ತುಮಕೂರಿನಲ್ಲಿ ವೀರ ಸಾವರ್ಕರ್ ಫ್ಲೆಕ್ಸ್ ವಿವಾದ: ಪೋಸ್ಟರ್ ಹರಿದುಹಾಕಿದ ಕಿಡಿಗೇಡಿಗಳು, ಸಂಘಟನೆಗಳ ಆಕ್ರೋಶ
ಶಿವಮೊಗ್ಗದಲ್ಲಿ ವೀರ ಸಾವರ್ಕರ್ ಫ್ಲೆಕ್ಸ್ ವಿಚಾರದಲ್ಲಿ ಗಲಾಟೆ ನಡೆದು ಇಬ್ಬರಿಗೆ ಚಾಕು ಇರಿತವಾಗಿ ಅಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿರುವಾಗಲೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ತುಮಕೂರು ನಗರದಲ್ಲಿ ಹಾಕಲಾಗಿದ್ದ ವೀರ ಸಾವರ್ಕರ್ ಭಾವಚಿತ್ರ ಇರುವ ಫ್ಲೆಕ್ಸ್‌ನ್ನು ಕಿಡಿಗೇಡಿಗಳು ಹರಿದು ಹಾಕಿರುವ ಘಟನೆ ನಡೆದಿದೆ.
Published: 18th August 2022 11:27 AM | Last Updated: 18th August 2022 02:12 PM | A+A A-

ವೀರ ಸಾವರ್ಕರ್(ಸಂಗ್ರಹ ಚಿತ್ರ)
ತುಮಕೂರು: ಶಿವಮೊಗ್ಗದಲ್ಲಿ ವೀರ ಸಾವರ್ಕರ್ ಫ್ಲೆಕ್ಸ್ ವಿಚಾರದಲ್ಲಿ ಗಲಾಟೆ ನಡೆದು ಇಬ್ಬರಿಗೆ ಚಾಕು ಇರಿತವಾಗಿ ಅಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿರುವಾಗಲೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ತುಮಕೂರು ನಗರದಲ್ಲಿ ಹಾಕಲಾಗಿದ್ದ ವೀರ ಸಾವರ್ಕರ್ ಭಾವಚಿತ್ರ ಇರುವ ಫ್ಲೆಕ್ಸ್‌ನ್ನು ಕಿಡಿಗೇಡಿಗಳು ಹರಿದು ಹಾಕಿರುವ ಘಟನೆ ನಡೆದಿದೆ.
ನಗರದ ಬಿಜಿಎಸ್ ವೃತ್ತದಿಂದ ಬಸ್ ನಿಲ್ದಾಣದ ಕಡೆಗೆ ತೆರಳುವ ಅಶೋಕ ರಸ್ತೆಯಲ್ಲಿ ಎಂಪ್ರೆಸ್ ಕಾಲೇಜು ಮುಂಭಾಗದಲ್ಲಿ ಸಾವರ್ಕರ್ ಚಿತ್ರ ಇರುವ ಪ್ಲೆಕ್ಸ್ ಹಾಕಲಾಗಿತ್ತು. ಸ್ವಾತಂತ್ರ್ಯ ದಿನಾಚರಣೆ ಮುಗಿದ ಬಳಿಕ ರಾತ್ರಿ ಯಾರೋ ಕಿಡಿಗೇಡಿಗಳು ಸಾವರ್ಕರ್ ಭಾವಚಿತ್ರ ಇರುವ ಫ್ಲೆಕ್ಸ್‌ನ್ನು ಹರಿದು ಹಾಕಿರುವ ಸಂಗತಿ ಬೆಳಕಿಗೆ ಬಂದು ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಜ್ಯೋತಿಗಣೇಶ್ ನಗರದ ವಿವಿಧ ಭಾಗಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರ ಇರುವ ಫ್ಲೆಕ್ಸ್ ಹಾಕಿಸಿದ್ದರು. ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಳವಡಿಸಿದ್ದ ಸಾವರ್ಕರ್ ಅವರ ಚಿತ್ರವನ್ನು ಮಾತ್ರ ಹರಿದು ಹಾಕುವ ಮೂಲಕ ಶಿವಮೊಗ್ಗ ಬಳಿಕ ತುಮಕೂರಿನಲ್ಲೂ ಫ್ಲೆಕ್ಸ್ ಸಮರ ಶುರುವಾಗಿದೆ.
ಇದನ್ನೂ ಓದಿ: ತುಮಕೂರು: ಪೋಸ್ಟರ್ ನಲ್ಲಿ ಮಹಾತ್ಮಾ ಗಾಂಧಿ- ನಾಥೂರಾಮ್ ಗೋಡ್ಸೆ ಫೋಟೋ; ಉದ್ವಿಗ್ನ ಸ್ಥಿತಿಯನ್ನು ತಪ್ಪಿಸಿದ ಪೊಲೀಸರು
ಸಾವರ್ಕರ್ ಫೋಟೋ ಹರಿದವರಿಗೆ ಗುಂಡು ಹಾರಿಸಿ: ಸೊಗಡು ಶಿವಣ್ಣ
ವೀರ ಸಾವರ್ಕರ್ ಫೋಟೋ ಹರಿದವರಿಗೆ ಕಂಡಲ್ಲಿ ಗುಂಡು ಹೊಡೆಯಬೇಕು ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಸೊಗಡು ಶಿವಣ್ಣ ಗುಡುಗಿದ್ದಾರೆ. ಶಾಂತಿಭಂಗ ಮಾಡುವವರನ್ನು ಗಡಿಪಾರು ಮಾಡಬೇಕು. ಶಿವಮೊಗ್ಗದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ವೇಳೆ ನಡೆದ ಘಟನೆ ಮತ್ತೆ ಎಲ್ಲೂ ಮರುಕಳಿಸದಂತೆ ಕೊನೆಗಾಣಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಹಾಗೂ ಪೊಲೀಸರು ನಿಗಾ ವಹಿಸಬೇಕು. ಶಿವಮೊಗ್ಗದಲ್ಲಿನ ಘಟನೆ ಕೊನೆ ಆಗಬೇಕು ಎಂದು ಹೇಳಿದ್ದಾರೆ.