ಸರ್ಕಾರಿ ನೌಕರಿ, ಮುಂಬಡ್ತಿ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್: ಇಲಾಖಾ ಬಡ್ತಿ ತಡೆಹಿಡಿಯಲು ತಾತ್ಕಾಲಿಕ ಆದೇಶ

ನೇರ ನೇಮಕಾತಿ ಪದೋನ್ನತಿಯಲ್ಲಿ ಪರಿಶಿಷ್ಟರಿಗೆ ಮೀಸಲಾತಿಗೆ ರೋಸ್ಟರ್ ಅಂತಿಮಗೊಳಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈ ಪ್ರಕ್ರಿಯೆ ಅಂತಿಮವಾಗಿ ಅಧಿಕೃತವಾಗಿ ಪ್ರಕಟವಾಗುವವರೆಗೆ ನೇರ ನೇಮಕಾತಿ ಪ್ರಕ್ರಿಯೆ ಮತ್ತು ಮುಂಬಡ್ತಿ ತಡೆ ಹಿಡಿಯಬೇಕು ಎಂದು ನಿರ್ದೇಶನ ನೀಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿ ಅಧಿಸೂಚನೆ ಹೊರಡಿಸಿದ ಹಿನ್ನೆಲೆಯಲ್ಲಿ ಪರಿಷ್ಕೃತ ಮೀಸಲಾತಿ ಅನುಷ್ಠಾನಗೊಳ್ಳುವವರೆಗೆ ನೇರ ನೇಮಕಾತಿ ತಡೆಹಿಡಿಯಬೇಕು. ಮೀಸಲಾತಿ ಅನ್ವಯ ಮುಂಬಡ್ತಿ ನೀಡುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಇಲಾಖೆ ಮುಂಬಡ್ತಿ ಸಮಿತಿ ಸಭೆ ನಡೆಸಬಾರದು ಎಂದು ಮುಖ್ಯ ಕಾರ್ಯದರ್ಶಿಗಳು ಸುತ್ತೋಲೆ ಹೊರಡಿಸಿದ್ದಾರೆ.

ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು, ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ಸೂಚನೆ ನೀಡಿ, ಪರಿಶಿಷ್ಟರಿಗೆ ಶೈಕ್ಷಣಿಕ ಸಂಸ್ಥೆಗಳು, ಸರ್ಕಾರಿ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲು ಹೆಚ್ಚಿಸುವ ಸುಗ್ರೀವಾಜ್ಞೆ ನವೆಂಬರ್ 1 ರಿಂದ ಜಾರಿಗೆ ಬಂದಿದೆ. ನೇರ ನೇಮಕಾತಿ ಪದೋನ್ನತಿಯಲ್ಲಿ ಪರಿಶಿಷ್ಟರಿಗೆ ಮೀಸಲಾತಿಗೆ ರೋಸ್ಟರ್ ಅಂತಿಮಗೊಳಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈ ಪ್ರಕ್ರಿಯೆ ಅಂತಿಮವಾಗಿ ಅಧಿಕೃತವಾಗಿ ಪ್ರಕಟವಾಗುವವರೆಗೆ ನೇರ ನೇಮಕಾತಿ ಪ್ರಕ್ರಿಯೆ ಮತ್ತು ಮುಂಬಡ್ತಿ ತಡೆ ಹಿಡಿಯಬೇಕು ಎಂದು ನಿರ್ದೇಶನ ನೀಡಿದ್ದಾರೆ.

ಪರಿಶಿಷ್ಟ ಜಾತಿಯ ಮೀಸಲಾತಿ ಪ್ರಮಾಣ ಶೇಕಡ 15 ರಿಂದ ಶೇಕಡ 17ರಷ್ಟು, ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣ ಶೇಕಡ 3 ರಿಂದ ಶೇಕಡ 7ರಷ್ಟು ಏರಿಕೆಯಾಗಿದೆ. ಒಟ್ಟಾರೆ ಪರಿಶಿಷ್ಟ ಮೀಸಲಾತಿ ಪ್ರಮಾಣ ಶೇಕಡ 18 ರಿಂದ 24ಕ್ಕೆ ಹೆಚ್ಚಳ ಮಾಡಿ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ.

