'ನಾನು ಶ್ಯಾಡೋ ಸಿಎಂ, ವಿಪಕ್ಷ ನಾಯಕನಿಗೆ ಸೂಕ್ತ ಭದ್ರತೆ ಕೊಡುವುದು ಸರ್ಕಾರದ ಕರ್ತವ್ಯ': ಸಿದ್ದರಾಮಯ್ಯ

ರಾಜ್ಯದ ಜನತೆಯ ಭಾವನೆಯನ್ನು ಬೇರೆಡೆಗೆ ಸೆಳೆಯಲು ಮೊಟ್ಟೆ ಎಸೆತದಂತಹ ನೀಚಕೃತ್ಯ ಮಾಡುತ್ತಾರೆ. ಸಚಿವ ಮಾಧುಸ್ವಾಮಿ ಹೇಳಿಕೆ ಇದಕ್ಕೆ ಕನ್ನಡಿ, ನನ್ನ ವಿರುದ್ಧದ ಪ್ರತಿಭಟನೆ ಸರ್ಕಾರದ ಪ್ರಾಯೋಜಿತ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಚಿಕ್ಕಮಗಳೂರು/ಮಡಿಕೇರಿ: ರಾಜ್ಯದಲ್ಲಿ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಹತಾಶೆಯಾಗಿ ಹೋಗಿದೆ, ರಾಜ್ಯದಲ್ಲಿ ಅಧಿಕಾರ ಕಳೆದುಕೊಳ್ಳುವ ಭೀತಿ ಬಂದುಬಿಟ್ಟಿದೆ. ಹೀಗಾಗಿ ರಾಜ್ಯದ ಜನತೆಯ ಭಾವನೆಯನ್ನು ಬೇರೆಡೆಗೆ ಸೆಳೆಯಲು ಮೊಟ್ಟೆ ಎಸೆತದಂತಹ ನೀಚಕೃತ್ಯ ಮಾಡುತ್ತಾರೆ. ಸಚಿವ ಮಾಧುಸ್ವಾಮಿ ಹೇಳಿಕೆ ಇದಕ್ಕೆ ಕನ್ನಡಿ, ನನ್ನ ವಿರುದ್ಧದ ಪ್ರತಿಭಟನೆ ಸರ್ಕಾರದ ಪ್ರಾಯೋಜಿತ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಇಂದು ಚಿಕ್ಕಮಗಳೂರಿನಲ್ಲಿ ಮಳೆಹಾನಿಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ನಾನು ವಿರೋಧ ಪಕ್ಷದ ನಾಯಕ, ಶ್ಯಾಡೋ ಚೀಫ್ ಮಿನಿಸ್ಟರ್, ನನಗೆ ಭದ್ರತೆ ಕೊಡುವುದು ಸರ್ಕಾರದ ಕರ್ತವ್ಯ. ಪೊಲೀಸರು ಸರಿಯಾದ ಭದ್ರತೆ ಕೊಡಬೇಕು. ನಿನ್ನೆಯ ಘಟನೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದರು.

ಗೋ ಬ್ಯಾಕ್ ಅಂದರೆ ನಾನು ಎಲ್ಲಿಗೆ ಹೋಗಲಿ, ಸರ್ಕಾರ ಸತ್ತು ಹೋಗಿದೆ, ಮಾಧುಸ್ವಾಮಿ ಹೇಳಿಕೆ ಇದಕ್ಕೆ ಕನ್ನಡಿ,ನ ನ್ನ ವಿರುದ್ಧದ ಪ್ರತಿಭಟನೆ ಸರ್ಕಾರದ ಪ್ರಾಯೋಜಿತ, ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿ ಬಿಜೆಪಿ ಇದೆ. ಮಡಿಕೇರಿ ನಂತ್ರ 4 ಕಡೆ ಪ್ರತಿಭಟನೆಗೆ ಸಿದ್ದತೆ ನಡೆದಿತ್ತು. ಗೋ ಬ್ಯಾಕ್ ಅನ್ನಲು ಇಡೀ ರಾಜ್ಯ ಇವರದ್ದೇ, ನಮಗೂ ಹತ್ತು ಜನರನ್ನು ಸೇರಿಸಿ ಗೋ ಬ್ಯಾಕ್ ಸಿಎಂ ಬೊಮ್ಮಾಯಿ ಎನ್ನಬಹುದಲ್ಲವೇ ಎಂದು ಕೇಳಿದರು.

