
ಕೋಲಾರ: 150 ಕೋಟಿ ಬೆಲೆ ಬಾಳುವ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಹಂಚಿರುವ ಆರೋಪದಡಿ ಕೋಲಾರ ಜಿಲ್ಲೆಯ ಮಾಲೂರು ಕ್ಷೇತ್ರದಲ್ಲಿ ಶಾಸಕ ಕೆ.ವೈ ನಂಜೇಗೌಡ ವಿರುದ್ಧ ಮಾಲೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ನ್ಯಾಯಾಲಯದ ಆದೇಶದ ಮೇರೆಗೆ ಪೊಲೀಸರು ಶಾಸಕರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು,ಶಾಸಕರಿಗೆ ಸಂಕಷ್ಟ ಎದುರಾಗಿದೆ. 2019 ಇಸವಿಯ ಜುಲೈ ತಿಂಗಳಲ್ಲಿ ಸರ್ಕಾರಿ ಜಮೀನನ್ನು ಅಕ್ರಮವಾಗಿ ಮಂಜೂರು ಮಾಡಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ರಾಜಣ್ಣ ಎಂಬುವವರು ದೂರು ನೀಡಿದ್ದರು.
ಅಂದಿನ ಮಾಲೂರು ತಹಶೀಲ್ದಾರ್ ನಾಗರಾಜ್ (ಈಗ ಕೋಲಾರ ತಹಶೀಲ್ದಾರ್), ದರಖಾಸ್ತು ಸಮಿತಿಯ ಅಧಿಕಾರೇತರ ಸದಸ್ಯರಾಗಿದ್ದ ದೊಮ್ಮಲೂರು ಡಿ.ನಾಗರಾಜ್, ನಲ್ಲಾಂಡಹಳ್ಳಿ ಎಸ್.ನಾಗಪ್ಪ, ಅಬ್ಬೇನಹಳ್ಳಿ ಎನ್.ಲಕ್ಷ್ಮಮ್ಮ ಹಾಗೂ ಇನ್ನಿತರರ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಒಂದೇ ತಿಂಗಳಲ್ಲಿ ನಾಲ್ಕು ಬಾರಿ ಸಭೆ ನಡೆಸಿ ಮಂಜೂರು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ದರಖಾಸ್ತು ಕಮಿಟಿಯ ಅಧ್ಯಕ್ಷರು ಸಹ ಶಾಸಕ ಕೆ.ವೈ ನಂಜೇಗೌಡ ಆಗಿದ್ದು ನಕಲಿ ದಾಖಲೆಗಳನ್ನು ನೀಡಿ ಜಮೀನು ಮಂಜೂರು ಮಾಡಿರುವ ಆರೋಪ ಸಹ ಕೇಳಿಬಂದಿದೆ. ಇದನ್ನು ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ರಾಜಣ್ಣ ಎಂಬುವವರು ಒಟ್ಟು 9 ಜನರ ವಿರುದ್ಧ ದೂರು ನೀಡಿದ್ದರು.
2022ರ ಆಗಸ್ಟ್ 30ರಂದು ಮಾಲೂರು ಠಾಣೆಗೆ ದೂರು ಸಲ್ಲಿಸಲಾಗಿತ್ತು. ಆದರೆ, ಠಾಣಾಧಿಕಾರಿ ನೋಂದಣಿ ಮಾಡಿಕೊಂಡಿರಲಿಲ್ಲ’ ಎಂದು ಆಕ್ಷೇಪಿಸಿ ರಾಜಣ್ಣ ನ್ಯಾಯಾಲಯದ ಮೆಟ್ಟಿಲೇರಿದ್ದರು.
Advertisement