ಬೆಂಗಳೂರು: ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಉದ್ಘಾಟಿಸಲು ನಾಳೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಈ ಶುಭ ಸಂದರ್ಭದಲ್ಲಿ ಬೆಂಗಳೂರಿಗೆ ಮತ್ತೊಂದು ಖುಷಿಯ ವಿಚಾರ ಸಿಕ್ಕಿದೆ. ಕೆಂಪೇಗೌಡ ಪ್ರತಿಮೆ ಹೊಸ ದಾಖಲೆ ಸೃಷ್ಟಿಸಿದೆ. ಸ್ಟೇಟ್ ಆಫ್ ಪ್ರಾಸ್ಪರೆಟಿ ಹೆಸರಿನಲ್ಲಿ ನಿರ್ಮಿಸಲಾದ ಈ ಪ್ರತಿಮೆಯು ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರಿದೆ.
ಇದು ನಗರ ಸ್ಥಾಪಕರ ವಿಭಾಗದ ಪ್ರಥಮ ಮತ್ತು ಈ ವಿಭಾಗದಲ್ಲಿ ಅತಿ ಎತ್ತರದ ಕಂಚಿನ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ "ಪ್ರಗತಿಯ ಪ್ರತಿಮೆ"ಯು ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಅನುಸಾರ ಮೊದಲ ಹಾಗೂ ಅತ್ಯಂತ ಎತ್ತರದ ಕಂಚಿನ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ನಮಗೆ ಹೆಮ್ಮೆಯ ವಿಷಯ.108 ಅಡಿಯ ಈ ಪ್ರತಿಮೆ ಕೆಂಪೇಗೌಡರ ದೂರದೃಷ್ಟಿಯ ಬೆಂಗಳೂರನ್ನು ಬಿಂಬಿಸುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಬೆಂಗಳೂರು ಹಾಗೂ ಕರ್ನಾಟಕದ ಹಲವರು ಟ್ವೀಟ್ ಮಾಡಿದ್ದಾರೆ.
ಪ್ರಗತಿಯ ಪ್ರತಿಮೆಯನ್ನು ನಿರ್ಮಾಣ ಮಾಡಿದ್ದು ಕರ್ನಾಟಕ ಸರ್ಕಾರ. ಕೆಂಪೇಗೌಡ ಪ್ರತಿಮೆಯು 108 ಅಡಿ ಎತ್ತರವಿದ್ದು, 4 ಟನ್ ತೂಕದ ಖಡ್ಗವನ್ನು ನಾಡಪ್ರಭು ಕೆಂಪೇಗೌಡರ ಕೈಗೆ ಅಳವಡಿಸಲಾಗಿದೆ. ಸುಮಾರು 65 ಕೋಟಿ ರೂಪಾಯಿ ವೆಚ್ಚದಲ್ಲಿ 108 ಅಡಿ ಎತ್ತರದ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಪ್ರತಿಮೆ ಮುಂಭಾಗ 23 ಎಕರೆಯಲ್ಲಿ ಬೃಹತ್ ಪಾರ್ಕ್ ಇದೆ. ಕೆಂಪೇಗೌಡರ ಬದುಕಿನ ಕತೆಗಳನ್ನು ತಿಳಿಸುವ ವಿಶೇಷ ಥೀಮ್ ಪಾರ್ಕ್ ಕೂಡ ಇಲ್ಲಿದೆ.
ನಾಳೆ ಪ್ರಧಾನಿ ನರೇಂದ್ರ ಮೋದಿಯವರು ಈ ಕೆಂಪೇಗೌಡ ಪ್ರತಿಮೆ ಉದ್ಘಾಟಿಸಲಿದ್ದಾರೆ. ಇದರೊಂದಿಗೆ ಬೆಂಗಳೂರಿನ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(KIA)ದ ಟರ್ಮಿನಲ್ 2ರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಬೆಂಗಳೂರಿನ ಸೌಂದರ್ಯದ ಅನುಭವ ನೀಡಲು, 'ವಾಕ್ ಇನ್ ದಿ ಗಾರ್ಡನ್' ಹೆಸರಿನ ಟರ್ಮಿನಲ್ 2ನ್ನು ನಿರ್ಮಿಸಲಾಗಿದೆ.
Advertisement