ಆಪರೇಷನ್ ಥಿಯೇಟರ್ ನಲ್ಲಿ ಪಾಚಿ, ಬಿರುಕುಬಿಟ್ಟ ಗೋಡೆಗಳು; ಔಷಧಿ, ಸಿಬ್ಬಂದಿ ಕೊರತೆ: ಲೋಕಾಯುಕ್ತ ಭೇಟಿ ವೇಳೆ ಬಿಬಿಎಂಪಿ ಆಸ್ಪತ್ರೆಗಳ ನರಕ ದರ್ಶನ!

ಬಾಬು ಜಗ್‌ ಜೀವನ್‌ ರಾಮ್‌ ನಗರದ ಜನರಲ್‌ ಆಸ್ಪತ್ರೆಯ ಆಪರೇಷನ್‌ ಥಿಯೇಟರ್‌ನಲ್ಲಿ ಫಂಗಸ್‌ ಬೆಳೆದು ದುರ್ವಾಸನೆ ಬರುತ್ತಿದ್ದು, ತಾವರೆಕೆರೆಯ ಪ್ರಿಯದರ್ಶಿನಿ ಹೆರಿಗೆ ಗೃಹದಲ್ಲಿ ಸಿಬ್ಬಂದಿ ಹಾಗೂ ವೈದ್ಯರ ಕೊರತೆ, ಬನಶಂಕರಿ ರೆಫರಲ್‌ ಆಸ್ಪತ್ರೆಯಲ್ಲಿ ಔಷಧ ಪೂರೈಕೆ ಕೊರತೆಯಿಂದ ಆಪರೇಷನ್‌ ಥಿಯೇಟರ್‌, ಲ್ಯಾಬ್‌ ಕಾರ್ಯನಿರ್ವಹಿಸುತ್ತಿಲ್ಲ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಬಾಬು ಜಗ್‌ ಜೀವನ್‌ ರಾಮ್‌ ನಗರದ ಜನರಲ್‌ ಆಸ್ಪತ್ರೆಯ ಆಪರೇಷನ್‌ ಥಿಯೇಟರ್‌ನಲ್ಲಿ ಫಂಗಸ್‌ ಬೆಳೆದು ದುರ್ವಾಸನೆ ಬರುತ್ತಿದ್ದು, ತಾವರೆಕೆರೆಯ ಪ್ರಿಯದರ್ಶಿನಿ ಹೆರಿಗೆ ಗೃಹದಲ್ಲಿ ಸಿಬ್ಬಂದಿ ಹಾಗೂ ವೈದ್ಯರ ಕೊರತೆ, ಬನಶಂಕರಿ ರೆಫರಲ್‌ ಆಸ್ಪತ್ರೆಯಲ್ಲಿ ಔಷಧ ಪೂರೈಕೆ ಕೊರತೆಯಿಂದ ಆಪರೇಷನ್‌ ಥಿಯೇಟರ್‌, ಲ್ಯಾಬ್‌ ಕಾರ್ಯನಿರ್ವಹಿಸುತ್ತಿಲ್ಲ. ಮಾಗಡಿ ರಸ್ತೆಯಲ್ಲಿರುವ ಶಿಥಿಲಾವಸ್ಥೆಗೊಂಡಿರುವ ಹೆರಿಗೆ ಆಸ್ಪತ್ರೆ ಇದು ಕರ್ನಾಟಕ ಲೋಕಾಯುಕ್ತ ತಂಡಗಳು ನಗರದಲ್ಲಿ ಬಿಬಿಎಂಪಿಯ 10 ಆಸ್ಪತ್ರೆಗಳಿಗೆ ಇತ್ತೀಚೆಗೆ ದಿಢೀರ್ ಭೇಟಿ ನೀಡಿದ ಸಂದರ್ಭದಲ್ಲಿ ಬೆಳಕಿಗೆ ಬಂದ ಬೆಚ್ಚಿಬೀಳಿಸುವ ವಾಸ್ತವ ಸಂಗತಿಗಳು. 

