ನಟ-ಚೆಫ್ ಆದಿತ್ಯ ಬಾಲ್ ಗೆ ಸೈಬರ್ ಅಪರಾಧಿಗಳಿಂದ 99 ಸಾವಿರ ರೂ. ವಂಚನೆ
ಬೆಂಗಳೂರು: ಕೋವಿಡ್‌ನಿಂದ ಬಳಲುತ್ತಿರುವ ತನ್ನ ಸ್ನೇಹಿತನ ತಾಯಿಗೆ ಬಿ-ನೆಗೆಟಿವ್ ರಕ್ತಕ್ಕಾಗಿ ಆನ್‌ಲೈನ್‌ನಲ್ಲಿ ಹುಡುಕುತ್ತಿರುವಾಗ 'ದಿ ಚಖ್ ಲೆ ಇಂಡಿಯಾ - ಕುಕ್‌ಬುಕ್' ಲೇಖಕ, ಮಾಡೆಲ್, ನಟ ಮತ್ತು ಖ್ಯಾತ ಚೆಫ್ ಆದಿತ್ಯ ಬಾಲ್ ಅವರು ಸೈಬರ್ ವಂಚನೆಗೆ ಒಳಗಾಗಿದ್ದಾರೆ.
ತಾವು ಬ್ಲಡ್ ಬ್ಯಾಂಕ್ ನವರು ಎಂದು ಹೇಳಿಕೊಂಡ ಆರೋಪಿ, ಆಸ್ಪತ್ರೆ ದಾಖಲಾತಿ ಶುಲ್ಕವಾಗಿ 5 ರೂ. ನೀಡುವಂತೆ ಕೇಳಿಕೊಂಡಿದ್ದಾರೆ. ನಂತರ ನಡೆದ ಎರಡು ವಹಿವಾಟುಗಳಲ್ಲಿ ಯುಪಿಐ ಹಣ ವರ್ಗಾವಣೆ ಮೂಲಕ ಬಾಲ್ ಅವರು 99,000 ಕಳೆದುಕೊಂಡಿದ್ದಾರೆ. ಘಟನೆ ನಡೆದಾಗ ಅವರು ಬಿದರಹಳ್ಳಿಯ ಬೂದಿಗೆರೆ ಕ್ರಾಸ್ ಬಳಿಯ ಹಳೆ ಮದ್ರಾಸ್ ರಸ್ತೆಯ ಪ್ರೆಸ್ಟೀಜ್ ಗ್ಲೆನ್‌ವುಡ್ ಅಪಾರ್ಟ್‌ಮೆಂಟ್‌ನಲ್ಲಿದ್ದರು.
ದೆಹಲಿಯಿಂದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜತೆ ಮಾತನಾಡಿದ ಚೆಫ್, ನಾನು ಯಾವುದೇ OTP ಅಥವಾ ಇತರ ವಿವರಗಳನ್ನು ಹಂಚಿಕೊಳ್ಳದ ಕಾರಣ ಹಣ ಹೇಗೆ ಹೋಯಿತು ಎಂದು ನಿಖರವಾಗಿ ತಿಳಿದಿಲ್ಲ ಎಂದಿದ್ದಾರೆ. ಆರಂಭದಲ್ಲಿ 5 ರೂ. ವರ್ಗಾವಣೆ ಮಾಡಲು ಲಿಂಕ್ ಅನ್ನು ಕ್ಲಿಕ್ ಮಾಡಿದ ನಂತರ ಆರೋಪಿಯು ತನ್ನ UPI ವಿಂಡೋಗೆ ಪ್ರವೇಶ ಪಡೆದಿರಬಹುದು ಎಂದು ಅವರು ಶಂಕಿಸಿದ್ದಾರೆ. ಈ ಸಂಬಂಧ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
“ಕೋಲ್ಕತ್ತಾದಲ್ಲಿರುವ ನನ್ನ ಸ್ನೇಹಿತನ ವಯಸ್ಸಾದ ತಾಯಿ, ಕೋವಿಡ್‌ನಿಂದ ಬಳಲುತ್ತಿದ್ದು, ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ತುರ್ತಾಗಿ ಬಿ ನೆಗೆಟಿವ್ ರಕ್ತದ ಅವಶ್ಯಕತೆ ಇದ್ದುದರಿಂದ ನಾನು ಸಹಾಯ ಮಾಡುತ್ತಿದ್ದೆ ಎಂದು ಬಾಲ್ ತಿಳಿಸಿದ್ದಾರೆ.


