ಚಾಮರಾಜಪೇಟೆ ಮೈದಾನದಲ್ಲಿ ಗಣೇಶ ಹಬ್ಬ ಆಚರಣೆಗೆ ಮನವಿ ಬಂದಿದೆ: ಸಚಿವ ಆರ್. ಅಶೋಕ್
ಬೆಂಗಳೂರು: ಚಾಮರಾಜಪೇಟೆ ಮೈದಾನದಲ್ಲಿ ಗಣೇಶ ಹಬ್ಬ ಆಚರಣೆಗೆ ಮನವಿ ಬಂದಿದೆ. ಆದ್ರೆ ಹಬ್ಬ ಆಚರಣೆ ವಿಚಾರವನ್ನು ಸಿಎಂ ಜೊತೆ ಚರ್ಚೆ ಮಾಡುತ್ತೇನೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಇಂದು ಬೆಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈದಾನದಲ್ಲಿ ಗಣೇಶ ಹಬ್ಬ ಆಚರಣೆಗೆ ಡಿಸಿಗೆ ಮನವಿ ಪತ್ರ ಬಂದಿದೆ. ಈಗ ಆ ಜಾಗ ಕಂದಾಯ ಇಲಾಖೆಗೆ ಸೇರಿದೆ. ಅಲ್ಲಿ ಏನ್ ಆಗಬೇಕು ಎಂದು ತೀರ್ಮಾನ ಮಾಡುವ ಅಧಿಕಾರ ಸರ್ಕಾರಕ್ಕೆ ಇದೆ. ಬೇರೆ ಯಾರಿಗೂ ಆ ಅಧಿಕಾರ ಇಲ್ಲ. 75 ವರ್ಷದಲ್ಲಿ ಆ ಮೈದಾನದಲ್ಲಿ ಧ್ವಜ ಹಾರಿಸಿರಲಿಲ್ಲ. ಈಗ ನಾನು ಕಂದಾಯ ಸಚಿವನಾದ ಬಳಿಕ, ನಾವು ಮೊದಲ ಬಾರಿಗೆ ಧ್ವಜ ಹಾರಿಸಿದ್ದೇವೆ. ಅಲ್ಲಿನ ಸ್ಥಳೀಯರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ವೀರ ಸಾವರ್ಕರ್ ಫೋಟೊವನ್ನು ಮುಸ್ಲಿಂರ ಏರಿಯಾದಲ್ಲಿ ಹಾಕಿಸಿದ್ಯಾಕೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಆರ್.ಅಶೋಕ್ ಕಿಡಿಕಾರಿದ್ದು, ಸಿದ್ದರಾಮಯ್ಯ ಗೊಂದಲದಲ್ಲಿದ್ದಾರೆ. ಮುಸ್ಲಿಂ ಏರಿಯಾ ಅಂದರೆ ಅದು ಪಾಕಿಸ್ತಾನಕ್ಕೆ ಸೇರಿದ್ಯಾ? ಭಾರತಕ್ಕೆ ಸೇರಿದ್ದಾ? ಮುಸ್ಲಿಂರು ಇರೋ ಮಾತ್ರಕ್ಕೆ ಅದನ್ನು ಪಾಕಿಸ್ತಾನ ಅಂದುಕೊಂಡಿದ್ದಾರಾ ಸಿದ್ದರಾಮಯ್ಯ? ಎಂದು ವಾಗ್ದಾಳಿ ನಡೆಸಿದರು.
ಸಾವರ್ಕರ್ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದವರು. ಎರಡು ಬಾರಿ ಕರಿನೀರಿನ ಶಿಕ್ಷೆಗೆ ಒಳಗಾದವರು. ಅಂಡಮಾನ್ ಜೈಲಿನಲ್ಲಿದ್ದವರು ಯಾರೂ ಬದುಕಿ ಬಂದಿಲ್ಲ. ಅಂತಹ ಶಿಕ್ಷೆಯನ್ನು ಸಾವರ್ಕರ್ ಅನುಭವಿಸಿದ್ದಾರೆ. ಇವರ ಲೀಡರ್‌ಗಳಿಗೆ ಅಂತ ಶಿಕ್ಷೆ ಯಾಕೆ ಕೊಟ್ಟಿಲ್ಲ? ಟಿಪ್ಪು, ಹೈದರಾಲಿ ಅಂತ ಮೆರೆಯುತ್ತಾರಲ್ಲ. ಅವರಿಗೆ ಯಾಕೆ ಕರಿನೀರಿನ ಶಿಕ್ಷೆ ನೀಡಿಲ್ಲ? ಬ್ರಿಟಿಷರ ಜೊತೆ ಹೋರಾಡಿದ ಸಾವರ್ಕರ್ ಫೋಟೊ ಹಾಕೋಕೆ ಇವರನ್ನ ಯಾಕೆ ಕೇಳಬೇಕು ಎಂದು ಪ್ರಶ್ನಿಸಿದರು.
ಯಾವ ಯಾವ ಧರ್ಮದವರು ಇದ್ದಾರೆ ಅಂತ ಇವ್ರನ್ನ ಕೇಳಿ ಹಾಕಬೇಕಾ? ಯಾವ ಧರ್ಮ, ಜಾತಿ ಅಂತ ನೋಡಿ ಫೊಟೊ ಹಾಕೋಕೆ ಸಂವಿಧಾನದ ಅಡಿ ನಿಯಮ ಇದ್ಯಾ? ಸಾವರ್ಕರ್ ಅವರನ್ನು ಒಪ್ಪದೇ ಇರಬಹುದು. ಆದ್ರೆ ಸಾವರ್ಕರ್ ಒಬ್ಬ ದೇಶಭಕ್ತ ಎಂದು ಸಚಿವ ಆರ್. ಅಶೋಕ್ ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