ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್: ನೋಂದಣಿಯಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನ

ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್‌ನಡಿ ಆರೋಗ್ಯ ವೃತ್ತಿಪರರು ಮತ್ತು ಆರೋಗ್ಯ ಸೌಲಭ್ಯ ನೋಂದಣಿಯಲ್ಲಿ ಇಡೀ ದೇಶದಲ್ಲಿ ಕರ್ನಾಟಕ ಮೊದಲ ಮತ್ತು ಎರಡನೇ ಸ್ಥಾನದಲ್ಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ...
ಡಾ.ಕೆ. ಸುಧಾಕರ್
ಡಾ.ಕೆ. ಸುಧಾಕರ್
Updated on

ಬೆಂಗಳೂರು: ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್‌ನಡಿ ಆರೋಗ್ಯ ವೃತ್ತಿಪರರು ಮತ್ತು ಆರೋಗ್ಯ ಸೌಲಭ್ಯ ನೋಂದಣಿಯಲ್ಲಿ ಇಡೀ ದೇಶದಲ್ಲಿ ಕರ್ನಾಟಕ ಮೊದಲ ಮತ್ತು ಎರಡನೇ ಸ್ಥಾನದಲ್ಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ರಾಜ್ಯದ ಆರೋಗ್ಯ ಸಾಧನೆಗಳನ್ನು ಹಂಚಿಕೊಂಡಿರುವ ಸಚಿವರು, ಆರೋಗ್ಯ ಆರೈಕೆ ವೃತ್ತಿಪರರ ನೋಂದಣಿ (ಎಚ್.ಪಿ.ಆರ್) ವಲಯದಲ್ಲಿ 28,643 ವೈದ್ಯರು ಮತ್ತು ದಾದಿಯರು ನೋಂದಣಿಯಾಗಿದ್ದು, ರಾಜ್ಯ ಮೊದಲ ಸ್ಥಾನದಲ್ಲಿದೆ. ಆರೋಗ್ಯ ಸೌಲಭ್ಯ ನೋಂದಣಿಯಡಿ(ಎಚ್.ಎಫ್.ಆರ್) ಕರ್ನಾಟಕ 2ನೇ ಸ್ಥಾನದಲ್ಲಿದ್ದು, 27,244 ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್‌ನಡಿ ಸ್ಕ್ಯಾನ್ ಮತ್ತು ಶೇರ್ ವೈಶಿಷ್ಟ್ಯ ಬಳಸಿಕೊಂಡು ಹೊರರೋಗಿ ವಿಭಾಗಗಳಲ್ಲಿ ಬ್ಲಾಕ್‌ನಲ್ಲಿ ಫಾಸ್ಟ್ ಟ್ರ್ಯಾಕ್ ಕೌಂಟರ್‌ಗಳನ್ನು ಹೊಂದಿಸುವ ವಲಯದಲ್ಲೂ ರಾಜ್ಯ ಗಮನಾರ್ಹ ಸಾಧನೆ ಮಾಡಿದೆ. ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ (ಎಬಿಡಿಎಂ) ದೇಶದ ಸಮಗ್ರ ಡಿಜಿಟಲ್ ಆರೋಗ್ಯ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದೆ. ಇದು ಡಿಜಿಟಲ್ ಮಾರ್ಗಗಳ ಮೂಲಕ ಆರೋಗ್ಯ ಪರಿಸರ ವ್ಯವಸ್ಥೆಯ ವಿವಿಧ ಪಾಲುದಾರರ ನಡುವೆ ಇರುವ ಅಂತರ ತಗ್ಗಿಸುತ್ತದೆ ಎಂದು ಹೇಳಿದ್ದಾರೆ.

