾಸಿಯಾಗಿದ್ದಾರೆ.

ಪೊಲೀಸರು ಆರೋಪಿಗಳೊಂದಿಗೆ ನಮ್ಮನ್ನು ಠಾಣೆಗೆ ಕರೆದೊಯ್ದರು. ಪೊಲೀಸರ ಮುಂದೆಯೂ ನಮ್ಮ ಮೇಲೆ ದೌರ್ಜನ್ಯ ನಡೆಸುತ್ತಿದ್ದರು. ನಂತರ ನಾವು ಅವರನ್ನು ನೋಡಲಿಲ್ಲ. ಅವರು ಸ್ಥಳೀಯ ರಾಜಕೀಯ ನಾಯಕನಿಗೆ ಸಂಬಂಧಿಸಿರುವುದು ನಮಗೆ ಗೊತ್ತಾಯಿತು.  ಈ ನಿಟ್ಟಿನಲ್ಲಿ ನಾವು ಪೊಲೀಸ್ ಕಮಿಷನರ್ ಕಚೇರಿಯನ್ನು ಸಂಪರ್ಕಿಸಬೇಕಾಯಿತು.

ಪೊಲೀಸರು ರಾಜಿ ಮಾಡಿಕೊಳ್ಳಲು ನಮಗೆ ಹೇಳಿದರು. ಆದರೆ, ಇಬ್ಬರಿಗೆ ಶಿಕ್ಷೆಯಾಗಬೇಕೆಂದು ನಾವು ಬಯಸುತ್ತೇವೆ ಎಂದು ಮೂತ್ರಶಾಸ್ತ್ರಜ್ಞರು ಹೇಳಿದ್ದಾರೆ. ಬಾಣಸವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com