ಶಿಕ್ಷಣ ಬದಲಾವಣೆಯ ಶಕ್ತಿಯುತ ಸಾಧನ: ರೇವಾ ವಿವಿ 7ನೇ ಘಟಿಕೋತ್ಸವದಲ್ಲಿ ಎಂ.ವೆಂಕಯ್ಯನಾಯ್ಡು
ಬೆಂಗಳೂರು: ಶಿಕ್ಷಣವು ಬದಲಾವಣೆಯ ಶಕ್ತಿಯುತ ಸಾಧನವಾಗಿದ್ದು, ಅದು ಯಾವುದೇ ದೇಶದ ಅಭಿವೃದ್ಧಿಯ ವೇಗವನ್ನು ಹೆಚ್ಚಿಸುತ್ತದೆ. ಅಭಿವೃದ್ಧಿಯ ನಿಟ್ಟಿನಲ್ಲಿ ಶಿಕ್ಷಣವು ದೇಶದ ಭವಿಷ್ಯದ ದಿಕ್ಸೂಚಿಯನ್ನು ಸಕಾರಾತ್ಮಕವಾಗಿ ಬದಲಿಸುವ ಅತ್ಯಗತ್ಯವಾದ ಸಾಧನವಾಗಿದೆ ಎಂದು ಮಾಜಿ ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಅಭಿಪ್ರಾಯಪಟ್ಟರು.
ರೇವಾ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿದ್ದ 7ನೇ ಘಟಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೇವಾ ವಿ.ವಿ.ಯ ಘಟಿಕೋತ್ಸವದಲ್ಲಿ ಪಾಲ್ಗೊಂಡಿರುವುದು ಅತೀವ ಸಂತೋಷ ಉಂಟು ಮಾಡಿದೆ. ಶಿಕ್ಷಣವನ್ನು ಅಭಿವೃದ್ಧಿಯ ನಿಯೋಗವನ್ನಾಗಿ ಬಳಸಿಕೊಳ್ಳಬೇಕು, ಶೈಕ್ಷಣಿಕ ಕ್ಷೇತ್ರದಲ್ಲಿ ಭ್ರಷ್ಟಾಚಾರಕ್ಕಾಗಲಿ, ಆಮಿಷಕ್ಕಾಗಲಿ ಅವಕಾಶ ನೀಡಬಾರದು. ಶಿಕ್ಷಣ ಕ್ಷೇತ್ರದ ಉನ್ನತಿಗಾಗಿ ಸರ್ಕಾರಿ ಕ್ಷೇತ್ರ, ಖಾಸಗಿ ಕ್ಷೇತ್ರಗಳು ಒಗ್ಗಟ್ಟಾಗಿ ಕಠಿಣ ಪರಿಶ್ರಮ ವಹಿಸಬೇಕು. ದೇಶವನ್ನು ಶೈಕ್ಷಣಿಕ ಕ್ಷೇತ್ರದಲ್ಲಿ ಹೆಚ್ಚು ಶಕ್ತಿಯುತ ಗೊಳಿಸುವ ನಿಟ್ಟಿನಲ್ಲಿ ಸಂಶೋಧನೆಗೆ ಹೆಚ್ಚು ಒತ್ತು ನೀಡಬೇಕಿದೆ. ಇದಕ್ಕಾಗಿ ಸರ್ಕಾರಿ ಮತ್ತು ಖಾಸಗಿ ಔದ್ಯೋಗಿಕ ಕ್ಷೇತ್ರಗಳು ಯುವಕರಿಗೆ ಸ್ಪೂರ್ತಿ ನೀಡುವುದು ನಮ್ಮ ಆಧ್ಯಕರ್ತವ್ಯವೆಂದು ಭಾವಿಸಿ ಕಾರ್ಯನಿರ್ವಹಿಸಬೇಕು, ಯುವಕರಿಗೆ ಸೂಕ್ತ ರೀತಿಯಲ್ಲಿ ಉದ್ಯೋಗಾವಕಾಶ ಕಲ್ಪಿಸಿಕೊಡುವಲ್ಲಿ ತಮ್ಮ ಕಾಳಜಿ ತೋರಬೇಕು. ಯುವಕರು ದೇಶದ ಭವಿಷ್ಯದ ಬುನಾದಿಯಾಗಿದ್ದು, ದೇಶವನ್ನು ಪ್ರಗತಿಪಥದಲ್ಲಿ ಕೊಂಡೊಯ್ಯುವ ಮಹತ್ವದ ಜವಾಬ್ದಾರಿ ಯುವಜನತೆಯ ಕೈಯಲ್ಲಿದೆ. ಇದನ್ನು ಯುವಕರು ಮನನ ಮಾಡಿಕೊಂಡು ಸಾಧನೆಯ ಹಾದಿಯಲ್ಲಿ ಮುನ್ನುಗ್ಗಬೇಕಿದೆ ಎಂದರು.
ಕಾರ್ಯಕ್ರಮ ಉದ್ದೇಶಿಸಿ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಮಾತನಾಡಿ, ‘2004ರಲ್ಲಿ ಸ್ಥಾಪಿತವಾದ ರೇವಾ ವಿ.ವಿ. ಸಮರ್ಥ ರೀತಿಯ ಶೈಕ್ಷಣಿಕ ಸೇವೆಯ ಮೂಲಕ ಇಂದು ದೇಶದ 50 ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಮುಂಚೂಣಿಯ ಹೆಸರು ಗಳಿಸಿಕೊಂಡಿರುವುದು ಸಂತೋಷದ ಸಂಗತಿ. ಇದಕ್ಕಾಗಿ ರೇವಾ ವಿ.ವಿ.ಯ ಮುಖ್ಯಸ್ಥರಾದ ಪಿ.ಶ್ಯಾಮರಾಜುರವಿಗೆ ಧನ್ಯವಾದ ತಿಳಿಸಲಿಚ್ಚಿಸುತ್ತೇನೆ ಎಂದರು.
ರೇವಾ ವಿ.ವಿ. ಕುಲಪತಿ ಡಾ.ಪಿ.ಶ್ಯಾಮರಾಜು ಮಾತನಾಡಿ ‘ರೇವಾ ವಿ.ವಿ.ಯಲ್ಲಿಂದು 7ನೇ ಘಟಿಕೋತ್ಸವ ಆಚರಿಸಲಾಗಿದ್ದು, ಇಂದು 4633 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಿದ್ದೇವೆ. ಈ ಪೈಕಿ 52 ವಿದ್ಯಾರ್ಥಿಗಳಿಗೆ ಪಿಹೆಚ್‌ಡಿ ಪದವಿ ಪ್ರದಾನ ಮಾಡಲಾಗಿದೆ. ಸುಮಾರು 60 ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಶೈಕ್ಷಣಿಕ ಸಾಧನೆಗಾಗಿ ಚಿನ್ನದ ಪದಕ ವಿತರಿಸಿದ್ದೇವೆ ಎಂದು ತಿಳಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