ಬೆಂಗಳೂರಿನಲ್ಲಿ ಅನಾಮಧೇಯ ಸ್ವಾತಂತ್ರ್ಯ ಹೋರಾಟಗಾರರ ಹೆಸರಿನಲ್ಲಿ ಸ್ಮಾರಕ ನಿರ್ಮಾಣ: ಸಿಎಂ ಬೊಮ್ಮಾಯಿ

ಬೆಂಗಳೂರಿನ ಪ್ರಮುಖ ಸ್ಥಳದಲ್ಲಿ ಅನಾಮಧೇಯ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನೊಳಗೊಂಡ ಸ್ಮಾರಕವನ್ನು ನಿರ್ಮಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಘೋಷಿಸಿದರು.
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ
Updated on

ಮಂಗಳೂರು: ಬೆಂಗಳೂರಿನ ಪ್ರಮುಖ ಸ್ಥಳದಲ್ಲಿ ಅನಾಮಧೇಯ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನೊಳಗೊಂಡ ಸ್ಮಾರಕವನ್ನು ನಿರ್ಮಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಘೋಷಿಸಿದರು.

ಅವರು ಇಂದು ಮಂಗಳೂರಿನ ಬಾವುಟಗುಡ್ಡೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಅವರ ಪ್ರತಿಮೆಯನ್ನು ಅನಾವರಣಗೊಳಿಸಿ ಮಾತನಾಡಿದರು.

ದೇಶವಿದೇಶಗಳಲ್ಲಿ ಇಂತಹ ಸ್ಮಾರಕಗಳಿಗೆ ಬಹಳ ಮಹತ್ವವಿದೆ. ಇಂತಹ ಸ್ಮಾರಕಗಳು ನಮ್ಮ ಇತಿಹಾಸ, ಸಂಸ್ಕೃತಿ-ಪರಂಪರೆಗಳನ್ನು ಬಿಂಬಿಸುವ ಜೊತೆಗೆ ನಮ್ಮ ಅಸ್ಮಿತೆಯನ್ನೂ ಬಿಂಬಿಸುತ್ತದೆ. ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಭಾರತೀಯತೆ, ಇದಕ್ಕೆ ಪೂರಕವಾದ ಸರ್ಕಾರದ ನೀತಿಗಳು ಭಾರತದ ಅಸ್ಮಿತೆಯನ್ನು ಗಟ್ಟಿಗೊಳಿಸುತ್ತದೆ. ಭಾರತದ ಸ್ವಾತಂತ್ರ್ಯಕ್ಕಾಗಿ ಜೀವತೆತ್ತ ಅನೇಕ ಅನಾಮಧೇಯ ಹೋರಾಟಗಾರರ ಬಗ್ಗೆ ನಮ್ಮ ಯುವಜನತೆಗೆ , ದೇಶವಿದೇಶಗಳಿಗೆ ಅರಿವು ಮೂಡಿಸಬೇಕು. ಜಪಾನ್ ನಲ್ಲಿ ಸುಭಾಷ್ ಚಂದ್ರ ಬೋಸ್ ಪ್ರತಿಮೆ, ಅಮೆರಿಕಾದಲ್ಲಿ ಮಹಾತ್ಮಗಾಂದಿ ಸ್ಮಾರಕ ನಮಗೆ ಸ್ಪೂರ್ತಿ ನೀಡುತ್ತಿದೆ ಎಂದರು.