ಕಳೆದ 44 ವರ್ಷಗಳಿಂದ ಚಾಲ್ತಿಯಲ್ಲಿರುವ ವೇಟೇಜ್ ವ್ಯವಸ್ಥೆಯನ್ನು ಪರಿಶೀಲಿಸುವ ಜವಾಬ್ದಾರಿಯನ್ನು ಇಬ್ಬರು ಹಿರಿಯ ನಿವೃತ್ತ ಅಧಿಕಾರಿಗಳಿಗೆ , ಅಂದರೆ ಜಂಟಿ ಕಾರ್ಯದರ್ಶಿ ಶ್ರೇಣಿಯ ಒಬ್ಬರು ಮತ್ತು ಉಪ ಕಾರ್ಯದರ್ಶಿ ಶ್ರೇಣಿಯ ಇನ್ನೊಬ್ಬರಿಗೆ ವಹಿಸಲಾಗಿದೆ.

ಇಬ್ಬರು ಅಧಿಕಾರಿಗಳು ಈಗಾಗಲೇ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ, ಆದರೆ ಕೆಲವರು ಐದರಿಂದ ಆರು ತಿಂಗಳು ತೆಗೆದುಕೊಳ್ಳಬಹುದು ಎಂದು ಹೇಳುತ್ತಾರೆ. ವಿಧಾನಸಭೆ ಚುನಾವಣೆಯ ನಂತರ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ,  ಆದ್ಯತೆಗಳನ್ನು ಅವಲಂಬಿಸಿ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಈ ಸಮಸ್ಯೆ ಇತ್ಯರ್ಥವಾಗುವವರೆಗೆ ಯಾವುದೇ ಇಲಾಖೆ, ಮಂಡಳಿ, ನಿಗಮ, ವಿಶ್ವವಿದ್ಯಾನಿಲಯ ಅಥವಾ ನಿಯಮಗಳು ಅನ್ವಯವಾಗುವಲ್ಲಿ ಬಡ್ತಿ ಇರುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ.  ನಿವೃತ್ತಿಯ ಅಂಚಿನಲ್ಲಿರುವ ಅಧಿಕಾರಿಗಳು, ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಅಥವಾ 2023 ರ ಆರಂಭದಲ್ಲಿ ಬಡ್ತಿ ನೀಡಬೇಕಾಗಿದ್ದು, ಪ್ರಕ್ರಿಯೆಯನ್ನು ತ್ವರಿತಗೊಳಿಸದಿದ್ದಲ್ಲಿ, ಬಡ್ತಿ ಇಲ್ಲದೆ ಅದೇ ಹುದ್ದೆಗಳೊಂದಿಗೆ ನಿವೃತ್ತರಾಗುತ್ತಾರೆ ಎಂದು ಮೂಲಗಳು ತಿಳಿಸಿವೆ.

ಎಲ್ಲ ಹುದ್ದೆಗಳ ಮೀಸಲಾತಿ ಪ್ರಮಾಣವನ್ನು ಮರು ನಿಗದಿಪಡಿಸುವ ಪ್ರಕ್ರಿಯೆ ಪೂರ್ಣಗೊಂಡ ಬಳಿಕವಷ್ಟೇ ನೇರ ನೇಮಕಾತಿ ಹಾಗೂ ಮುಂಬಡ್ತಿ ಪ್ರಕ್ರಿಯೆಗಳು ಪುನಾರಂಭಗೊಳ್ಳಲಿವೆ. ಮುಂಬಡ್ತಿಗಾಗಿ ಕಾಯುತ್ತಿದ್ದ ಹಿಂದುಳಿದ ಮತ್ತು ಸಾಮಾನ್ಯ ವರ್ಗದ ಅಧಿಕಾರಿ ಮತ್ತು ನೌಕರರಿಗೆ ಇನ್ನಷ್ಟು ದಿನ ಬಡ್ತಿ ಸಿಗುವುದಿಲ್ಲ. ಹೊಸ ಮೀಸಲಾತಿ ಅನ್ವಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರಿಗೆ ಬಡ್ತಿ ಸಿಕ್ಕ ನಂತರ ಹಿಂದುಳಿದ ಮತ್ತು ಸಾಮಾನ್ಯದ ವರ್ಗದ ನೌಕರರಿಗೆ ಬಡ್ತಿ ಸಿಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com