ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಇಂದು 'ಹಿಜಾಬ್' ತೀರ್ಪು, ಎಲ್ಲರ ಚಿತ್ತ ಸುಪ್ರೀಂ ಕೋರ್ಟ್ ನತ್ತ: ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕಟ್ಟೆಚ್ಚರ

ರಾಜ್ಯದ ಜನತೆ ಅದರಲ್ಲೂ ಕರಾವಳಿ ಭಾಗದ ಜನರು ಕುತೂಹಲದಿಂದ ಕಾಯುತ್ತಿರುವ ಹಿಜಾಬ್ ತೀರ್ಪು(Hijab vedict) ಇಂದು ಗುರುವಾರ ಬೆಳಗ್ಗೆ 10.30ಕ್ಕೆ ಪ್ರಕಟವಾಗುತ್ತಿದ್ದು, ಎಲ್ಲರ ಚಿತ್ತ ಸುಪ್ರೀಂ ಕೋರ್ಟ್ ನತ್ತ ನೆಟ್ಟಿದೆ. 
Published on

ನವದೆಹಲಿ/ಬೆಂಗಳೂರು: ರಾಜ್ಯದ ಜನತೆ ಅದರಲ್ಲೂ ಕರಾವಳಿ ಭಾಗದ ಜನರು ಕುತೂಹಲದಿಂದ ಕಾಯುತ್ತಿರುವ ಹಿಜಾಬ್ ತೀರ್ಪು(Hijab vedict) ಇಂದು ಗುರುವಾರ ಬೆಳಗ್ಗೆ 10.30ಕ್ಕೆ ಪ್ರಕಟವಾಗುತ್ತಿದ್ದು, ಎಲ್ಲರ ಚಿತ್ತ ಸುಪ್ರೀಂ ಕೋರ್ಟ್ ನತ್ತ ನೆಟ್ಟಿದೆ. 

ಕಳೆದ ವರ್ಷ ಹಿಜಾಬ್ ವಿವಾದ ಉಡುಪಿಯ ಕಾಲೇಜೊಂದರಲ್ಲಿ ಆರಂಭವಾಗಿ ನಂತರ ಅದು ಕರಾವಳಿ ಭಾಗದಿಂದ ಇಡೀ ರಾಜ್ಯಕ್ಕೆ ಅಷ್ಟೇ ಏಕೆ ದೇಶದ ಹಲವು ಭಾಗಗಳಿಗೆ ಕೆನ್ನಾಲಿಗೆಯಂತೆ ವ್ಯಾಪಿಸಿ ತೀವ್ರ ವಿವಾದವುಂಟಾಗಿ, ಹಿಂಸಾಚಾರ ಕೂಡ ನಡೆದಿತ್ತು. ಶಾಲಾ ಕಾಲೇಜುಗಳಲ್ಲಿ ಧಾರ್ಮಿಕ ಗುರುತು ಸೂಚಿಸುವ ಬಟ್ಟೆಗಳನ್ನು ಧರಿಸಿಕೊಂಡು ವಿದ್ಯಾರ್ಥಿಗಳು ಹೋಗಬಾರದು ಎಂಬ ಕರ್ನಾಟಕ ರಾಜ್ಯ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಉಡುಪಿಯ ವಿದ್ಯಾರ್ಥಿನಿಯರು ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ರಾಜ್ಯ ಸರ್ಕಾರದ ಪರವಾಗಿ ತೀರ್ಪು ನೀಡಿ, ನಿಯಮವನ್ನು ಎತ್ತಿ ಹಿಡಿದಿತ್ತು. 

ಅದನ್ನು ಪ್ರಶ್ನಿಸಿ ವಿದ್ಯಾರ್ಥಿನಿಯರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು ಸುದೀರ್ಘ ವಾದ-ವಿವಾದ ಆಲಿಸಿದ ನ್ಯಾಯಾಲಯ ಇಂದು ಬೆಳಗ್ಗೆ ಅಂತಿಮ ತೀರ್ಪು ಪ್ರಕಟಿಸಲಿದೆ.

