ಚಾಮುಂಡೇಶ್ವರಿ ಉತ್ಸವ ಮೂರ್ತಿ
ಚಾಮುಂಡೇಶ್ವರಿ ಉತ್ಸವ ಮೂರ್ತಿ

ವಿಶ್ವ ವಿಖ್ಯಾತ 'ಮೈಸೂರು ದಸರಾ ಮಹೋತ್ಸವ 2022' ಉದ್ಘಾಟನೆಗೆ ಕ್ಷಣಗಣನೆ: ರಾಷ್ಟ್ರಪತಿಗಳಿಂದ ಚಾಲನೆ

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಚಾಮುಂಡಿಬೆಟ್ಟದಲ್ಲಿ ವಿದ್ಯುಕ್ತವಾಗಿ ಚಾಲನೆಗೊಳ್ಳಲಿರುವ 10 ದಿನಗಳ ದಸರಾಗೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗಿದೆ.
Published on

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಚಾಮುಂಡಿಬೆಟ್ಟದಲ್ಲಿ ವಿದ್ಯುಕ್ತವಾಗಿ ಚಾಲನೆಗೊಳ್ಳಲಿರುವ 10 ದಿನಗಳ ದಸರಾಗೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗಿದೆ. ಸ್ವಾತಂತ್ರ್ಯ ನಂತರ ಇದೇ ಮೊದಲ ಬಾರಿಗೆ ರಾಷ್ಟ್ರಪತಿ ನಾಡ ಹಬ್ಬ ಉದ್ಘಾಟಿಸುತ್ತಿದ್ದು, ಬೆಟ್ಟದಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ಬೆಳಗ್ಗೆ 11-30ರವರೆಗೂ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

 ಬೆಳ್ಳಿ ರಥದಲ್ಲಿ ಪ್ರತಿಷ್ಠಾಪಿಸಲಾಗಿರುವ ಚಾಮುಂಡೇಶ್ವರಿ ದೇವಿಯ ವಿಗ್ರಹಕ್ಕೆ ಮುರ್ಮು ಪೂಜೆ ಸಲ್ಲಿಸಲಿದ್ದಾರೆ. ಈ ಹಿಂದೆ 1988 ಮತ್ತು 1990ರಲ್ಲಿ ಅಂದಿನ ಉಪರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ ಹಾಗೂ ರಾಷ್ಟ್ರಪತಿ ಆರ್.ವೆಂಕಟರಮಣ ಅವರು ಜಂಬೂ ಸವಾರಿಯಲ್ಲಿ ಪಾಲ್ಗೊಂಡಿದ್ದರೂ ಇದೇ ಮೊದಲ ಬಾರಿಗೆ ರಾಷ್ಟ್ರಪತಿಯಿಂದ ದಸರಾ ಉದ್ಘಾಟನೆಯಾಗಲಿದೆ.

ದ್ರೌಪದಿ ಮುರ್ಮು ಅವರು ಚಾಮುಂಡೇಶ್ವರಿ ದರ್ಶನ ಪಡೆದ ನಂತರ ಬೆಳಗ್ಗೆ 9-45 ರಿಂದ 10-05ರ ನಡುವಣ ವೃಶ್ಚಿಕ ಲಗ್ನದಲ್ಲಿ ಅವರು ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ.  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಮತ್ತು ಸಂಪುಟದ ಸಚಿವರು ಮೈಸೂರಿನಲ್ಲಿ ರಾಷ್ಟ್ರಪತಿಗಳನ್ನು ಬರಮಾಡಿಕೊಳ್ಳಲಿದ್ದಾರೆ.

ರಾಷ್ಟ್ರಧ್ಯಕ್ಷರ  ಚೊಚ್ಚಲ ಭೇಟಿಯಿಂದ ಈ ಪ್ರದೇಶದ ಬುಡಕಟ್ಟು ಸಮುದಾಯವು ಹರ್ಷ ವ್ಯಕ್ತಪಡಿಸಿದೆ ಮತ್ತು ಈ ಸಂದರ್ಭದಲ್ಲಿ ಆಯ್ಕೆಯಾದ ಜನರನ್ನು ಆಹ್ವಾನಿಸಲಾಗಿದೆ. ರಾಷ್ಟ್ರಪತಿ ಕಚೇರಿಯು ರಾಜ್ಯಪಾಲರು, ಮುಖ್ಯಮಂತ್ರಿಗಳು ಮತ್ತು ಸಚಿವರು ಸೇರಿದಂತೆ 13 ಮಂದಿಗೆ ವೇದಿಕೆ ಹಂಚಿಕೊಳ್ಳಲು ಅವಕಾಶ ನೀಡಿದೆ. ದಸರಾ ಉನ್ನತಾಧಿಕಾರ ಸಮಿತಿಯು ಸಂಪ್ರದಾಯ ಮತ್ತು ಸಂಸ್ಕೃತಿಗೆ ಧಕ್ಕೆಯಾಗದಂತೆ ಉತ್ಸವವನ್ನು ಆಚರಿಸಲು ನಿರ್ಧರಿಸಿದೆ ಮತ್ತು ಮೈಸೂರು ಅರಮನೆ ಮತ್ತು ಇತರ ಸ್ಥಳಗಳಲ್ಲಿ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದೆ.

ಯುವ ದಸರಾದಲ್ಲಿ ಖ್ಯಾತ ಗಾಯಕರು ಮತ್ತು ನಟರನ್ನೂ ಆಹ್ವಾನಿಸಲಾಗಿದೆ. ಇದೇ ವೇಳೆ ಕುಸ್ತಿ, ಆಹಾರ ಮೇಳ, ರೈತ ದಸರಾ, ಮಹಿಳಾ ದಸರಾದಂತಹ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ. ಈ ಮಧ್ಯೆ ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್‌ಗಾಗಿ ದಿವಂಗತ ಶ್ರೀಕಂಠದತ್ತ ನರಶಿಮರಾಜ ಒಡೆಯರ್ ಅವರ ಪತ್ನಿ ಪ್ರಮೋದಾ ದೇವಿ ಒಡೆಯರ್ ನೇತೃತ್ವದಲ್ಲಿ ಭರದ ಸಿದ್ಧತೆ ನಡೆಯುತ್ತಿದೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com