
ದಾವಣಗೆರೆ: ಬಸವ ಕೇಂದ್ರದ ಜಗದ್ಗುರು ಮರುಘಾ ರಾಜೇಂದ್ರ ಶಿವಯೋಗಾಶ್ರಮ ಟ್ರಸ್ಟ್ ನೀಡುವ ಪ್ರತಿಷ್ಠಿತ ಜಯದೇವ ಶ್ರೀ ಪ್ರಶಸ್ತಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಜನರಾಗಿದ್ದಾರೆ.
ಜುಲೈ 12 ರಂದು ಜಯದೇವ ಮುರುಘಾ ರಾಜೇಂದ್ರ ಸ್ವಾಮೀಜಿಗಳ 65ನೇ ವರ್ಷದ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯಗೆ 50, 000 ನಗದು ಹಾಗೂ ಸ್ಮರಣ ಸಂಚಿಕೆಯನ್ನು ನೀಡಲಾಗುತ್ತದೆ.
ಪ್ರಶಸ್ತಿ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಮುರುಘಾ ರಾಜೇಂದ್ರ ವಿರಕ್ತ ಮಠದ ಡಾ. ಬಸವಪ್ರಭು ಸ್ವಾಮೀಜಿ, ಸಮಾಜಕ್ಕೆ ಸಿದ್ದರಾಮಯ್ಯ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ.
ಮಾಜಿ ವಿಧಾನ ಪರಿಷತ್ ಸಭಾಪತಿ ಡಾ. ಡಿ. ಹೆಚ್ ಶಂಕರ ಮೂರ್ತಿ ಅವರಿಗೆ 'ಶೂನ್ಯ ಪೀಠ ಅಲ್ಲಮ' ಪ್ರಶಸ್ತಿ ನೀಡಲಾಗುವುದು, ಇದು 50,000 ರೂ. ನಗದು ಹಾಗೂ ಸ್ಮರಣ ಸಂಚಿಕೆಯನ್ನು ಒಳಗೊಂಡಿದೆ ಎಂದು ಅವರು ತಿಳಿಸಿದರು.
ಇವರಲ್ಲದೇ ಸಾಹಿತಿ ಪ್ರೊಫೆಸರ್ ಹೆಚ್ ಎ ಬಿಕ್ಷಾವರ್ತಿಮಠ ಅವರಿಗೆ ಶೂನ್ಯ ಪೀಠ ಚನ್ನಬಸವ ಪ್ರಶಸ್ತಿ, ಸ್ವಾತಂತ್ರ್ಯ ಹೋರಾಟಗಾರ್ತಿ ಚೆನ್ನಮ್ಮ ಹಳ್ಳಿಕೇರಿ ಅವರಿಗೆ 'ಶೂನ್ಯ ಅಕ್ಕನಾಗಮ್ಮ' ಪ್ರಶಸ್ತಿ ನೀಡಲಾಗುವುದು, ಇವರೆಡು ರೂ. 25000 ಹಾಗೂ ಸ್ಮರಣ ಸಂಚಿಕೆ ಒಳಗೊಂಡಿವೆ ಎಂದು ಅವರು ತಿಳಿಸಿದರು.
ಮುರುಘಾ ಮಠದ ಮುಖ್ಯಸ್ಥರಾದ ಡಾ. ಶಿವಮೂರ್ತಿ ಮುರುಘಾ ಶರಣರು ಈ ಪ್ರಶಸ್ತಿಗಳನ್ನು ನೀಡಲಿದ್ದು, ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್, ಶಾಸಕ ಎಸ್. ರಾಮಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದರು.
Advertisement