ಎಲ್ಲೆಡೆ ಬಿಗಿ ಕಟ್ಟೆಚ್ಚರ: ಹಿಜಾಬ್ ವಿವಾದ ಬಹಳ ಸೂಕ್ಷ್ಮವಾಗಿರುವುದರಿಂದ ಯಾವುದೇ ಪರಿಸ್ಥಿತಿ ಉಂಟಾದರೂ ಅಚ್ಚರಿಯಿಲ್ಲ. ಯಾವುದೇ ಹಿಂಸಾಚಾರ, ಸಾವು-ನೋವು ಉಂಟಾಗದಂತೆ ಪೊಲೀಸರು ಬೆಂಗಳೂರು, ಕರಾವಳಿ ಭಾಗ ಸೇರಿದಂತೆ ಎಲ್ಲೆಡೆ ಕಟ್ಟೆಚ್ಚರ ವಹಿಸಿದ್ದಾರೆ.ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೈ ಅಲರ್ಟ್ ಘೋಷಿಸಿ ಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ ಕಣ್ಗಾವಲು ಇರುವಂತೆ ಆಯಾ ವಲಯದ ಡಿಸಿಪಿಗಳಿಗೆ ಉಸ್ತುವಾರಿ ವಹಿಸಲಾಗಿದೆ. 

ಹಿಜಾಬ್, ನ್ಯಾಯಾಲಯದಲ್ಲಿ ವಾದ-ವಿವಾದ ಹಿನ್ನೆಲೆ: ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಿಕೊಂಡು ವಿದ್ಯಾರ್ಥಿನಿಯರು ಹೋಗುವಂತಿಲ್ಲ, ತರಗತಿಯೊಳಗೆ ಕೂರುವಂತಿಲ್ಲ ಎಂದು ರಾಜ್ಯ ಸರ್ಕಾರ ಕಳೆದ ಫೆಬ್ರವರಿ 5ರಂದು ತೀರ್ಪು ನೀಡಿತ್ತು.

ನಂತರ ಸತತ 10 ದಿನಗಳ ಕಾಲ ವಾದ-ವಿವಾದ ಆಲಿಸಿದ ನಂತರ ಕಳೆದ ಸೆಪ್ಟೆಂಬರ್ 22ರಂದು ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತ ಮತ್ತು ಸುಧಾಂಶು ದುಲಿಯಾ ನೇತೃತ್ವದ ನ್ಯಾಯಪೀಠ ತೀರ್ಪನ್ನು ಕಾಯ್ದಿರಿಸಿತ್ತು. 
ಹಿಜಾಬ್ ಪರ ವಾದ ಮಂಡಿಸಿದ್ದ ವಕೀಲರು, ಅತ್ಯಗತ್ಯ ಧಾರ್ಮಿಕ ಅಭ್ಯಾಸವನ್ನು ಹೈಕೋರ್ಟ್ ತಪ್ಪಾಗಿ ಬಿಂಬಿಸಿದೆ ಎಂದು ವಾದಿಸಿದರು.

ಇದಕ್ಕೆ ಕರ್ನಾಟಕ ಸರ್ಕಾರ ಪರ ವಾದ ಮಂಡಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತ 2021ರವರೆಗೆ ಮುಸ್ಲಿಂ ವಿದ್ಯಾರ್ಥಿನಿಯರು ತರಗತಿಯೊಳಗೆ ಹಿಜಾಬ್ ಧರಿಸುತ್ತಿರಲಿಲ್ಲ. ಶಾಲಾ-ಕಾಲೇಜು ನಿಯಮ ಪಾಲಿಸಿಕೊಂಡು ಹೋಗುತ್ತಿದ್ದರು, ಬೇಕೆಂದೇ ಇದ್ದಕ್ಕಿದ್ದಂತೆ ವಿವಾದ ಸೃಷ್ಟಿಸಿದ್ದಾರೆ ಎಂದರು.

