ವಾಹನಗಳ ಮೇಲೆ ಮೂವಿಂಗ್ ಗಾರ್ಡನ್: ಅರ್ಜಿ ವಜಾ ಮಾಡಿದ ಹೈಕೋರ್ಟ್

ಸಂಚರಿಸುವ ವಾಹನಗಳಲ್ಲಿ ಚಲಿಸುವ ಉದ್ಯಾನ(ಮೂವಿಂಗ್ ಗಾರ್ಡನ್​) ವ್ಯವಸ್ಥೆ ಅಳವಡಿಸಲು ಸೂಚನೆ ನೀಡುವಂತೆ ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ, ವಜಾಗೊಳಿಸಿರುವ ಹೈಕೋರ್ಟ್, ಖಾಸಗಿ ವಾಹನಗಳನ್ನು ಇದೇ ರೀತಿಯಲ್ಲಿ ಬಳಕೆ ಮಾಡಿ ಎಂದು ಸೂಚನೆ ನೀಡಲು ಅವಕಾಶವಿಲ್ಲ ಎಂದು ತಿಳಿಸಿದೆ.
ಅರ್ಜಿದಾರ  ಕೆ.ಸುರೇಶ್
ಅರ್ಜಿದಾರ ಕೆ.ಸುರೇಶ್

ಬೆಂಗಳೂರು: ಸಂಚರಿಸುವ ವಾಹನಗಳಲ್ಲಿ ಚಲಿಸುವ ಉದ್ಯಾನ(ಮೂವಿಂಗ್ ಗಾರ್ಡನ್​) ವ್ಯವಸ್ಥೆ ಅಳವಡಿಸಲು ಸೂಚನೆ ನೀಡುವಂತೆ ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ, ವಜಾಗೊಳಿಸಿರುವ ಹೈಕೋರ್ಟ್, ಖಾಸಗಿ ವಾಹನಗಳನ್ನು ಇದೇ ರೀತಿಯಲ್ಲಿ ಬಳಕೆ ಮಾಡಿ ಎಂದು ಸೂಚನೆ ನೀಡಲು ಅವಕಾಶವಿಲ್ಲ ಎಂದು ತಿಳಿಸಿದೆ.

ಬೆಂಗಳೂರಿನ ಕಬ್ಬನ್ ಪೇಟೆ ನಿವಾಸಿ ಕೆ.ಸುರೇಶ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಲೆ ಅವರ ನೇತೃತ್ವದ ವಿಭಾಗೀಯ ಪೀಠ, ಅರ್ಜಿ ವಜಾಗೊಳಿಸಿದ್ದು, ಖಾಸಗಿ ವಾಹನಗಳನ್ನು ಸಂಚಾರಕ್ಕೆ ಹೊರತು ಪಡಿಸಿ, ಇತರ ಕಾರ್ಯಗಳಿಗೆ ಬಳಕೆ ಮಾಡುವಂತೆ ಸೂಚನೆ ನೀಡುವುದಕ್ಕೆ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.

“ನಿಮ್ಮ ಕಾರಿನ ಮೇಲೆ ಉದ್ಯಾನ ನಿರ್ಮಿಸುವ ಮೂಲಕ ಪರಿಸರ ಸಂರಕ್ಷಣೆ ಉದ್ದೇಶ ಸರಿಯಾಗಿದೆ. ಅದನ್ನು ಮೆಚ್ಚಬೇಕು. ಎಲ್ಲರೂ ನಿಮ್ಮನ್ನು ಪಾಲಿಸಲು ಯೋಜನೆ ಹೇಗೆ ರೂಪಿಸಲಾಗುತ್ತದೆ? ಕಾರಿನಲ್ಲಿ ಎಲ್ಲರೂ ಚಲಿಸುವ ಉದ್ಯಾನ ಹೊಂದಬೇಕು ಎಂದು ನಿರ್ದೇಶಿಸಲಾಗದು. ವಾಹನದಲ್ಲಿ ಚಲಿಸುವ ಉದ್ಯಾನ ಮಾಡಬೇಕೆ ಅಥವಾ ಬೇಡವೇ ಎಂಬುದು ಪ್ರತಿಯೊಬ್ಬರ ಆಯ್ಕೆಯಾಗಿರುತ್ತದೆ.

ನಿಮ್ಮ ಐಡಿಯಾವನ್ನು ಮತ್ತೊಬ್ಬರು ಪಾಲಿಸಬೇಕು ಎಂದು ನಾವು ಆದೇಶಿಸಲಾಗದು. ಚಲಿಸುವ ಉದ್ಯಾನಕ್ಕೆ ಸಂಬಂಧಿಸಿದ ಸಮೀಕ್ಷೆಗೆ ನಾವು ಒಪ್ಪಲಾಗದು. ಅದು ಜನರ ಆಯ್ಕೆ. ಚಲಿಸುವ ಉದ್ಯಾನ ಕೆಲವರಿಗೆ ಇಷ್ಟವಾದರೆ, ಮತ್ತೊಬ್ಬರಿಗೆ ಇಷ್ಟವಾಗದಿರಬಹುದು. ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ನಿಮ್ಮ ಪ್ರಯತ್ನ, ಅದಕ್ಕೆ ಪ್ರಚಾರ ಮತ್ತಿತರರ ವಿಚಾರದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ” ಎಂದು ಪೀಠವು ಮೌಖಿಕವಾಗಿ ಹೇಳಿತು.

