ರೀ.. ನಿಮ್ಮ ಕಥೆ, ಚಿತ್ರಕಥೆ, ಸಂಭಾಷಣೆ ಬೇಡ: ಪಾಟಿ ಸವಾಲಿಗೆ ಉತ್ತರಿಸಲು ಪರದಾಡಿದ ಪ್ರಜ್ವಲ್‌ ರೇವಣ್ಣ; ಸಂಸದರಿಗೆ ತಿವಿದ ಹೈಕೋರ್ಟ್

‘ಅದು ನನ್ನ ತಂದೆಯ ಎಸ್ಕಾರ್ಟ್‌ನವರಿಗೆ ಸೇರಿದ ಸರ್ಕಾರಿ ಕಾರು ಆಗಿತ್ತು. ಆಗ ತಂದೆ ಲೋಕೋಪಯೋಗಿ ಸಚಿವರಾಗಿದ್ದರು. ಕಾರು ಥಿಯೇಟರ್‌ ಒಳಗೆ ನಿಂತಿರಲಿಲ್ಲ. ಕಾಂಪೌಂಡ್‌ ಒಳಗೆ ನಿಂತಿತ್ತು. ಅವತ್ತು ಆ ಹಣವನ್ನು ಐಟಿ (ಆದಾಯ ತೆರಿಗೆ) ಅಧಿಕಾರಿಗಳೇ ತಂದು ಕಾರಿನಲ್ಲಿ ದುರುದ್ದೇಶದಿಂದ ಇರಿಸಿ ದೂರು ದಾಖಲಿಸಿದ್ದರು.
ಪ್ರಜ್ವಲ್ ರೇವಣ್ಣ
ಪ್ರಜ್ವಲ್ ರೇವಣ್ಣ
Updated on

ಬೆಂಗಳೂರು: ಹಾಸನ ಲೋಕಸಭಾ ಕ್ಷೇತ್ರದಿಂದ ತಾವು ಆಯ್ಕೆಯಾಗಿರುವುದನ್ನು ಅಸಿಂಧುಗೊಳಿಸಲು ಕೋರಿದ ಅರ್ಜಿ ಕುರಿತ ಪಾಟಿ ಸವಾಲಿನಲ್ಲಿ ಕೇಳಲಾದ ಪ್ರಶ್ನೆಗಳಿಗೆ ಸುದೀರ್ಘವಾಗಿ ವಿವರಣೆ ನೀಡಲು ಮುಂದಾದ ಸಂಸದ ಪ್ರಜ್ವಲ್‌ ರೇವಣ್ಣಗೆ ಚಾಟಿ ಬೀಸಿದ ಹೈಕೋರ್ಟ್‌, ‘ರ್ರೀ, ನಿಮ್ಮ ಕಥೆ-ಚಿತ್ರಕಥೆ-ಸಂಭಾಷಣೆ ಎಲ್ಲಾ ನಮಗೆ ಬೇಡ. ಕೇಳಿದ ಪ್ರಶ್ನೆಗೆ ಹೌದು ಅಥವಾ ಇಲ್ಲ ಎಂದಷ್ಟೇ ಉತ್ತರಿಸಿ ಎಂದು ತಾಕೀತು ಮಾಡಿದ ಘಟನೆ ಮಂಗಳವಾರ ನಡೆಯಿತು.

ಪ್ರಜ್ವಲ್‌ ರೇವಣ್ಣ ಹಾಸನ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದಾರೆ. ಅವರು ಚುನಾವಣೆಯಲ್ಲಿ ಸಾಕಷ್ಟು ಅಕ್ರಮ ಎಸಗಿದ್ದು ಆಯ್ಕೆಯನ್ನು ಅಸಿಂಧುಗೊಳಿಸಬೇಕು‘ ಎಂದು ಕೋರಿ ಹೈಕೋರ್ಟ್ ವಕೀಲ ಜಿ.ದೇವರಾಜೇಗೌಡ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೆ.ನಟರಾಜನ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ಮುಂದುವರಿಸಿತು.

ವಿಚಾರಣೆ ವೇಳೆ ಕಟಕಟೆಯಲ್ಲಿ ನಿಂತ ಪ್ರಜ್ವಲ್‌ ರೇವಣ್ಣ ಅವರನ್ನು ಅರ್ಜಿದಾರರ ಪರ ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ ಸುದೀರ್ಘ ಪಾಟಿ ಸವಾಲಿಗೆ ಗುರಿಪಡಿಸಿ, ‘ಚುನಾವಣಾ ಅಧಿಕಾರಿಗಳ ತಂಡವು 2019ರ ಏಪ್ರಿಲ್‌ 17ರಂದು ಹೊಳೆನರಸೀಪುರದ ಚೆನ್ನಾಂಬಿಕಾ ಥಿಯೇಟರ್‌ ಒಳಗೆ ನಿಂತಿದ್ದ ಕೆಎ01ಎಂಎಚ್‌ 4477 ಇನ್ನೋವಾ ಕಾರಿನಲ್ಲಿದ್ದ 1.20 ಲಕ್ಷ ರು ಮೊತ್ತವನ್ನು ವಶಪಡಿಸಿಕೊಂಡಿತ್ತು. ಹೌದಲ್ಲವೇ...’ ಎಂದು ಪ್ರಶ್ನಿಸಿದರು.

