ಎಸ್ಸಿ, ಎಸ್ಟಿ ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ನಿಗಮ; ಒಳ ಮೀಸಲಾತಿ ಪರಿಶೀಲನೆ: ಸಿಎಂ ಬೊಮ್ಮಾಯಿ

ಅವಕಾಶ ವಂಚಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಗಳಿಗೆ ಒಳ ಮೀಸಲಾತಿ ಕಲ್ಪಿಸಲು ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಹಾಗೂ ಎಸ್ಸಿ ಎಸ್ಟಿ ಅಲೆಮಾರಿ ಸಮುದಾಯಗಳಿಗೆ...
ಮುಖ್ಯಮಂತ್ರಿ ಬೊಮ್ಮಾಯಿ
ಮುಖ್ಯಮಂತ್ರಿ ಬೊಮ್ಮಾಯಿ
Updated on

ಬೆಂಗಳೂರು: ಅವಕಾಶ ವಂಚಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಗಳಿಗೆ ಒಳ ಮೀಸಲಾತಿ ಕಲ್ಪಿಸಲು ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಹಾಗೂ ಎಸ್ಸಿ ಎಸ್ಟಿ ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮ ರಚಿಸಲು ತೀರ್ಮಾನ ಮಾಡಲಾಗಿದೆ ಎಂದು ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ಇಂದು ಸಚಿವ ಸಂಪುಟ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿ ಸಿಎಂ,  ತಳಸಮುದಾಯಗಳಿಗೆ ಮೀಸಲಾತಿ ಪೂರ್ಣಪ್ರಮಾಣದಲ್ಲಿ ಮುಟ್ಟಿಲ್ಲ ಎಂದು ನ್ಯಾ.ನಾಗಮೋಹನ್ ದಾಸ್ ಸಮಿತಿ ವರದಿ ಹೇಳಿದ್ದು, ಇವರಿಗೆ ನ್ಯಾಯ ಒದಗಿಸಲು ಕೂಲಂಕಷವಾಗಿ ಕಾನೂನಾತ್ಮಕ ಅಂಶಗಳನ್ನು ತಜ್ಞರು ಪರಿಶೀಲಿಸಿ, ಮುಂದೆ ಕ್ರಮ ತೆಗೆದುಕೊಳ್ಳಬಹುದೆಂದು ಹೇಳಿದ್ದಾರೆ ಎಂದರು.

ಒಳಮೀಸಲಾತಿ ಬಗ್ಗೆ ಅಧ್ಯಯನ ಮಾಡಿರುವ ಸದಾಶಿವ ಆಯೋಗದ ಪ್ರಮುಖ ಅಂಶಗಳನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಅದರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅದಕ್ಕೂ ಮುನ್ನ ಪರಿಶಿಷ್ಟ ಜಾತಿಯಲ್ಲಿ ಬರುವ ಎಲ್ಲಾ ಜಾತಿಗಳ ಹಿತರಕ್ಷಣೆ ಮಾಡುವ ಸಲುವಾಗಿ ಮತ್ತು ಒಳಮೀಸಲಾತಿಯಿಂದ  ಪರಿಣಾಮ ಬೀರುವ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ರಮ ತೆಗೆದುಕೊಳ್ಳಲಾಗುವುದು. ಇನ್ನು ಪರಿಶಿಷ್ಟ ಜಾತಿಯಲ್ಲಿರುವ ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ನಿಗಮ ಸ್ಥಾಪಿಸಲು ತೀರ್ಮಾನಿಸಲಾಗಿದೆ. ಇದು ಅಧಿಕೃತವಾಗಿ ಚರ್ಚೆ ಮಾಡಿ ಕೈಗೊಂಡಿರುವ ತೀರ್ಮಾನ ಎಂದರು.