ಅರ್ಜಿದಾರರು ತಮ್ಮ ವಾಹನದಲ್ಲಿ ಮೂವಿಂಗ್ ಗಾರ್ಡನ್​ ಅಳವಡಿಕೆ ಮಾಡಿರುವುದಾಗಿ ಹೇಳಿದ್ದು, ಅತ್ಯಂತ ಹೆಮ್ಮೆಯ ವಿಚಾರವಾಗಿದೆ. ಆದರೆ, ಅದೇ ರೀತಿಯಲ್ಲಿ ಇತರರಲ್ಲಿ ಜಾಗೃತಿ ಬಂದು ತಮ್ಮ ವಾಹನಗಳಲ್ಲಿ ಅಳವಡಿಸಿಕೊಂಡಲ್ಲಿ ಉತ್ತಮ ಬೆಳವಣಿಗೆಯಾಗಲಿದೆ. ಆದರೆ, ನ್ಯಾಯಾಲಯದಿಂದ ಸೂಚನೆ ನೀಡಲು ಅವಕಾಶವಿಲ್ಲ ಎಂದು ಪೀಠ ತಿಳಿಸಿತು.

ಬೆಂಗಳೂರಲ್ಲಿ ಹೆಚ್ಚಾಗುತ್ತಿರುವ ವಾಹನಗಳ ಸಂಖ್ಯೆಯಿಂದ ಮಾಲಿನ್ಯವೂ ಹೆಚ್ಚಾಗುತ್ತಿದೆ. ಇದೇ ರೀತಿ ಮುಂದುವರೆದಲ್ಲಿ ಮುಂದೊಂದು ದಿನ ಬೆಂಗಳೂರು ನಗರವೂ ದೆಹಲಿ ಮಾದರಿಯಾಗಲಿದೆ. ಹೀಗಾಗಿ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಕೋರಿದರು. ಜತೆಗೆ, ಮೂವಿಂಗ್ ಗಾರ್ಡನ್​ ಪದ್ದತಿ ಜಾರಿ ಮಾಡಿದಲ್ಲಿ ಬೆಂಗಳೂರಿನಲ್ಲಿ ಆಮ್ಲಜನಕದ ಪ್ರಮಾಣ ಹೆಚ್ಚಾಗಲಿದೆ ಎಂದರು.

ಅರ್ಜಿದಾರರ ವಾದವು ಆಕರ್ಷಣೀಯವಾಗಿದ್ದರೂ ತಮ್ಮ ವಾಹನವನ್ನು ಹೇಗೆ ಬಳಕೆ ಮಾಡಬೇಕು ಎಂಬುದು ಅದರ ಮಾಲೀಕರ ವೈಯಕ್ತಿಕ ಆಯ್ಕೆಯಾಗಿರುತ್ತದೆ. ಸಮೀಕ್ಷೆ ನಡೆಸಿ, ಯೋಜನೆ ರೂಪಿಸಿ ಅದನ್ನು ಕಾರ್ಯಗತ ಮಾಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವುದು ವ್ಯಕ್ತಿಯ ಆಯ್ಕೆ ಕಸಿದುಕೊಳ್ಳುವುದಾಗಿದೆ" ಎಂದು ಪೀಠ ಹೇಳಿತು.

ವ್ಯಕ್ತಿಯ ವಾಹನವನ್ನು ಓಡಾಟಕ್ಕೆ ಹೊರತುಪಡಿಸಿ ಬೇರಾವುದಕ್ಕೂ ಬಳಸಬಾರದು. ಅದರಲ್ಲಿಯೂ ಕಡ್ಡಾಯವಾಗಿ ಚಲಿಸುವ ಉದ್ಯಾನ ಮಾಡಬೇಕು ಎಂಬುದು ವೈಯಕ್ತಿಕ ಹಕ್ಕನ್ನು ಕಸಿದಂತಾಗುತ್ತದೆ. ಅಲ್ಲದೇ, ವಾಹನದಲ್ಲಿ ಬದಲಾವಣೆ ಮಾಡುವುದು ಮೋಟಾರು ವಾಹನ ಕಾಯಿದೆ/ನಿಯಮಗಳಿಗೆ ವಿರುದ್ಧವಾಗಿದೆ. ಹೀಗಾಗಿ, ಅರ್ಜಿದಾರರ ಕೋರಿಕೆಯನ್ನು ಪರಿಗಣಿಸಲಾಗದು” ಎಂದು ಆದೇಶದಲ್ಲಿ ಉಲ್ಲೇಖಿಸಿ, ಅರ್ಜಿಯನ್ನು ವಜಾ ಮಾಡಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com