4.58 ಲಕ್ಷ ದಾಖಲೆಗಳ ಲಿಂಕ್‌
ದೇಶದಲ್ಲಿ 1.35 ಕೋಟಿ ಜನ ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ ಹೊಂದಿದ್ದು, ಈ ವಲಯದಲ್ಲಿ ರಾಜ್ಯ 7ನೇ ಸ್ಥಾನದಲ್ಲಿದೆ. ಎಬಿಡಿಎಂ ಬಿಲ್ಡಿಂಗ್ ಬ್ಲಾಕ್ಸ್ ಸಹ ರೂಪಿಸಲಾಗಿದ್ದು, ರಾಜ್ಯದ ಪ್ರಗತಿಯನ್ನು ನಿರ್ಧರಿಸುವ ಪ್ರಮುಖ ಆರೋಗ್ಯ ದಾಖಲೆಗಳನ್ನು ಇದರಡಿ ಸಂಯೋಜಿಸಲಾಗಿದೆ. ಆಯುಷ್ಮಾನ್‌ ಕಾರ್ಡ್ ಹೊಂದಿರುವ ವ್ಯಕ್ತಿ ಇ-ಆಸ್ಪತ್ರೆ ಪೋರ್ಟಲ್ ಮೂಲಕ ಆರೋಗ್ಯ ದಾಖಲೆಯ ಸಂಪರ್ಕ ವಲಯದಲ್ಲಿ ಗಮನಾರ್ಹ ಸಾಧನೆ ಮಾಡಲಾಗಿದೆ. ಎಬಿಎಚ್ಎಗೆ 4.58 ಲಕ್ಷ ದಾಖಲೆಗಳನ್ನು ಲಿಂಕ್ ಮಾಡುವ ಮೂಲಕ ದೇಶದಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ಎಬಿಡಿಎಂ–ದೂರುಗಳು, ಎಚ್.ಎಂ.ಐ.ಎಸ್ ಬಳಸುವ ದೇಶದ 517 ಸಾರ್ವಜನಿಕ ಆಸ್ಪತ್ರೆಗಳ ಪೈಕಿ ಕರ್ನಾಟಕದಲ್ಲಿ 334 ಆಸ್ಪತ್ರೆಗಳಿರುವುದು ಮಹತ್ವದ ಸಾಧನೆಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಈ ಬೆಳವಣಿಗೆಯಿಂದಾಗಿ ಭೌತಿಕವಾಗಿ ಯಾವುದೇ ದಾಖಲೆಗಳನ್ನು ಸಾಗಿಸುವ ಅಗತ್ಯ ಕಂಡು ಬರುವುದಿಲ್ಲ. ಸಮ್ಮತಿ ಮೇರೆಗೆ ಸುದೀರ್ಘ ವೈಯಕ್ತಿಕ ಆರೋಗ್ಯ ದಾಖಲೆಗಳನ್ನು ಹೊಂದಬಹುದಾಗಿದೆ. ಎಬಿಡಿಎಂನ ಮೊದಲ ಪ್ರಮುಖ ಪ್ರಯೋಜನವಾಗಿ, ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ(ಎನ್‌ಎಚ್‌ಎ) ಸಹಕಾರದೊಂದಿಗೆ ಇ-ಆಸ್ಪತ್ರೆಯಲ್ಲಿ ಸ್ಕ್ಯಾನ್ ಮತ್ತು ಶೇರ್ ಸೌಲಭ್ಯದ ಮೂಲಕ ವೇಗದ ಟ್ರ್ಯಾಕ್ ನಡಿ ಹೊರರೋಗಿ ವಿಭಾಗದ ನೋಂದಣಿ ಪ್ರಾರಂಭಿಸಲಾಗಿದೆ. ಇದರಿಂದ ಒಪಿಡಿ ನೋಂದಣಿಗಾಗಿ ಸರತಿಯಲ್ಲಿ ಕಾಯುವ ಸಮಯ ಕಡಿಮೆಯಾಗಿದೆ. ಆರೋಗ್ಯ ದಾಖಲೆಗಳ ಸಂಪರ್ಕ ಸಹ ಸುಗಮವಾಗಿದೆ. ಆಧಾರ್ ಮೂಲಕ ನಿಖರವಾದ ದತ್ತಾಂಶವನ್ನು ಇ-ಹಾಸ್ಪಿಟಲ್ ಪೋರ್ಟಲ್‌ನಲ್ಲಿ ನಮೂದಿಸುವುದರಿಂದ ನಕಲು ಮಾಡುವುದನ್ನು ತಡೆಯಬಹುದು ಎಂದು ವಿವರಿಸಿದ್ದಾರೆ.

ಈ ವ್ಯವಸ್ಥೆಯನ್ನು ಸಿ.ವಿ.ರಾಮನ್ ನಗರದ ಜನರಲ್ ಆಸ್ಪತ್ರೆಯಲ್ಲಿ ಇದೇ ವರ್ಷದ ಅಕ್ಟೋಬರ್ 27 ರಂದು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದ್ದು, ಇದೀಗ ರಾಜ್ಯದ 15 ಆಸ್ಪತ್ರೆಗಳಲ್ಲಿ ಈ ವ್ಯವಸ್ಥೆಯನ್ನು ಜಾರಿ ಮಾಡಲಾಗಿದೆ. ಎಲ್ಲಾ ವೈದ್ಯಕೀಯ ಕಾಲೇಜು ಆಸ್ಪತ್ರೆ, ಜಿಲ್ಲಾ ಆಸ್ಪತ್ರೆಗಳು ಮತ್ತು ಹೆಚ್ಚಿನ ಒತ್ತಡ ಇರುವ ತಾಲ್ಲೂಕು ಆಸ್ಪತ್ರೆಗಳಲ್ಲಿ ಇದೇ ರೀತಿಯ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com