ಮಂಡ್ಯ: 2023 ವಿಧಾನಸಭಾ ಚುನಾವಣೆಗೆ ಅಮಿತ್ ಶಾ ರಣ ಕಹಳೆ!
ಮಂಡ್ಯ: ಹಳೆಯ ಮೈಸೂರು ಭಾಗದ ಅಭಿವೃದ್ಧಿಗಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಮತ್ತು ಮೈಸೂರು ಜನತೆ ಬಿಜೆಪಿಗೆ ಮತದಾನ ಮಾಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮನವಿ ಮಾಡುವ ಮೂಲಕ ರಣ ಕಹಳೆ ಊದಿದರು.
ಮಂಡ್ಯದ ವಿವಿ ಆವರಣದಲ್ಲಿ ಆಯೋಜಿಸಿದ್ದ ಬಿಜೆಪಿ ಜನ ಸಂಕಲ್ಪ ಯಾತ್ರೆಯಲ್ಲಿ, ಜೆಡಿಎಸ್ ಹಾಗೂ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅಮಿತ್ ಶಾ, ಉಭಯ ಪಕ್ಷಗಳು ಅನೇಕ ವರ್ಷಗಳ ಕಾಲ ರಾಜ್ಯದಲ್ಲಿ ಲೂಟಿ ಹೊಡೆದು, ಗಾಂಧಿ ಮತ್ತು ಗೌಡ ಕುಟುಂಬಕ್ಕೆ ಎಟಿಎಂ ಯಂತ್ರಗಳಾಗಿ ಸೇವೆ ಸಲ್ಲಿಸಿರುವುದಾಗಿ ಆರೋಪಿಸಿದರು.
ಕಾಂಗ್ರೆಸ್ ಸರ್ಕಾರ ಆ ಪಕ್ಷದ ಹೈಕಮಾಂಡ್ ಗೆ ಎಟಿಎಂ ಆದರೆ, ಜೆಡಿಎಸ್ ಹೆಚ್ ಡಿ ದೇವೇಗೌಡ ಮತ್ತು ಅವರ ಕುಟುಂಬಕ್ಕೆ ಎಟಿಎಂ ಆಗಿದೆ. ಹಿಂದಿನ ಕಾಂಗ್ರೆಸ್ -ಜೆಡಿಎಸ್ ಸರ್ಕಾರದಲ್ಲಿ ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿತ್ತು. ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿರಲಿಲ್ಲ. ಡಬಲ್ ಎಂಜಿನ್ ಬಿಜೆಪಿ ಸರ್ಕಾರ ರಾಷ್ಟ್ರೀಯತೆ ಮತ್ತು ಏಕತೆಯಲ್ಲಿ ನಂಬಿಕೆ ಇಟ್ಟಿದ್ದು, ಮತ್ತೆ ಅಧಿಕಾರಕ್ಕೆ ಬಂದರೆ ಮತ್ತಷ್ಟು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.
ಜೆಡಿಎಸ್ ಮತ್ತು ಕಾಂಗ್ರೆಸ್ ಭ್ರಷ್ಟಾಚಾರಿ, ಕೋಮು ಮತ್ತು ಕ್ರಿಮಿನಲ್ ಆರೋಪಿಗಳಿಗೆ ಆಶ್ರಯ ನೀಡಿರುವ ಪಕ್ಷಗಳಾಗಿದ್ದು, ಶತಮಾನಗಳಿಂದ ದಲಿತರು, ಆದಿವಾಸಿಗಳನ್ನು ನಿರ್ಲಕ್ಷಿಸಿವೆ. ಆದರೆ, ಬಿಜೆಪಿ ಈ ಸಮುದಾಯಗಳಿಗೆ ಸೇರಿದ ರಾಮನಾಥ್ ಕೋವಿಂದ್, ದ್ರೌಪದಿ ಮುರ್ಮು ಅವರನ್ನು ದೇಶದ ರಾಷ್ಟ್ರಪತಿಯನ್ನಾಗಿ ಮಾಡಿತು ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಕಾರ್ಖಾನೆಗಳಿಗೆ ಕಬ್ಬು ಪೂರೈಸುವ ರೈತರಿಗೆ ಹೆಚ್ಚುವರಿಯಾಗಿ ಪ್ರತಿ ಟನ್ ಗೆ 100 ರೂ. ನೀಡುವುದಾಗಿ ಘೋಷಿಸಿದರು. ಕಬ್ಬಿಗೆ ದರ ನಿಗದಿ ಬಗ್ಗೆ ರೈತರಿಂದ ಬೇಡಿಕೆ ಕೇಳಿಬಂದಿತ್ತು. ಹೀಗಾಗಿ ಪ್ರತಿ ಟನ್ ಗೆ 100 ರೂ. ನೀಡಲಾಗುವುದು, ಮೈಸೂರು, ಮಂಡ್ಯ ಭಾಗದ ನೀರಾವರಿ ಯೋಜನೆಗಳ ಅನುಷ್ಟಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಬಿಜೆಪಿ ಹಿರಿಯ ಮುಖಂಡ ಸಿಟಿ ರವಿ ಮುಸ್ಲಿಂ ಸಮುದಾಯ ವಿರುದ್ಧ ವಾಗ್ದಾಳಿ ಮುಂದುವರೆಸಿದರು. 2023ರ ಚುನಾವಣೆ ಟಿಪ್ಪು vs ಒಡೆಯರ್, ಮತ್ತು ಮುಲ್ಲಾ vs ಹನುಮನ್ ಆಗಿರುತ್ತದೆ. ಟಿಪ್ಪುವನ್ನು ಕೊಂದ ಉರಿ ಗೌಡ ಮತ್ತು ನಂಜೇಗೌಡ ಅವರ ಪ್ರತಿಮೆಯನ್ನು ಮಂಡ್ಯ ಜಿಲ್ಲೆಯಲ್ಲಿ ಸ್ಥಾಪಿಸಲಾಗುವುದು ಎಂದು ಹೇಳಿದರು. ಅವರು ಮೈಸೂರಿನ ನಿಜವಾದ ಹುಲಿಗಳು, ಟಿಪ್ಪು ಅಲ್ಲ, ಆತ ಪಾರ್ಸಿಯನ್ ಭಾಷೆಯನ್ನು ಆಡಳಿತಾತ್ಮಕ ಭಾಷೆಯನ್ನಾಗಿ ಮಾಡುವ ಮೂಲಕ ಕನ್ನಡ ಭಾಷೆಯನ್ನು ಹಾಳು ಮಾಡಲು ಪ್ರಯತ್ನಿಸಿದ ಎಂದು ಆರೋಪಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