ನಂತರ ಸೋಷಿಯಲ್ ಮೀಡಿಯಾದಲ್ಲಿ ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ಅಭಿಯಾನವನ್ನು ಆರಂಭಿಸಿತ್ತು. ಹಿಜಾಬ್ ಧರಿಸುವುದನ್ನು ಪ್ರಾರಂಭಿಸುವಂತೆ ಸೋಷಿಯಲ್ ಮೀಡಿಯಾದಲ್ಲಿ ಕರೆ ನೀಡಲಾಯಿತು, ಹಿಜಾಬ್ ಧರಿಸಿಕೊಂಡು ವಿದ್ಯಾರ್ಥಿನಿಯರು ಶಾಲೆ-ಕಾಲೇಜುಗಳಿಗೆ ಹೋಗಿದ್ದು ಸ್ವಪ್ರೇರಣೆಯಿಂದಲ್ಲ, ಬದಲಿಗೆ ಇದೊಂದು ದೊಡ್ಡ ಪಿತೂರಿ ಮಕ್ಕಳು ದೊಡ್ಡವರ ಸಲಹೆಯಂತೆ ವರ್ತಿಸುತ್ತಿದ್ದಾರೆ ಎಂದು ಮೆಹ್ತಾ ಹೇಳಿದರು.

ಕೆಲವು ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಹುಝೆಫಾ ಅಹ್ಮದಿ ಅವರು, ಪಿಎಫ್‌ಐ ವಾದವನ್ನು ಹೈಕೋರ್ಟ್‌ನಲ್ಲಿ ಪ್ರಸ್ತಾಪಿಸಲು ಬಿಡಲಿಲ್ಲ. ಇದು ಪೂರ್ವಾಗ್ರಹ ಪೀಡಿತ ವಾದವಾಗಿದೆ ಎಂದು ಹೇಳಿದರು.

ಕರ್ನಾಟಕ ಸರ್ಕಾರದ ಆದೇಶವು ಮುಸ್ಲಿಂ ಮಹಿಳೆಯರನ್ನು ಗುರಿಯಾಗಿಸಿದೆ. ಸಂವಿಧಾನದ 14 ಮತ್ತು 15 ನೇ ವಿಧಿಯನ್ನು ಉಲ್ಲಂಘಿಸಿದೆ ಎಂದು ಅರ್ಜಿದಾರರು ಪ್ರತಿಪಾದಿಸಿದರು. 

ಕೆಲವು ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ದುಶ್ಯಂತ್ ದವೆ, ಮರು ಅರ್ಜಿ ಸಲ್ಲಿಸುವಾಗ, ನಂಬಿಕೆಯುಳ್ಳವರಿಗೆ ಹಿಜಾಬ್ ಅತ್ಯಗತ್ಯ ಮತ್ತು ನಂಬಿಕೆಯಿಲ್ಲದವರಿಗೆ ಇದು ಅನಿವಾರ್ಯವಲ್ಲ ಎಂದು ಹೇಳಿದರು. 

ಸರ್ಕಾರದ ಆದೇಶವು ಸಂವಿಧಾನದಡಿಯಲ್ಲಿ ಖಾತ್ರಿಪಡಿಸಲಾದ ಧಾರ್ಮಿಕ ಮತ್ತು ಸಾಂಸ್ಕೃತಿಕ ಹಕ್ಕುಗಳನ್ನು ಆಚರಿಸುವ ಅವರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿದಾರರ ವಕೀಲರು ಕಟುವಾಗಿ ವಾದಿಸಿದರು.

ಶಿಕ್ಷಣ ಇಲಾಖೆಯು 2021-2022ರ ಶೈಕ್ಷಣಿಕ ವರ್ಷಕ್ಕೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ ಸಮವಸ್ತ್ರ ಕಡ್ಡಾಯವಲ್ಲ ಎಂದು ಹೇಳಿದೆ ಎಂದು ದವೆ ವಾದಿಸಿದರು. ಇತರ ಹಿರಿಯ ವಕೀಲರಾದ ರಾಜೀವ್ ಧವನ್, ಕಪಿಲ್ ಸಿಬಲ್, ಕಾಲಿನ್ ಗೊನ್ಸಾಲ್ವೆಸ್, ದೇವದತ್ತ್ ಕಾಮತ್, ಸಂಜಯ್ ಹೆಗ್ಡೆ, ಸಲ್ಮಾನ್ ಖುರ್ಷಿದ್ ಸಹ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿದಾರರನ್ನು ಪ್ರತಿನಿಧಿಸಿದರು.

ಕರ್ನಾಟಕ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ಮೆಹ್ತಾ ಮತ್ತು ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ.ನಾವಾಡಗಿ ಅವರು ವಾದ ಮಂಡಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com