ನಿಜಾಮುದ್ದೀನ್ ಎಕ್ಸ್ ಪ್ರೆಸ್ ರೈಲಿಗೆ ಸವಾಯಿ ಗಂಧರ್ವ ಹೆಸರಿಡಿ: ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ ನಿಜಾಮುದ್ದೀನ್ ಎಕ್ಸಪ್ರೆಸ್ ರೈಲಿನ ಹೆಸರು ಬದಲಾವಣೆ ಮಾಡಬೇಕೆಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮನವಿ ಮಾಡಿದ್ದಾರೆ. ನಿಜಾಮುದ್ದೀನ್ ಬದಲು ಖ್ಯಾತ ಸಂಗೀತಗಾರ ಸವಾಯಿ ಗಂಧರ್ವ ಅವರ ಹೆಸರಿಡುವಂತೆ ಕೇಂದ್ರ ರೈಲ್ವೆ...
ಹುಬ್ಬಳ್ಳಿ- ನಿಜಾಮುದ್ದೀನ್ ರೈಲಿಗೆ ಹಸಿರು ಬಾವುಟ ತೋರಿಸುವುದರ ಮೂಲಕ ಚಾಲನೆ
ಹುಬ್ಬಳ್ಳಿ- ನಿಜಾಮುದ್ದೀನ್ ರೈಲಿಗೆ ಹಸಿರು ಬಾವುಟ ತೋರಿಸುವುದರ ಮೂಲಕ ಚಾಲನೆ

ಹುಬ್ಬಳ್ಳಿ: ಹುಬ್ಬಳ್ಳಿ ನಿಜಾಮುದ್ದೀನ್ ಎಕ್ಸಪ್ರೆಸ್ ರೈಲಿನ ಹೆಸರು ಬದಲಾವಣೆ ಮಾಡಬೇಕೆಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮನವಿ ಮಾಡಿದ್ದಾರೆ. ನಿಜಾಮುದ್ದೀನ್ ಬದಲು ಖ್ಯಾತ ಸಂಗೀತಗಾರ ಸವಾಯಿ ಗಂಧರ್ವ ಅವರ ಹೆಸರಿಡುವಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ ಪ್ರಲ್ಹಾದ ಜೋಶಿ ಮನವಿ ಮಾಡಿದ್ದಾರೆ.

ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಈಗಾಗಲೇ ಸದ್ಗೂರು ಸಿದ್ಧಾರೂಢ ಸ್ವಾಮೀಜಿ ಅವರ ಹೆಸರಿಡಲಾಗಿದೆ. ಹುಬ್ಬಳ್ಳಿಯಿಂದ ದೆಹಲಿಗೆ ಸಂಚರಿಸುವ ನಿಜಾಮುದ್ದೀನ್ ಲಿಂಕ್ ರೈಲಿಗೆ ಸವಾಯಿ ಗಂಧರ್ವರ ಹೆಸರಿಡುವುದು ಸೂಕ್ತ. ಭೀಮ್ ಸೇನ್ ಜೋಶಿ, ಗಂಗೂಬಾಯಿ ಹಾನಗಲ್ ಅವರಂತಹ ಖ್ಯಾತ ಸಂಗೀತಗಾರರನ್ನು ತಯಾರು ಮಾಡಿದ ಹಿರಿಮೆ ಸವಾಯಿ ಗಂಧರ್ವ ಅವರದ್ದು. ಕಿರಾಣಾ ಘರಾಣ ಸಂಗೀತ ಪರಂಪರ ಹುಟ್ಟುಹಾಕುವ ಮೂಲಕ ಕರ್ನಾಟಕ, ಧಾರವಾಡ ಜಿಲ್ಲೆಗೆ ರಾಷ್ಟ್ರಮಟ್ಟದಲ್ಲಿ ಹೆಸರು ತಂದುಕೊಟ್ಟವರು ಸವಾಯಿ ಗಂಧರ್ವರು. ಅವರ ಗೌರವಾರ್ಥ ನಿಜಾನುದ್ದೀನ್ ರೈಲಿಗೆ ಸವಾಯೀ ಗಂಧರ್ವ ಅವರ ಹೆಸರಿಡಬೇಕೆಂದು ಪ್ರಲ್ಹಾದ ಜೋಶಿ ಮನವಿ ಮಾಡಿದರು.

ಜೋಶಿ ಅವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಕೇಂದ್ರ ರೈಲ್ವೇ ಸಚಿವ ಅಶ್ವಿನ್ ವೈಷ್ಣವ್, ಪಂಡಿತ್ ಸವಾಯಿ ಗಂಧರ್ವ ಅವರ ಹಿರಿಮೆ ಬಗ್ಗೆ ಕೇಳಿದ್ದೇನೆ. ಅವರ ಹೆಸರಿಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಈ ಹಿಂದೆ ಇದ್ದ ಹುಬ್ಬಳ್ಳಿ-ನಿಜಾಮುದ್ದೀನ್ ಲಿಂಕ್ ರೈಲನ್ನು ಸ್ಥಗಿತಗೊಳಿಸಿದ್ದರಿಂದ ಅವಳಿ ನಗರದ ರೈಲು ಪ್ರಯಾಣಿಕರಿಗೆ ತೊಂದರೆಯಾಗಿತ್ತು, ಅಂದಿನಿಂದ ಈ ಮಾರ್ಗದ ರೈಲು ಪುನರಾರಂಭಿಸುವಂತೆ ರೈಲ್ವೇ ಸಚಿವಾಲಯಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಒತ್ತಾಯಿಸಿದ್ದರು. ಬಹುದಿನಗಳ ಬೇಡಿಕೆಯಾಗಿದ್ದ ಹುಬ್ಬಳ್ಳಿ-ನಿಜಾಮುದ್ದೀನ್ ಎಕ್ಸ್ ಪ್ರೆಸ್ ರೈಲಿಗೆ ಇಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಹಸಿರು ನಿಶಾನೆ ತೋರಿಸಿದರು. ಹುಬ್ಬಳ್ಳಿಯಿಂದ ನೇರವಾಗಿ ದೆಹಲಿಗೆ ಪ್ರಯಾಣಿಸಲು ಸಾರ್ವಜನಿಕರಿಗೆ ಅನುಕೂಲವಾಗಲಿದೆ.

