ಬಂಡೇಮಠ ಬಸವಲಿಂಗ ಸ್ವಾಮಿಗಳ ಆತ್ಮಹತ್ಯೆ ಕೇಸು: ಡೆತ್ ನೋಟ್ ವಶ, ಪೊಲೀಸರಿಂದ ಕೇಸು ದಾಖಲು

ಕಂಚುಗಲ್ ಬಂಡೇಮಠದ ಬಸವಲಿಂಗ ಸ್ವಾಮಿಗಳ ಆತ್ಮಹತ್ಯೆ ಕೇಸ್​ಗೆ ದೊಡ್ಡ ತಿರುವು ಸಿಕ್ಕಿದೆ. ಸ್ವಾಮೀಜಿ ಮಹಿಳೆಯ ಹನಿಟ್ರ್ಯಾಪ್​ ಮತ್ತು ಬೆದರಿಕೆಗೆ ಒಳಗಾಗಿ ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ದಟ್ಟವಾಗಿದೆ ಎಂದು ಬುಧವಾರ ಪೊಲೀಸ್ ಮೂಲಗಳು ತಿಳಿಸಿವೆ.
ಬಂಡೇಮಠದ ಬಸವಲಿಂಗ ಸ್ವಾಮಿ(ಸಂಗ್ರಹ ಚಿತ್ರ)
ಬಂಡೇಮಠದ ಬಸವಲಿಂಗ ಸ್ವಾಮಿ(ಸಂಗ್ರಹ ಚಿತ್ರ)

ರಾಮನಗರ: ಕಂಚುಗಲ್ ಬಂಡೇಮಠದ (Bandemutt) ಬಸವಲಿಂಗ ಸ್ವಾಮಿಗಳ (Basavalinga Swamy Suicide Case) ಆತ್ಮಹತ್ಯೆ ಕೇಸ್​ಗೆ ದೊಡ್ಡ ತಿರುವು ಸಿಕ್ಕಿದೆ. ಸ್ವಾಮೀಜಿ ಮಹಿಳೆಯ ಹನಿಟ್ರ್ಯಾಪ್​ (Honeytrap) ಮತ್ತು ಬೆದರಿಕೆಗೆ ಒಳಗಾಗಿ ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ದಟ್ಟವಾಗಿದೆ ಎಂದು ಬುಧವಾರ ಪೊಲೀಸ್ ಮೂಲಗಳು ತಿಳಿಸಿವೆ.

400 ವರ್ಷಕ್ಕೂ ಅಧಿಕ ಇತಿಹಾಸವನ್ನು ಹೊಂದಿರುವ ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಕೆಂಪಾಪುರದ ಬಂಡೆಮಠದ ಬಸವಲಿಂಗೇಶ್ವರ ಸ್ವಾಮೀಜಿ ಕಳೆದ ಭಾನುವಾರ ಮಠದ ಆವರಣದಲ್ಲಿರುವ ಪೂಜಾ ಕೊಠಡಿಯ ಕಿಟಕಿಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಸ್ಥಿತಿಯಲ್ಲಿ ಕಂಡುಬಂದಿದ್ದರು.

ಸ್ವಾಮೀಜಿಗಳ ಮೃತದೇಹವಿದ್ದ ಜಾಗದಲ್ಲಿ ಪೊಲೀಸರಿಗೆ ಸ್ವಾಮೀಜಿ ಬರೆದಿದ್ದ ಹಲವು ಪುಟಗಳ ಡೆತ್ ನೋಟ್ ಸಿಕ್ಕಿದ್ದು ಅದರಲ್ಲಿ ತಮ್ಮ ಮೇಲೆ ನಿರಂತರ ಕಿರುಕುಳ ಮಾಡಿ ತಮ್ಮ ಚಾರಿತ್ರ್ಯಕ್ಕೆ ಧಕ್ಕೆ ತರಲು ಕೆಲವರು ಯತ್ನಿಸಿದ್ದಾರೆ. ನನ್ನ ಮಾನ ಕಳೆಯುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ್ದು, ಅವರ ಹೆಸರುಗಳನ್ನು ಕೂಡ ಡೆತ್ ನೋಟ್ ನಲ್ಲಿ ದಾಖಲಿಸಿದ್ದಾರೆ.

ಚಿತ್ರದುರ್ಗದ ಮುರುಘಾ ಮಠದ ಸ್ವಾಮೀಜಿ ಶಿವಮೂರ್ತಿ ಮುರುಘಾ ಶರಣರು ಲೈಂಗಿಕ ಹಗರಣ ಕೇಸಿನಲ್ಲಿ ಜೈಲುಪಾಲಾದ ನಂತರ ಬಂಡೆಮಠದ 45 ವರ್ಷದ ಬಸವಲಿಂಗೇಶ್ವರ ಸ್ವಾಮಿಗಳ ಮೇಲೆ ಹನಿಟ್ರ್ಯಾಪ್ ಮಾಡಿ ಬೆದರಿಕೆ ಹಾಕಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

