ದಾವಣಗೆರೆಯಲ್ಲಿ ಸಿದ್ದರಾಮಯ್ಯ ಶಕ್ತಿ ಪ್ರದರ್ಶನ, 75ನೇ ಹುಟ್ಟುಹಬ್ಬಕ್ಕೆ 'ಟಗರು' ಭರ್ಜರಿ ಶೋ, ಸಂಚಾರ ದಟ್ಟಣೆ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು 75ನೇ ವಸಂತಕ್ಕೆ ಕಾಲಿಟ್ಟಿದ್ದು, ಜನ್ಮದಿನದ ಅಮೃತ ಮಹೋತ್ಸವ ಸಂಬಂಧ ಬೆಣ್ಣೆನಗರಿ ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಕಾರ್ಯಕ್ರಮ ಆರಂಭವಾಗಿದೆ.
ಸಿದ್ದರಾಮಯ್ಯ ಮತ್ತು ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಕಟೌಟ್
ಸಿದ್ದರಾಮಯ್ಯ ಮತ್ತು ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಕಟೌಟ್

ದಾವಣಗೆರೆ/ಚಿತ್ರದುರ್ಗ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು 75ನೇ ವಸಂತಕ್ಕೆ ಕಾಲಿಟ್ಟಿದ್ದು, ಜನ್ಮದಿನದ ಅಮೃತ ಮಹೋತ್ಸವ ಸಂಬಂಧ ಬೆಣ್ಣೆನಗರಿ ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಕಾರ್ಯಕ್ರಮ ಆರಂಭವಾಗಿದೆ.

ಸಿದ್ದರಾಮಯ್ಯನವರ ಅಭಿಮಾನಿಗಳು ಉತ್ತರ ಕರ್ನಾಟಕ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ದಾವಣಗೆರೆಗೆ ಆಗಮಿಸಿದ್ದು, ಬೆಂಗಳೂರು - ಪುಣೆ ಹೆದ್ದಾರಿಯಲ್ಲಿ ಬರೋಬ್ಬರಿ 6 ಕಿಲೋ ಮೀಟರ್ ಗೂ ಹೆಚ್ಚು ದೂರ ಸಂಚಾರ ದಟ್ಟಣೆ ಉಂಟಾಗಿದೆ.

ದಾವಣಗೆರೆ ಹೊರವಲಯದಲ್ಲಿ ಇರುವ ಪುಣೆ - ಬೆಂಗಳೂರು ಹೆದ್ದಾರಿ ಎನ್‌ ಎಚ್ 48ರ ಬೈಪಾಸ್ ರಸ್ತೆಯ ಸನಿಹದಲ್ಲೇ ಇರುವ ಶಾಮನೂರು ಪ್ಯಾಲೇಸ್ ಗ್ರೌಂಡ್‌ನಲ್ಲಿ ಸಿದ್ದರಾಮೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ದಾವಣಗೆರೆ ನಗರಕ್ಕೆ ಹೊಂದಿಕೊಂಡಂತೆಯೇ ಶಾಮನೂರು ಪಟ್ಟಣವಿದ್ದು, ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ರಸ್ತೆಯು ಶಾಮನೂರು ಹಾಗೂ ದಾವಣಗೆರೆಯ ನಡುವೆ ಇದೆ. ಇದೀಗ ಬೈಪಾಸ್ ರಸ್ತೆ ಸಂಪೂರ್ಣ ಜಾಮ್ ಆಗಿದ್ದು ವಾಹನಗಳು ಹೆದ್ದಾರಿಯಲ್ಲಿ ಸಾಲುಗಟ್ಟಿ ನಿಂತಿವೆ. ಉತ್ತರ ಕರ್ನಾಟಕದ ಜನಪ್ರಿಯ ವಾಹನವಾದ ತೂಫಾನ್‌ನಲ್ಲಿ ಸಿದ್ದು ಫ್ಯಾನ್ಸ್‌ ಆಗಮಿಸಿದ್ದು, ಒಟ್ಟು 6 ಲಕ್ಷಕ್ಕೂ ಹೆಚ್ಚು ಮಂದಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಅಂದಾಜು ಮಾಡಲಾಗುತ್ತಿದೆ.

