ಬೆಂಗಳೂರು: ಭ್ರಷ್ಟಾಚಾರ, ನಾಗರಿಕ ಜೀವನದ ಹತಾಶೆಗಳಿಂದ ಭ್ರಮನಿರಸನಕ್ಕೆ ಒಳಗಾಗಿರುವ ನಿವೃತ್ತ ಯೋಧರ ತಂಡವೊಂದು ಕೊಳೆತ ರಾಜಕೀಯ ವ್ಯವಸ್ಥೆಯನ್ನು ಸ್ವಚ್ಛಗೊಳಿಸುವುದಕ್ಕೆ ತಾವೇ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಲು ಮುಂದಾಗಿದೆ.
ಬ್ರಿಗೇಡಿಯರ್ ರವಿ ಮುನಿಸ್ವಾಮಿ, ಸೈನಿಕ ಕಲ್ಯಾಣದ ಮಾಜಿ ನಿರ್ದೇಶಕ ಮೇಜರ್ ರಘುರಾಮ್ ರೆಡ್ಡಿ ಹಾಗೂ ಸುಬೇದಾರ್ ರಮೇಶ್ ಜಗತಾಪ್ ಹೊಸ ರಾಜಕೀಯ ಪಕ್ಷ ಕಟ್ಟುವ ನಿಟ್ಟಿನಲ್ಲಿ ಬಾಗಲಕೋಟೆ, ವಿಜಯಪುರ, ಬೆಳಗಾವಿ, ಹಾವೇರಿ, ಹುಬ್ಬಳ್ಳಿ-ಧಾರವಾಡ ಹಾಗೂ ಇತರ ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದು, ಇಡೀ ಆಡಳಿತ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿರುವ ರೀತಿ ಹಾಗೂ ಭ್ರಷ್ಟಾಚಾರದ ಬಗ್ಗೆ ಹೆಚ್ಚಿನ ಸಂಖ್ಯೆಯ ಯೋಧರು, ನಿವೃತ್ತ ಸೈನಿಕರು ತೀವ್ರ ಅಸಮಾಧಾನ ಹೊಂದಿದ್ದು, ಹೊಸ ರಾಜಕೀಯ ಪಕ್ಷವನ್ನು ಸದೃಢಗೊಳಿಸಲು ಸ್ವಯಂಸೇವಕರಾಗಿ ಕಾರ್ಯನಿರ್ವಹಿಸುವ ಇಚ್ಛೆ ಹೊಂದಿರುವುದನ್ನು ಮನಗಂಡಿದ್ದಾರೆ.
ನಿವೃತ್ತ ಯೋಧರ ತಂಡ ತನ್ನನ್ನು "ಸಾರ್ವಜನಿಕ ಆದರ್ಶ ಸೇನಾ" ಎಂದು ಗುರುತಿಸಿಕೊಂಡಿದ್ದು, ರಣ ಕಹಳೆಯನ್ನು ತಮ್ಮ ಚುನಾವಣೆಯ ಚಿಹ್ನೆಯಾಗಿ ಇರಿಸಿಕೊಳ್ಳಲು ಉದ್ದೇಶಿಸಿದೆ. ಕರ್ನಲ್ ರವಿ ಮುನಿಸ್ವಾಮಿ ಮಾತನಾಡಿ, "ಈ ಪಕ್ಷ ಸರ್ಕಾರದ ಕಾರ್ಯನಿರ್ವಹಣೆಯ ರೀತಿಯನ್ನು ಸುಧಾರಿಸುವುದು ಹಾಗೂ ಭ್ರಷ್ಟಾಚಾರ ನಿರ್ಮೂಲನೆ ಮಾಡುವುದು ಗುಣಮಟ್ಟದ ಶಿಕ್ಷಣ ಸೇರಿದಂತೆ ಅಗತ್ಯ ಸೇವೆಗಳನ್ನು ಉತ್ತೇಜಿಸುವುದಕ್ಕಾಗಿ ರೂಪುಗೊಳ್ಳಲಿದ್ದು, ಉತ್ತಮ ಸಮಾಜದೆಡೆಗೆ ಕೆಲಸ ಮಾಡಲು ಉದ್ದೇಶಿಸಿದೆ. ನಿವೃತ್ತ ಸೇನಾನಿಗಳು ರಾಜಕೀಯ ಪ್ರವೇಶಿಸುತ್ತಿದ್ದು, ಈ ಪಕ್ಷದ ಚಿಹ್ನೆಯನ್ನು ರಣಕಹಳೆಯನ್ನಾಗಿರಿಸಿಕೊಳ್ಳಲಾಗಿದೆ" ಎಂದು ತಿಳಿಸಿದ್ದಾರೆ.
Advertisement