ಬೆಂಗಳೂರಿನಲ್ಲಿಯೂ ಕೆದಂಬಾಡಿ ರಾಮಯ್ಯ ಗೌಡರ ಸ್ಮಾರಕ ನಿರ್ಮಾಣ:

ಕೆದಂಬಾಡಿ ರಾಮಯ್ಯ ಗೌಡರ ಸ್ಮಾರಕವನ್ನು ಬೆಂಗಳೂರಿನಲ್ಲಿಯೂ ನಿರ್ಮಿಸಲಾಗುವುದು. ಅವರ ಜೀವನ ಚರಿತ್ರೆಯನ್ನು ಪಠ್ಯಪುಸ್ತಕದಲ್ಲಿಯೂ ಅಳವಡಿಸಲಾಗುವುದು. ಮಂಗಳೂರು ಭಾಗದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳನ್ನು ನಾಮಕರಣ ಮಾಡುವ ಬಗ್ಗೆ ಸೂಕ್ತ ನಿರ್ಣಯಗಳನ್ನು ಶೀಘ್ರದಲ್ಲಿ ತೆಗೆದುಕೊಳ್ಳಲಾಗುವುದು. ಲೋಕಮಾನ್ಯ ತಿಲಕರು, ಕಾಲಪಾನಿ ಶಿಕ್ಷೆ ಅನುಭವಿಸಿದ ಸಾರ್ವರ್ಕರ್ ರವರು, ಸುಭಾಷ್ ಚಂದ್ರಬೋಸ್, ಭಗತ್ ಸಿಂಗ್, ಚಂದ್ರಶೇಖರ ಆಜಾದ್ರವರ ತ್ಯಾಗಬಲಿದಾನಗಳನ್ನು ಮರೆಯಬಾರದು. ಇದನ್ನು ಮರೆಯುವವರು ನಿಜ ದೇಶಭಕ್ತರಾಗಲು ಸಾಧ್ಯವಿಲ್ಲ ಎಂದರು.

ರೈತರು ಯೋಧರಾದಾಗ ಕ್ರಾಂತಿಯಾಗುತ್ತದೆ:

ಭಾರತಕ್ಕೆ ಸ್ವಾತಂತ್ರ್ಯ ಸುಲಭವಾಗಿ ನಮಗೆ ದೊರಕಲಿಲ್ಲ. ಹಲವರು ತಮ್ಮ ಬದುಕು ಜೀವವನ್ನೇ ತ್ಯಾಗ ಮಾಡಿದ್ದಾರೆ. ಬ್ರಿಟೀಷರ ವಿರುದ್ಧ ಹೋರಾಟ ಮೊದಲು ರೈತರಿಂದ ಪ್ರಾರಂಭವಾಯಿತು.ಕೆದಂಬಾಡಿ ರಾಮಯ್ಯ ಗೌಡರು ರೈತ ಕುಟುಂಬದಲ್ಲಿ ಹುಟ್ಟಿ, ವೀರ ಯೋಧರಾಗಿ ಬ್ರಿಟೀಷರಿಗೆ ಸಿಂಹಸ್ವಪ್ನವಾಗಿದ್ದರು. ರೈತರು ಯೋಧರಾದಾಗ ಕ್ರಾಂತಿಯಾಗುತ್ತದೆ.  ಕಿತ್ತೂರು ರಾಣಿ ಚೆನ್ನಮ್ಮ, ಕೆಳದಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಯಂತಹ ಸ್ವಾತಂತ್ರ್ಯ ಹೋರಾಟಕ್ಕೆ ಇಳಿದಾಗ ಬ್ರಿಟೀಷರಿಗೆ ತಮಗೆ ಇನ್ನು ಉಳಿಗಾಲವಿಲ್ಲ ಎಂಬ ಸತ್ಯದ ಅರಿವಾಯಿತು. ಸರ್ದಾರ್ ವಲ್ಲಭಬಾಯಿ ಪಟೇಲರ ನೇತೃತ್ವದಲ್ಲಿ ನಡೆದ ರೈತ ಸತ್ಯಾಗ್ರಹ ಬ್ರಿಟೀಷರನ್ನು ಕಂಗೆಡಿಸಿತು ಎಂದರು.

ಸಮಾರಂಭದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಮೀನುಗಾರಿಕೆ ಮತ್ತು ಬಂದರು ಸಚಿವ ಎಸ್. ಅಂಗಾರ, ಐಟಿ, ಬಿಟಿ, ಉನ್ನತ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ,  ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದ ಗೌಡ, ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯ ಶಾಸಕರು, ಜಿಲ್ಲೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com