ವಿಡಿಯೊದಲ್ಲಿ ಏನಿದೆ?: ಬಸವಲಿಂಗ ಸ್ವಾಮೀಜಿ ಅರೆಬೆತ್ತಲೆಯಾಗಿರುವ ವಿಡಿಯೋ ಕ್ಲಿಪ್ ಅವರ ಆತ್ಮಹತ್ಯೆ ಬಳಿಕ ವೈರಲ್ ಆಗಿದ್ದು, ಅದರಲ್ಲಿ ಅರೆಬೆತ್ತಲಾಗಿ ಮಹಿಳೆ ಜೊತೆ ಮಾತಾಡಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋವನ್ನಿಟ್ಟುಕೊಂಡು ಸ್ವಾಮೀಜಿಗೆ ಬ್ಲ್ಯಾಕ್​ಮೇಲ್​ ಮಾಡಲಾಗುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಲ್ಲಾ ಆಯಾಮದಿಂದಲೂ ತನಿಖೆ ನಡೆಸುತ್ತಿದ್ದಾರೆ.

ಇತ್ತ ಸ್ವಾಮೀಜಿ ಬರೆದ ಡೆತ್​ನೋಟ್​ನಲ್ಲಿ ಅಂಶಗಳು ಎಫ್​ಐಆರ್​ (FIR) ನಲ್ಲಿ ದಾಖಲಾಗದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಡೆತ್​ನೋಟ್​ನಲ್ಲಿ ಸ್ವಾಮೀಜಿ ನಾಲ್ಕೈದು ಜನರ ಹೆಸರುಗಳನ್ನ ಉಲ್ಲೇಖ ಮಾಡಿದ್ದರಂತೆ. ಎಫ್​ಐಆರ್​ನಲ್ಲಿ ಓರ್ವ ಮಹಿಳೆ ಹಾಗೂ ಹಿತಶತೃಗಳೆಂದು ಉಲ್ಲೇಖ ಮಾಡಲಾಗಿದೆ. ಇದೇ ಕಾರಣದಿಂದ ಶ್ರೀಗಳನ್ನ ಹನಿಟ್ರ್ಯಾಪ್ ಮಾಡಿ ಬ್ಲಾಕ್ ಮೇಲ್ ಮಾಡಿರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಅನಾಮಧೇಯನ ಹೆಸರಿನ ಮೇಲೆ ಎಫ್‍ಐಆರ್ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಕುದೂರು ಪೊಲೀಸರ ಎಫ್‍ಐಆರ್ ಮೇಲೆ ಅನುಮಾನ ಮೂಡಿಸಿದೆ. 

ಡೆತ್‌ನೋಟ್‌ನಲ್ಲಿ ಏನಿದೆ?
ಸಿದ್ದಗಂಗೆಯ ಪೂಜ್ಯರಿಗೆ ನನ್ನ ಸಾಷ್ಟಾಂಗ ಪ್ರಾಣಮಗಳು ಹಾಗೂ ಶ್ರೀ ಮಠದ ಎಲ್ಲಾ ಭಕ್ತರಿಗೆ ನನ್ನ ಕೊನೆ ಶರಣ ಶರಣಾರ್ಥಿಗಳು.

ಪೂಜ್ಯರಲ್ಲಿ ಹಾಗೂ ಮಠದ ಭಕ್ತರಲ್ಲಿ ನನ್ನ ಕೊನೆಯ ನಿವೇದನೆ ಏನೆದಂರೆ, ನಾನು ಈ ಮಠದ ಉತ್ತಾರಾಧಿಕಾರಿಯಾಗಿ 25 ವರ್ಷಗಳು ಹೇಗೆ ಇದ್ದೆ ಎಂಬುದು ನಿಮಗೆಲ್ಲಾ ತಿಳಿದಿದೆ. ಇಷ್ಟು ದಿನ ನಾನು ಈ ಮಠದ ಒಬ್ಬ ನಿಷ್ಠಾವಂತ ಸೇವಕನಾಗಿ ಪ್ರಮಾಣಿಕನಾಗಿ ಶ್ರದ್ದೆಯಿಂದ ಮಠದ ಕೆಲಸ ಮಾಡಿದ್ದೆನೆ. ಸಿದ್ದಗಂಗಾ ಶ್ರೀಗಳ ಪ್ರೀತಿ ಪಾತ್ರನಾಗಿ ಸೇವೆ ಮಾಡುತ್ತ ಬಂದಿದ್ದೇನೆ.