2017-18ರಲ್ಲಿ ನಿರ್ಮಿಸಲಾದ ಬಾಬು ಜಗ್‌ ಜೀವನ್‌ ರಾಮ್‌ ನಗರದ ಜನರಲ್‌ ಆಸ್ಪತ್ರೆ ಕಳಪೆ ಗುಣಮಟ್ಟದಿಂದ ಕೂಡಿದ್ದು, ಅದರ ಗೋಡೆಗಳು ಬಿರುಕು ಬಿಟ್ಟಿವೆ. ನೀರು ಸೋರುತ್ತಿದ್ದು ತೇವವುಂಟಾಗಿದೆ ಎಂದು ಲೋಕಾಯುಕ್ತ ಇಲಾಖೆಯ ಸಿಬ್ಬಂದಿ ದಾಳಿ ನಡೆಸಿದ ನಂತರ ಸಲ್ಲಿಸಿದ ವರದಿಯಲ್ಲಿ ತಿಳಿಸಿದ್ದಾರೆ. ತಾವರೆಕೆರೆಯಲ್ಲಿರುವ ಪ್ರಿಯದರ್ಶಿನಿ ಹೆರಿಗೆ ಆಸ್ಪತ್ರೆಯಲ್ಲಿ ಎಕ್ಸ್ ರೇ, ಸ್ಕ್ಯಾನಿಂಗ್ ಸೌಲಭ್ಯಗಳಿಲ್ಲ. ರೋಗಿಗಳಿಗೆ ಆಹಾರ ನೀಡಲಾಗುತ್ತಿಲ್ಲ, ಔಷಧಾಲಯದಲ್ಲಿ ಸಿಬ್ಬಂದಿ ಕೊರತೆಯಿಂದ ಔಷಧಗಳು ದುರುಪಯೋಗವಾಗುತ್ತಿದೆ. ಬಹುತೇಕ ಆಸ್ಪತ್ರೆಗಳಲ್ಲಿ ನಗದು ಘೋಷಣೆಯ ರಿಜಿಸ್ಟರ್‌ಗಳನ್ನು ನಿರ್ವಹಿಸುತ್ತಿಲ್ಲ. 

ಬನಶಂಕರಿ ರೆಫರಲ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸೂಕ್ತ ಹಾಸಿಗೆಗಳಿಲ್ಲ ಎಂದು ಲೋಕಾಯುಕ್ತ ವರದಿ ತಿಳಿಸಿದೆ. ವೈದ್ಯರು ಮತ್ತು ಸಹಾಯಕ ಸಿಬ್ಬಂದಿ ಕೊರತೆಯೂ ಇದೆ. ‘ಮಡಿಲು ಕಿಟ್’ ಪೂರೈಕೆಯೂ ಒಂದು ತಿಂಗಳ ಹಿಂದೆ ಸ್ಥಗಿತಗೊಂಡಿದೆ. ಮಾಗಡಿ ರಸ್ತೆಯಲ್ಲಿರುವ ಹೆರಿಗೆ ಆಸ್ಪತ್ರೆಯಲ್ಲಿ ವೈದ್ಯರು ಹಾಜರಾತಿ ಗುರುತು ಹಾಕಿಲ್ಲ, ಆಸ್ಪತ್ರೆ ಆವರಣದಲ್ಲಿ ಸ್ವಚ್ಛತೆಯ ಕೊರತೆ ಇದೆ.

ಸಿದ್ದಯ್ಯ ರಸ್ತೆಯಲ್ಲಿರುವ ರೆಫರಲ್ ಆಸ್ಪತ್ರೆಯಲ್ಲಿ ಹಲವು ಸೂಚನಾ ಫಲಕಗಳು ಒಡೆದು ಹೋಗಿವೆ. ನೀರು ಶುದ್ಧೀಕರಿಸುವ ಯಂತ್ರಗಳು ಕಾರ್ಯನಿರ್ವಹಿಸುತ್ತಿಲ್ಲ. ವೈದ್ಯರು ಬರೆದಿರುವ ವಿಟಮಿನ್ ಡಿ-3 ಔಷಧ ದಾಸ್ತಾನು ಖಾಲಿಯಾಗಿದ್ದು, ರ್ಯಾಂಪ್ ಮತ್ತು ಲಿಫ್ಟ್ ಸೌಲಭ್ಯವೂ ಇಲ್ಲ. ಆಸ್ಪತ್ರೆಗೆ ಸರಕಾರ ಪ್ರತಿಧ್ವನಿ ಮತ್ತು ಮ್ಯಾಮೊಗ್ರಫಿ ಸೌಲಭ್ಯಗಳು ಆರು ವರ್ಷಗಳಿಂದ ತಂತ್ರಜ್ಞರ ನೇಮಕದ ಕೊರತೆಯಿಂದ ಬಳಕೆಯಾಗುತ್ತಿಲ್ಲ.