ಅದಕ್ಕೆ ಉತ್ತರಿಸಿದ ಪ್ರಜ್ವಲ್‌ ರೇವಣ್ಣ, ‘ಇಲ್ಲ, ಅದು ನನ್ನ ತಂದೆಯ ಎಸ್ಕಾರ್ಟ್‌ನವರಿಗೆ ಸೇರಿದ ಸರ್ಕಾರಿ ಕಾರು ಆಗಿತ್ತು. ಆಗ ತಂದೆ ಲೋಕೋಪಯೋಗಿ ಸಚಿವರಾಗಿದ್ದರು. ಕಾರು ಥಿಯೇಟರ್‌ ಒಳಗೆ ನಿಂತಿರಲಿಲ್ಲ. ಕಾಂಪೌಂಡ್‌ ಒಳಗೆ ನಿಂತಿತ್ತು. ಅವತ್ತು ಆ ಹಣವನ್ನು ಐಟಿ (ಆದಾಯ ತೆರಿಗೆ) ಅಧಿಕಾರಿಗಳೇ ತಂದು ಕಾರಿನಲ್ಲಿ ದುರುದ್ದೇಶದಿಂದ ಇರಿಸಿ ದೂರು ದಾಖಲಿಸಿದ್ದರು ಎಂದರು. ನಂತರ ಅದಕ್ಕೆ ತದ್ವಿರುದ್ಧವಾಗಿ ಅಷ್ಟಕ್ಕೂ ಆ ಹಣವನ್ನು ನನ್ನ ತಾಯಿ ನಮ್ಮ ಮನೆಯ ಸೇವಕನಿಗೆ ಹಸುಗಳಿಗೆ ಬೂಸಾ ತರಲು ನೀಡಿದ್ದರು. ಈಗಾಗಲೇ ಈ ದೂರಿನ ತನಿಖೆ ನಡೆದಿದ್ದು, ನ್ಯಾಯಾಲಯಕ್ಕೆ ಬಿ ರಿಪೋರ್ಟ್‌ ಸಲ್ಲಿಕೆಯಾಗಿದೆ ಎಂದರು.

ಇದರಿಂದ ಬೇಸರಗೊಂಡ ನ್ಯಾಯಮೂರ್ತಿಗಳು, ರ್ರೀ, ನಿಮ್ಮ ಕಥೆ-ಚಿತ್ರಕಥೆ-ಸಂಭಾಷಣೆ ಎಲ್ಲಾ ನಮಗೆ ಬೇಡ. ವಕೀಲರು ಕೇಳಿದ ಪ್ರಶ್ನೆಗಷ್ಟೇ ಹೌದು ಅಥವಾ ಇಲ್ಲ ಎಂದು ಉತ್ತರಿಸಿ. ನೀವು ನೀಡಿದ ಉತ್ತರವನ್ನು ದಾಖಲು ಮಾಡಿಕೊಳ್ಳುತ್ತೇನೆ ಎಂದು ಸೂಚ್ಯವಾಗಿ ನುಡಿದರು. ಚುನಾವಣೆ ಘೋಷಣೆಯಾದ ನಂತರ ನಿಮ್ಮ ಖಾತೆಯಲ್ಲಿ 27 ಲಕ್ಷ ರು. ಇತ್ತು. ಆ ಬಗ್ಗೆ ಸೂಕ್ತ ವಿವರಣೆ ಪ್ರಮಾಣ ಪತ್ರದಲ್ಲಿ ಇಲ್ಲವಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಜ್ವಲ್‌, ಕರ್ನಾಟಕ ಬ್ಯಾಂಕ್‌ ಖಾತೆಗೆ ತಂದೆ ಎಚ್‌.ಡಿ.ರೇವಣ್ಣ, ತಾಯಿ ಭವಾನಿ ರೇವಣ್ಣ ಸೇರಿದಂತೆ ಒಟ್ಟು 16 ಜನರಿಂದ ಸಾಲ ರೂಪದಲ್ಲಿ ಹಣ ಸಂದಾಯವಾಗಿತ್ತು ಎಂದರು. ಆ ಪ್ರಶ್ನೆಯನ್ನು ಪುನಾ ತಿರುವಿ ಕೇಳಿದಾಗ, ನನಗೆ ಹಾಲು ಮಾರಾಟದಿಂದ ಮತ್ತು ಕೃಷಿಯಿಂದ ಬಂದ ಆದಾಯವಿದೆ ಎಂದರು.

ಸುದೀರ್ಘ ವಿಚಾರಣೆಯ ನಂತರ ಪ್ರಮೀಳಾ ನೇಸರ್ಗಿ, ‘ಪ್ರತಿವಾದಿಗಳು ಚುನಾವಣಾ ಆಯೋಗಕ್ಕೆ ಸಾಕಷ್ಟು ಸುಳ್ಳು ದಾಖಲೆಗಳನ್ನು ಒದಗಿಸಿದ್ದಾರೆ. ಇನ್ನೂ ಕೆಲವು ಡಿಜಿಟಲ್‌ ಸಾಕ್ಷ್ಯಗಳನ್ನು ಪ್ರದರ್ಶಿಸಬೇಕಿದ್ದು ಅದಕ್ಕೆ ಮುಂದಿನ ಮುದ್ದತಿನಲ್ಲಿ ಅವಕಾಶ ನೀಡಬೇಕು’ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com