ಎದುರಾಳಿಯ ಪಂಚ್ ಗೆ ಪ್ರಾಣ ಕಳೆದುಕೊಂಡ ಕಿಕ್ ಬಾಕ್ಸರ್: ಮೈಸೂರಿನ ಯುವಕ ನಿಖಿಲ್ ಸುರೇಶ್ ಸಾವು
ಮೈಸೂರು/ಬೆಂಗಳೂರು: ಕೆಲವೊಮ್ಮೆ ಕ್ರೀಡೆಯಲ್ಲಿ ಎಷ್ಟೇ ತರಬೇತಿಯಿದ್ದರೂ, ಎದುರಿಗೆ ತರಬೇತುದಾರರು ಇದ್ದರೂ ಕೂಡ ಸ್ವಲ್ಪ ಎಚ್ಚರ ತಪ್ಪಿದರೂ ಪ್ರಾಣಕ್ಕೇ ಕುತ್ತು ಬರಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಮೈಸೂರಿನ ಹೊಸಕೇರಿ ನಿವಾಸಿ 23 ವರ್ಷದ ಯುವಕ ನಿಖಿಲ್ ಸುರೇಶ್ ಎದುರಾಳಿಯ ಒಂದೇ ಒಂದು ಏಟಿಗೆ ಗಂಭೀರ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡಿ ಪ್ರಾಣ ಕಳೆದುಕೊಂಡಿದ್ದಾರೆ.
ಆಗಿದ್ದೇನು?: ಮೊನ್ನೆ ಜುಲೈ 10 ರಂದು ಬೆಂಗಳೂರಿನ ಕೆಂಗೇರಿಯಲ್ಲಿ A-1 ಕಿಕ್ ಬಾಕ್ಸರ್ ಸಂಘಟನೆ ವತಿಯಿಂದ ಸ್ಪರ್ಧೆ ಆಯೋಜನೆಗೊಂಡಿತ್ತು. ಈ ವೇಳೆ ರಿಂಗ್‌ನಲ್ಲಿ ಸೆಣಸಾಡುತ್ತಿದ್ದಂತೆ ಎದುರಾಳಿಯ ಏಟಿಗೆ ನಿಖಿಲ್ ಗಂಭೀರ ಗಾಯಗೊಂಡಿದ್ದರು.
ಎದುರಾಳಿ ತಲೆಗೆ ಹೊಡೆದ ಒಂದೇ ಏಟಿಗೆ ಬಾಕ್ಸಿಂಗ್ ರಿಂಗ್ ನಲ್ಲಿಯೇ ನಿಖಿಲ್ ಕೆಳಗೆ ಬಿದ್ದಿದ್ದರು. ತಕ್ಷಣ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಎರಡು ದಿನಗಳ ಕಾಲ ಕೋಮಾದಲ್ಲಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಕಿಕ್ ಬಾಕ್ಸಿಂಗ್ ವೇಳೆ ನಿಖಿಲ್ ಅವರ ಶ್ವಾಸಕೋಶಕ್ಕೆ ಬಲವಾದ ಪೆಟ್ಟು ಬಿದ್ದಿತ್ತು. ಒಳಭಾಗದಲ್ಲಿ ತೀವ್ರ ರಕ್ತಸ್ರಾವವಾಗಿತ್ತು. ಇಲ್ಲಿ ಆಗಿದ್ದ ಲೋಪವೆಂದರೆ ತುರ್ತು ಚಿಕಿತ್ಸೆಗೆ ಆ್ಯಂಬುಲೆನ್ಸ್, ಸ್ಟ್ರೆಚರ್ ವ್ಯವಸ್ಥೆ ಮಾಡದೆ ಸ್ಪರ್ಧೆ ಆರಂಭಿಸಲಾಗಿತ್ತು.
ನಿಖಿಲ್ ತಂದೆ ಸುರೇಶ್ ಕರಾಟೆ ಪಟು. ನಿಖಿಲ್ ಮೈಸೂರಿನ ಜಯನಗರದ ವಿಕ್ರಂ ಬಳಿ ತರಬೇತಿ ಪಡೆಯುತ್ತಿದ್ದರು. ಘಟನೆ ಬಳಿಕ ಕಿಕ್ ಬಾಕ್ಸಿಂಗ್ ಆಯೋಜಿಸಿದ್ದ ರವಿಶಂಕರ್ ಪರಾರಿಯಾಗಿದ್ದು ಜ್ಞಾನಭಾರತಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ನಿಖಿಲ್ ತಂದೆ ಎಫ್ಐಆರ್ ದಾಖಲಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