
ಚಾಮರಾಜನಗರ: ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನಲ್ಲಿರುವ ಮಲೆಮಹದೇಶ್ವರ ಬೆಟ್ಟಕ್ಕೆ ದಿನಾಲೂ ಸಾವಿರಾರು ಭಕ್ತರು ಬರುತ್ತಾರೆ. ಅದರಲ್ಲೂ ಅಮಾವಾಸ್ಯೆ ದಿನದಂದು ಲಕ್ಷಾಂತರ ಭಕ್ತರು ಮಾದಪ್ಪನ ಸನ್ನಿಧಾನಕ್ಕೆ ಆಗಮಿಸಿದ್ದರು.
ಗುರುವಾರ ಭೀಮನ ಅಮಾವಾಸ್ಯೆ ಆಗಿದ್ದರಿಂದ ಲಕ್ಷಾಂತರ ಭಕ್ತರು ಮಾದಪ್ಪನ ದರ್ಶನಕ್ಕೆ ಬಂದಿದ್ದರು. ಈ ವೇಳೆ ವಿಶೇಷ ದರ್ಶನ ಮುಗಿಸಿ ಸೇವಾ ಕೌಂಟರ್‌ಗೆ ಬಂದ ಭಕ್ತನಿಗೆ ಇಲ್ಲಿನ ಸಿಬ್ಬಂದಿ ಆಚಾತುರ್ಯವಾಗಿ ಲಾಡು ಪ್ರಸಾದದ ಜೊತೆ 2 ಲಕ್ಷ ಹಣವಿದ್ದ ಬ್ಯಾಗ್ ನೀಡಿದ್ದಾರೆ.
ಮಹದೇಶ್ವರ ಬೆಟ್ಟದಲ್ಲಿ ಸಿಬ್ಬಂದಿ ಕಣ್ತಪ್ಪಿನಿಂದ ಪ್ರಸಾದದ ಜೊತೆಗೆ 2 ಲಕ್ಷ ರೂಪಾಯಿ ಭಕ್ತನ ಪಾಲಾಗಿದೆ. ವಿಶೇಷ ದರ್ಶನಕ್ಕೆ ಟಿಕೆಟ್ ನೀಡಲು ಕುಳಿತಿದ್ದ ಸಿಬ್ಬಂದಿ ಭಕ್ತನಿಗೆ ಲಾಡು ಜೊತೆಗೆ ಹಣದ ಚೀಲ ನೀಡಿದ್ದಾರೆ. ಲಾಡು ಪ್ರಸಾದ ಇಟ್ಟಿದ್ದ ಬ್ಯಾಗ್ ಸಮೀಪ ಹಣವನ್ನು ಸಹ ಇಡಲಾಗಿದ್ದ ಹಿನ್ನೆಲೆ ಹಣ ಸಹಿತ ಬ್ಯಾಗ್ ಅನ್ನು ಸಿಬ್ಬಂದಿ ಭಕ್ತನಿಗೆ ನಿಡಿದ್ದಾರೆ.
ಈ ಬ್ಯಾಗನ್ನು ತೆಗೆದುಕೊಂಡ ಭಕ್ತ ನಾಲ್ಕೈದು ಹೆಜ್ಜೆ ಮುಂದೆ ಹೋಗಿ ಬ್ಯಾಗ್ ಒಳಗೆ ನೋಡಿದ್ದಾನೆ. ಅದರಲ್ಲಿ ಹಣವಿರುವುದನ್ನೂ ನೋಡಿದ್ರೂ ಅದನ್ನು ವಾಪಸ್ ಕೊಡದೇ ಹಾಗೇಯೇ ಹೋಗಿದ್ದಾನೆ. ಹಣವಿದ್ದ ಬ್ಯಾಗ್ ಅನ್ನು ಭಕ್ತ ಗಮನಿಸಿದರೂ ಕೂಡ ಹಣ ಹಿಂದುರುಗಿಸದೆ ಹಣದ ಚೀಲವನ್ನು ತೆಗೆದುಕೊಂಡು ಹೋಗಿದ್ದಾನೆ. ಈ ದೃಶ್ಯಾವಳಿ ಸಂಪೂರ್ಣವಾಗಿ ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿದೆ. ಸದ್ಯ ಭಕ್ತನ ವಿರುದ್ಧ ಮಲೆಮಹದೇಶ್ವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement