ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರಗತಿ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು. ವೀಕೆಂಡ್ ನಲ್ಲಿ ಪ್ರತಿಮೆ ನೋಡಲು ಹೋದ ಸಾವಿರಾರು ಜನರಿಗೆ ನಿರಾಸೆ ಕಾದಿತ್ತು.
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ 'ಪ್ರಗತಿಯ ಪ್ರತಿಮೆ' ಎಂದೇ ಕರೆಯಲ್ಪಡುವ ನಾಡಪ್ರಭು ಕೆಂಪೇಗೌಡರ 108 ಎತ್ತರದ ಪ್ರತಿಮೆ ಇದೆ. ಭಾನುವಾರ ರಜೆ ದಿನವಾದ ಕಾರಣ ನೂರಾರು ಜನರು ಪ್ರತಿಮೆ ನೋಡಲು ಆಗಮಿಸಿದ್ದರು. ಪ್ರತಿಮೆಯ ಸಮೀಪ ಭಾನುವಾರ ಜನರನ್ನು ಬಿಡಲಿಲ್ಲ. ಗೇಟ್ ಹಾಕಲಾಗಿದ್ದು, ಪ್ರತಿಮೆ ನೋಡಲು ಹೋದ ಜನರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಗೇಟ್ ಹಾಕುವುದಿದ್ದರೆ ಉದ್ಘಾಟನೆ ಮಾಡಿದ್ದು ಯಾಕೆ? ಎಂದು ಪ್ರಶ್ನಿಸಿದರು. ಕೇವಲ ರಾಜಕಾರಣಿಗಳಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆಯೇ ಎಂದು ಪ್ರಶ್ನಿಸಿದರು.
ವಾರಾಂತ್ಯದ ಪ್ರವಾಸಕ್ಕೆಂದು ಹೊರಗೆ ಹೋಗಿದ್ದಾಗ ಪ್ರತಿಮೆಯನ್ನು ಹತ್ತಿರದಿಂದ ನೋಡಬೇಕೆಂದುಕೊಂಡೆ. ಆದರೆ ಅಧಿಕಾರಿಗಳು ಗೇಟ್‌ಗಳನ್ನು ಮುಚ್ಚಿ ಸಾರ್ವಜನಿಕರನ್ನು ಆವರಣದಿಂದ ಹೊರಹೋಗುವಂತೆ ಒತ್ತಾಯಿಸಿದರು. ಇದರಿಂದ ನನಗೆ ಬೇಸರವಾಯಿತು ಎಂದು ಬಸವನಗುಡಿ ನಿವಾಸಿ ಕೆ. ನಿರಂಜನ್ ಹೇಳಿದ್ದಾರೆ.
‘ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಈ ಪ್ರತಿಮೆ ನಿರ್ಮಿಸಿದೆ. ಅದನ್ನು ನೋಡಲು ಜನರಿಗೆ ಅವಕಾಶ ನೀಡದಿದ್ದರೆ ಏನು ಅರ್ಥ. ಇದು ಕೇವಲ ರಾಜಕಾರಣಿಗಳಿಗೆ ಮಾತ್ರ ಸೀಮಿತವೇ? ಎಂದು ನಂದಿ ಬೆಟ್ಟಕ್ಕೆ ತೆರಳಿ ಹಾಗೆಯೇ ಪ್ರತಿಮೆ ನೋಡಲು ಬಂದಿದ್ದ ಬಾಣಸವಾಡಿಯ ಚಂದ್ರಕಲಾ ಗೋಪಿನಾಥ್ ಬೇಸರ ವ್ಯಕ್ತಪಡಿಸಿದ್ದಾರೆ.
ಗುಜರಾತ್‌ನಲ್ಲಿ ಏಕತಾ ಪ್ರತಿಮೆ ಯೋಜನೆಯ ಉಸ್ತುವಾರಿ ವಹಿಸಿಕೊಂಡಿದ್ದ ರಾಮ್ ವಿ ಸುತಾರ್ ಅವರ ಪರಿಕಲ್ಪನೆ ಮತ್ತು ಕೆತ್ತನೆಯಲ್ಲಿ 98 ಟನ್ ಕಂಚು ಮತ್ತು 120 ಟನ್ ಉಕ್ಕಿನಿಂದ ಈ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ನಾಡಪ್ರಭು ಕೆಂಪೇಗೌಡರ ಪ್ರತಿಮೆ ಈಗಾಗಲೇ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಸೇರಿದೆ.
Advertisement