ಯಾವತ್ತೂ ಮಠದ ಆದಾಯವನ್ನು ನನ್ನ ವೈಯಕ್ತಿಕ ಜೀವನಕ್ಕೆ ನನ್ನ ಬಂಧುಗಳಿಗೆ ಅಗಲಿ, ಮಠಗಳಿಗಾಗಲಿ ಕೊಟ್ಟಿಲ್ಲ, ಖರ್ಚು ಮಾಡಿಲ್ಲ. ಎಲ್ಲವನ್ನು ಮಠದ ಕಾರ್ಯಗಳಿಗೆ ವಿನಿಯೋಗಿಸಿದ್ದೇನೆ. ಅಷ್ಟೇ ಪ್ರಮಾಣಿಕವಾಗಿ ಬದುಕಿದ್ದೇನೆ. ಕಷ್ಟಗಳ ಮಧ್ಯೆ ನಾನು ಬಂದಿದ್ದೇನೆ, ಆದರೆ ಈಗ ತುಂಬ ಮನಸ್ಸಿಗೆ ನೋವಾಗಲು ಸಂಗತಿ ಎಂದರೆ ನನ್ನ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಕೆಟ್ಟ ವಿಚಾರಗಳನ್ನು ನನ್ನ ಮೇಲೆ ಹೊರಿಸಿ ನನ್ನ ಮನಸ್ಸಿಗೆ ನೋವು ಉಂಟು ಮಾಡಿದೆ. ನನ್ನ ಇಪ್ಪತ್ತೈದು ವರ್ಷದ ಪೂರ್ತಿ ಇಂತಹ ಕಷ್ಟಗಳ ಮಧ್ಯೆ ನಾನು ಬಂದಿದ್ದೇನೆ.

ಆದರೆ ಎಲ್ಲಾ ನೋವುಗಳನ್ನು ಸಹಿಸಿ ಸಿದ್ದಗಂಗಾ ಪೂಜ್ಯರ ದರ್ಶನದಿಂದ ಮುಕ್ತಿಯಾಗುತ್ತಿತ್ತು. ಪೂಜ್ಯರು ಎಷ್ಟು ಸಾರಿ ಧರ್ಮ ತುಂಬಿ ಸಿದ್ದಿಸಿದ್ದಾರೆ. ಎಲ್ಲವನ್ನು ಮರೆತು ನನ್ನ ಕೆಲಸಗಳ ಕಡೆ ಗಮನ ಕೊಡುತ್ತಿದ್ದೆ. ಆದರೆ ಇತ್ತೀಚಿನ ದಿನಗಳಲ್ಲಿ ಕಷ್ಟಗಳು ಬೇರೆ ರೂಪಗಳು ಪಡೆದಿರುತ್ತದೆ. ನನಗೆ ಗೊತ್ತಿಲ್ಲದ ವ್ಯಕ್ತಿಗಳು ಪೋನ್ ಮಾಡುವುದು, ಪರಿಚಯ ಮಾಡಿಕೊಳ್ಳಲು ಯತ್ನಿಸುವುದು ಇದು ನಿರಂತರವಾಗಿ ಆಗಿದೆ.

ಆದರೂ ನಾನು ಈ ಎಲ್ಲಾ ಸಂಕೋಲೆಗಳಿಗೆ ಸಿಗದೇ ಇಷ್ಟು ದಿನ ಎಚ್ಚರವಾಗಿ ಇದ್ದೆ. ಆದರೆ ಶತ್ರುಗಳ ನಿರಂತರ ಪ್ರಯತ್ನದಿಂದ ನನಗೆ ಕೊನೆಗೂ ತೊಂದರೆಯಾಗಿದೆ. ಆರೇಳು ತಿಂಗಳ ಹಿಂದೆ ಗೊತ್ತಿಲ್ಲದ ಮಹಿಳೆಯೊಬ್ಬಳು ನನಗೆ ಕರೆ ಮಾಡಿ ಹಿಂಸೆ ನೀಡುತ್ತಿದ್ದಳು ಎಂದು ಡೆತ್​ ನೋಟ್​ ನಲ್ಲಿ ಉಲ್ಲೇಖಿಸಿದ್ದಾರೆ. 

ಇಂದು ರಾಮನಗರ ಎಸ್​​ಪಿ ಹೇಳಿದ್ದೇನು?
ರಾಮನಗರ ಎಸ್​​ಪಿ ಸಂತೋಷ್ ಬಾಬು ಸುದ್ದಿಗೋಷ್ಠಿ ನಡೆಸಿ, ಕಂಚುಗಲ್ ಬಂಡೇ ಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣದಲ್ಲಿ ಅನ್ ನ್ಯಾಚುರಲ್ ಡೆತ್ ಅಂತ ದೂರು ನೀಡಲಾಗಿದೆ. ಸ್ಥಳಕ್ಕೆ ನಮ್ಮ ಪೊಲೀಸರು ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ. ಸ್ಥಳದಲ್ಲಿ 3 ಪುಟಗಳ ಡೆತ್ ನೋಟ್ ಸಿಕ್ಕಿದೆ. ದೂರಿನ ಅನ್ವಯ ಅನಾಮದೇಯ ಮಹಿಳೆ ವಿರುದ್ಧ IPC ಸೆಕ್ಷನ್​ 306 ರ ಅಡಿ ಕೇಸ್ ದಾಖಲಾಗಿದೆ. ಕೆಲವರ ಹೆಸರೂ ಕೂಡ ಡೆತ್​ನೋಟ್​ನಲ್ಲಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com