ವಾರಕ್ಕೆ ಮೂರು ದಿನ ಹುಬ್ಬಳ್ಳಿ ನಿಜಾಮುದ್ದೀನ್ ರೈಲು ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸಚಿವ ಜೋಶಿ ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಮಾಡಿದ್ದಾರೆ. ಸದ್ಯಕ್ಕೆ ವಾರದಲ್ಲಿ ಎರಡು ದಿನ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಮುಂದಿನ ದಿನಗಳಲ್ಲಿ ಮೂರು ದಿನ ಸಂಚಾರದ ವ್ಯವಸ್ಥೆ ಕಲ್ಪಿಸುವಂತೆ ಪ್ದಹ್ಲಾದ್ ಜೋಶಿ ಕೇಂದ್ರ ರೈಲ್ವೇ ಸಚಿವರಿಗೆ ಕೋರಿದ್ದಾರೆ. ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವ ಭರವಸೆಯನ್ನ ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ನೀಡಿದ್ದಾರೆ.

ಹುಬ್ಬಳ್ಳಿ ರೈಲ್ವೆ ನಿಲ್ದಾಣದ 3ನೇ ಪ್ರವೇಶ ದ್ವಾರ ಉದ್ಘಾಟನೆ
ಹುಬ್ಬಳ್ಳಿಯ ಸದ್ಗುರು ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣದಲ್ಲಿ ನಿರ್ಮಾಣವಾದ 3ನೇ ಪ್ರವೇಶ ದ್ವಾರವನ್ನು ಇಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಉದ್ಘಾಟಿಸಿದರು. ಹುಬ್ಬಳ್ಳಿ- ನಿಜಾಮುದ್ದೀನ್ ರೈಲಿಗೆ ಹಸಿರು ಬಾವುಟ ತೋರಿಸುವುದರ ಮೂಲಕ ಚಾಲನೆ ನೀಡಿದರು.

115 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಮೂರನೇ ಪ್ರವೇಶದ್ವಾರವು ಇಲ್ಲಿನ ಜನರ ಬಹು ದಿನದ ಬೇಡಿಕೆಯಾಗಿತ್ತು. ಅತ್ಯಂತ ಹೆಚ್ಚು ಸಂಖ್ಯೆ ಪ್ರಯಾಣಿಕರು ಪ್ರತಿ ದಿನ ಇಲ್ಲಿಗೆ ಭೇಟಿ ನೀಡುತ್ತಿದ್ದು, ಈ ಜನ ದಟ್ಟಣೆಯ ನಿಯಂತ್ರಣದಲ್ಲಿ ಈ ಹೊಸ ದ್ವಾರವು ಪ್ರಮುಖ ಪಾತ್ರ ವಹಿಸಲಿದೆ.  ಬೆಂಗಳೂರು ಹಾಗೂ ಯಶವಂತಪುರ ರೈಲು ನಿಲ್ದಾಣ ಹೊರತುಪಡಿಸಿದರೆ, 3ನೇ ಪ್ರವೇಶದ್ವಾರ ತಲೆ ಎತ್ತಿರುವುದು ಹುಬ್ಬಳ್ಳಿಯಲ್ಲಿ ಮಾತ್ರ.

1505 ಮೀಟರ ಉದ್ದದ ಪ್ಲಾಟ್‌ ಫಾರಂ ಹೊಂದುವ ಮೂಲಕ ವಿಶ್ವದ ಅತ್ಯಂತ ಉದ್ದನೆಯ ಪ್ಲಾಟ್‌ ಫಾರಂ ಹೊಂದಿರುವ ಖ್ಯಾತಿಗೆ ಕೂಡ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣ ಪಾತ್ರವಾಗಿದೆ. ಇದೀಗ 3ನೇ ಪ್ರವೇಶದ್ವಾರದಿಂದ ನೇರವಾಗಿ ಈ ನಿಲ್ದಾಣಕ್ಕೆ ಪ್ರವೇಶ ಪಡೆಯುಬಹುದಾಗಿದ್ದು, ಉದ್ದನೆಯ ಈ ಪ್ಲಾಟ್‌ ಫಾರಂ ಪ್ರಯಾಣಿಕರಿಗೆ ಹೆಚ್ವಿನ ಅನುಕೂಲ ಕಲ್ಪಿಸಲಿದೆ. ಪ್ಲಾಟ್‌ ಫಾರಂ ಸಂಖ್ಯೆಗಳು ಕೂಡ ಹೆಚ್ಚಾಗಿದ್ದು, 5ರಿಂದ 8ಕ್ಕೆ ಏರಿದೆ ಹಾಗೂ 7 ಮತ್ತು 8 ನೇ ಪ್ಲಾಟ್ ಫಾರಂ ಸಂಪರ್ಕಿಸಲು ಸಬ್  ವೇ ನಿರ್ಮಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com