ಮೀಸಲಾತಿ ಹೆಚ್ಚಳದ ನಿರ್ಧಾರ:
ನಿನ್ನೆ ನಡೆದ ಸರ್ವ ಪಕ್ಷ ಸಭೆಯಲ್ಲಿ ತೀರ್ಮಾನಿಸಿದಂತೆ ಸಚಿವ ಸಂಪುಟ ಸಭೆಯಲ್ಲಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿಯು ಶಿಫಾರಸ್ಸು ಮಾಡಿರುವಂತೆ ಪರಿಶಿಷ್ಟ ಜಾತಿಗೆ ಶೇ 17 ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ 7 ರಷ್ಟು ಮೀಸಲಾತಿ ಹೆಚ್ಚಿಸಬೇಕೆನ್ನುವ ವಿಚಾರವನ್ನು ಒಪ್ಪಿ ಅದಕ್ಕೆ ಆದೇಶ ಮಾಡಿ ಗೆಜೆಟ್ ಅಧಿಸೂಚನೆ ಹೊರಡಿಸಬೇಕೆಂದು ಸಚಿವ ಸಂಪುಟದಲ್ಲಿ ತೀರ್ಮಾನಿಸಿದೆ ಎಂದರು.

ಈ ನಿರ್ಣಯಕ್ಕೆ ಕಾನೂನಿನ ರಕ್ಷಣೆ ನೀಡಲು ಸಂವಿಧಾನದ ಪರಿಚ್ಛೇದ 9ಕ್ಕೆ ಸೇರಿಸಲು ವಿಧಿವಿಧಾನಗಳನ್ನು ಕಾನೂನು ಸಚಿವರು, ಕಾನೂನು ಆಯೋಗ ಮತ್ತು ಸಂವಿಧಾನದ ತಜ್ಞರು ಹಾಗೂ ಅಡ್ವೊಕೇಟ್ ಜನರಲ್ ಅವರೊಂದಿಗೆ ಚರ್ಚಿಸಿ ಕೂಡಲೇ ಶಿಫಾರಸು ಮಾಡಿ ಅನುಷ್ಠಾನ ಮಾಡುವ ತೀರ್ಮಾನ ಮಾಡಿದೆ ಎಂದರು.

ಒಟ್ಟು ಮೀಸಲಾತಿಯ  ಪ್ರಮಾಣ ಶೇ 50  ರಷ್ಟು  ದಾಟಿದ್ದು ಕಾನೂನು ರಕ್ಷಣೆ ಸಿಗುವುದೋ ಇಲ್ಲವೋ ಎಂಬ ಬಗ್ಗೆ ಪ್ರಶ್ನೆಗಳಿವೆ. ಇಂದಿರಾ ಸಹಾನಿ ಪ್ರಕರಣದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಮುಖ್ಯ ವಾಹಿನಿಯಿಂದ ದೂರವಿರುವ ಪರಿಶಿಷ್ಟ ಪಂಗಡಗಳ ವಿಶೇಷ  ಪ್ರಕರಣವನ್ನಾಗಿ ಪರಿಗಣಿಸಿ ಅದಕ್ಕೆ ಮೀಸಲಾತಿ ನೀಡಬಹುದುದೆಂದು ಹೇಳಲಾಗಿದೆ ಎಂದರು.

ವಿಶೇಷ ಪ್ರಕರಣ
ನ್ಯಾಯಮೂರ್ತಿ ನಾಗಮೋಹನ್ ದಾಸ್ ಹಾಗೂ ನ್ಯಾ.ಸುಭಾಷ್ ಅಡಿ ಅವರು ಇದು ಯಾಕೆ ವಿಶೇಷ ಪ್ರಕರಣವಾಗುತ್ತದೆ ಎಂದು ಸ್ಪಷ್ಟವಾಗಿ ತಮ್ಮ ವರದಿಯಲ್ಲಿ ನಮೂದಿಸಿದ್ದಾರೆ. ಜನಸಂಖ್ಯೆಗೆ ಅನುಗುಣವಾಗಿ ಇರಬೇಕು ಹಾಗೂ ಸಾಮಾಜಿಕವಾಗಿ ಅಂಕಿಅಂಶಗಳ ಸಮೇತವಾಗಿ ಇವೆಲ್ಲವೂ ಮುಖ್ಯ ವಾಹಿನಿಯಿಂದ  ದೂರವಿದ್ದು, ಸಾಕಷ್ಟು ಪ್ರಾತಿನಿಧ್ಯ ಇಷ್ಟು ವರ್ಷಗಳಾದರೂ ದೊರೆತಿಲ್ಲ. ಹಾಗಾಗಿ ಇದು ವಿಶೇಷ ಪ್ರಕರಣ ವಾಗಿದೆ ಎಂದು ಕಾರಣಗಳನ್ನು ನೀಡಿದ್ದಾರೆ ಎಂದು ವಿವರಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com