ಆಸ್ಟಿನ್ ಟೌನ್ ಹೆರಿಗೆ ಆಸ್ಪತ್ರೆಯಲ್ಲಿ ವೈದ್ಯಕೀಯ ತ್ಯಾಜ್ಯ ವಿಲೇವಾರಿಯಾಗಿಲ್ಲ, ಹಣ ಬಿಡುಗಡೆಯಾಗದ ಕಾರಣ ಸಿಬ್ಬಂದಿ ವಸತಿ ಗೃಹಗಳ ಸೂಕ್ತ ನಿರ್ವಹಣೆ ಇಲ್ಲದಾಗಿದೆ. ರೋಗಿಗಳಿಗೆ ಉಚಿತ ಆಹಾರ ಪೂರೈಕೆಯಾಗುತ್ತಿಲ್ಲ. ಅದೇ ರೀತಿ ಎನ್‌ಆರ್‌ ಕಾಲೋನಿ ಹೆರಿಗೆ ಗೃಹದಲ್ಲಿ ಶೌಚಾಲಯ ನಿರ್ವಹಣೆ ಕೊರತೆ ಇದ್ದು, ನವೀಕರಣ ಮಾಡಬೇಕಿದೆ. ಆಸ್ಪತ್ರೆ ಕಟ್ಟಡದ ನವೀಕರಣ ಕಾಮಗಾರಿಯಿಂದಾಗಿ ಹಲಸೂರು ರೆಫರಲ್ ಆಸ್ಪತ್ರೆಯಲ್ಲಿ ಯಾವುದೇ ರೋಗಿಗಳು ದಾಖಲಾಗುತ್ತಿಲ್ಲ.

ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ, ಬಿಬಿಎಂಪಿ ಮುಖ್ಯ ಆಯುಕ್ತ ಹಾಗೂ ಇತರರ ವಿರುದ್ಧ ಸ್ವಯಂ ಪ್ರೇರಿತವಾಗಿ ವಿಚಾರಣೆ ಆರಂಭಿಸಿದ ಲೋಕಾಯುಕ್ತ ನ್ಯಾಯಮೂರ್ತಿ ಬಿ ಎಸ್ ಪಾಟೀಲ್ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.

3 ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ: ಕರ್ನಾಟಕ ಲೋಕಾಯುಕ್ತದ ತಂಡಗಳು ನಡೆಸಿದ ದಿಢೀರ್ ಭೇಟಿಯಿಂದ ನಗರದ ಮೂರು ಸರ್ಕಾರಿ ಪ್ರಮುಖ ಆಸ್ಪತ್ರೆಗಳಲ್ಲಿ ಹಲವಾರು ಹುದ್ದೆಗಳು ಖಾಲಿ ಇದ್ದು, ಬಡ ರೋಗಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಲೋಕಾಯುಕ್ತ ವರದಿ ಪ್ರಕಾರ, ಮಿಂಟೊ ಕಣ್ಣಿನ ಆಸ್ಪತ್ರೆಯಲ್ಲಿ ಶೇಕಡಾ 68 ಶುಶ್ರೂಷಕರ ಹುದ್ದೆಗಳು ಖಾಲಿಯಿದ್ದರೆ, ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ ಶೇಕಡಾ 52 ಗ್ರೂಪ್ ‘ಎ’ ಹಾಗೂ ಶೇಕಡಾ 35 ಗ್ರೂಪ್ ‘ಸಿ’ ಹುದ್ದೆಗಳು ಖಾಲಿ ಇವೆ.

ರಾಜೀವ್ ಗಾಂಧಿ ಹೃದ್ರೋಗ ಸಂಸ್ಥೆಯಲ್ಲಿ ಶೇಕಡಾ 50ಕ್ಕೂ ಹೆಚ್ಚು ವೈದ್ಯರ ಹುದ್ದೆಗಳು ಮತ್ತು ಶೇಕಡಾ 80 ರಷ್ಟು ಬೋಧಕೇತರ ಸಿಬ್ಬಂದಿ ಹುದ್ದೆಗಳು ಖಾಲಿ ಇವೆ. ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರು ವೈದ್ಯಕೀಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಮತ್ತು ಆಸ್ಪತ್ರೆಗಳ ಮುಖ್ಯಸ್ಥರ ವಿರುದ್ಧ ಸ್ವಯಂಪ್ರೇರಿತ ವಿಚಾರಣೆಯನ್ನು ಪ್ರಾರಂಭಿಸಿ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com