ಹೆದ್ದಾರಿಯ ಎರಡೂ ಕಡೆ ರಸ್ತೆ ಬದಿಯಲ್ಲಿ ವಾಹನಗಳು ಕಿ. ಮೀ. ಗಟ್ಟಲೆ ಸಾಲುಗಟ್ಟಿ ನಿಂತಿವೆ. ಶಾಮನೂರು ಪ್ಯಾಲೇಸ್‌ ಗ್ರೌಂಡ್‌ನಲ್ಲಿ ಇದ್ದ ಪಾರ್ಕಿಂಗ್ ಜಾಗವೂ ಭರ್ತಿಯಾಗಿದೆ. ನಿರೀಕ್ಷೆಗೂ ಮೀರಿ ಸಿದ್ದರಾಮಯ್ಯ ಅಭಿಮಾನಿಗಳು ಕಾರ್ಯಕ್ರಮಕ್ಕೆ ಬರುತ್ತಿದ್ದು, ಟ್ರಾಫಿಕ್ ನಿರ್ವಹಣೆ ಸವಾಲಾಗಿ ಪರಿಣಮಿಸಿದೆ.

ಅಭಿಮಾನಿಗಳಿಂದ ಪ್ರೀತಿಯ ಉಡುಗೊರೆ: ಸಿದ್ದರಾಮಯ್ಯನವರಿಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ತಮ್ಮದೇ ಆದ ಅಭಿಮಾನಿ ಬಳಗವಿದೆ. ಮಹಿಳಾ ಅಭಿಮಾನಿಗಳೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಸಿದ್ದರಾಮಯ್ಯನವರಿಗೆ ವೇದಿಕೆಯಲ್ಲಿ ಹೂಮಳೆಯ ಸ್ವಾಗತ ನೀಡಲಾಗುತ್ತಿದೆ. ಕಂಬಳಿ ಹೊದ್ದು ಕುರಿಯೊಂದಿಗೆ ಕೆಲವು ಅಭಿಮಾನಿಗಳು ಕಾರ್ಯಕ್ರಮಕ್ಕೆ ಬಂದಿದ್ದಾರೆ.

ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯನವರು ತಂದಿದ್ದ ಅನ್ನಭಾಗ್ಯ ಯೋಜನೆ ಜನಪ್ರಿಯವಾಗಿತ್ತು. ಅಕ್ಕಿಯಿಂದ ಮನುಷ್ಯನ ಮೂರ್ತಿ ಕಾರ್ಯಕ್ರಮದಲ್ಲಿ ವಿಶೇಷ ಗಮನ ಸೆಳೆಯಿತು.ಸಿದ್ದರಾಮಯ್ಯನವರ ಕಟೌಟ್ ಗಳು ರಾರಾಜಿಸುತ್ತಿವೆ. ಅವರ ಜನಪ್ರಿಯ ಯೋಜನೆಗಳನ್ನಿಟ್ಟುಕೊಂಡು ಹಾಡುಗಳನ್ನು ರಚಿಸಲಾಗಿದ್ದು ಕಲಾವಿದರು ಹಾಡುತ್ತಿದ್ದಾರೆ. ಜಾನಪದ ಕಲಾಪ್ರಕಾರಗಳ ಪ್ರದರ್ಶನ ನಡೆಯುತ್ತಿದೆ. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನ ಪ್ರಮುಖ ನಾಯಕರು ಭಾಗಿಯಾಗಿದ್ದು, ಮೂರು ಪುಸ್ತಕಗಳು ಬಿಡುಗಡೆಯಾಗಿವೆ.

ಮುರುಘಾ ಮಠಕ್ಕೆ ರಾಹುಲ್ ಗಾಂಧಿ ಭೇಟಿ: ಚಿತ್ರದುರ್ಗದ ಮುರುಘಾ ಮಠಕ್ಕೆ ಹುಬ್ಬಳ್ಳಿಯಿಂದ ರಾಹುಲ್ ಗಾಂಧಿಯವರು ಆಗಮಿಸಿ ಮುರುಘಾ ಶರಣರ ಆಶೀರ್ವಾದ ಪಡೆದು ಮಠಾಧೀಶರೊಂದಿಗೆ ಕೆಲ ಹೊತ್ತು ಸಂವಾದ ನಡೆಸಿದರು. ಲಿಂಗಾಯತ ಧರ್ಮದ ಲಿಂಗ, ಲಿಂಗಧಾರಣೆ ಬಗ್ಗೆ ಮುರುಘಾ ಶರಣರಲ್ಲಿ ರಾಹುಲ್ ಗಾಂಧಿ ವಿಚಾರಿಸಿದರು.

ಈ ವೇಳೆ ಮುರುಘಾ ಶರಣರು ರಾಹುಲ್ ಗಾಂಧಿಗೆ ಲಿಂಗಧಾರಣೆ ಮಾಡಿ ದೀಕ್ಷೆ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com