ಈ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ, ಲೂಟಿ ಹೊಡೆಯಲು ಬಂದಿದ್ದಾರೆ. ಇತಿಹಾಸದಲ್ಲೇ 40% ಸರ್ಕಾರ ಬಂದಿರಲಿಲ್ಲ. ಈ ಸರ್ಕಾರ ಕಮ್ಯುನಲ್ ಸರ್ಕಾರ ಎಂದು ಹೇಳಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊಲೆಯಾದಾಗ ಕೇವಲ ಪ್ರವೀಣ್ ಮನೆಗೆ ಹೋಗಿ ಮುಖ್ಯಮಂತ್ರಿ ಬಂದರು. ಫಾಝಿಲ್, ಮಸೂದ್ ಮನೆಗೆ ಹೋಗಲಿಲ್ಲ. ಪರಿಹಾರವನ್ನು ಕೇವಲ ಪ್ರವೀಣ್ ಕುಟುಂಬಸ್ಥರಿಗೆ ಮಾತ್ರ ಕೊಟ್ಟರು. ಇವರ ಸ್ವಂತ ಜೇಬಿನಿಂದ ಏನು ಕೊಟ್ರಾ ಪರಿಹಾರ ಕೊಟ್ಟದ್ದು ಜನಸಾಮಾನ್ಯರ ತೆರಿಗೆ ಹಣದಿಂದ. ಪ್ರಜಾಪ್ರಭುತ್ವ, ಜನರ ಸರ್ಕಾರ ಸತ್ತು ಹೋಗಿದೆ ಎಂದು ವಾಗ್ದಾಳಿ ನಡೆಸಿದರು.

26ಕ್ಕೆ ಬರುತ್ತೇನೆ, ಎಸ್ಪಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ: ಇನ್ನು ನಿನ್ನೆ ಮಡಿಕೇರಿಯಲ್ಲಿ ಮೊಟ್ಟೆ ಎಸೆತ ಘಟನೆ ಬಳಿಕ ಗುಡುಗಿದ್ದ ಸಿದ್ದರಾಮಯ್ಯ, ಆಗಸ್ಟ್ 26ರಂದು ಎಸ್​ಪಿ ಕಚೇರಿಗೆ ಮುತ್ತಿಗೆ ಹಾಕಬೇಕು, ಅಂದು ನಾನು ಜಿಲ್ಲೆಗೆ ಬರುತ್ತೇನೆ, ನನ್ನ ನೇತೃತ್ವದಲ್ಲೇ ಬೃಹತ್ ಪ್ರತಿಭಟನೆ ನಡೆಯಲಿದೆ. ಈ ಘಟನೆ ರಾಜ್ಯ ಸರ್ಕಾರವೇ ಮಾಡಿಸಿದೆ ಎಂದು ನೇರ ಆರೋಪ ಮಾಡಿದ್ದರು. 

ಮುಂದಿನ ಆರೇಳು ತಿಂಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ. ಈ ಬಾರಿ ಕೊಡಗಿನಲ್ಲಿ ಕಾಂಗ್ರೆಸ್ 2 ಸ್ಥಾನ ಗೆಲ್ಲುವ ಸಾಧ್ಯತೆ ಇದೆ. ಹೀಗಾಗಿ ಹತಾಶೆಯಿಂದ ನನ್ನ ವಿರುದ್ಧ ಪ್ರತಿಭಟನೆ ಮಾಡಿಸಲಾಗಿದೆ. ಗೋಬ್ಯಾಕ್ ಅಂದರೆ ಎಲ್ಲಿಗೆ ಹೋಗಲಿ? ನಮ್ಮ ಕಾರ್ಯಕರ್ತರೂ ಗೋ ಬ್ಯಾಕ್​ ಎಂದು ಹೇಳುತ್ತಾರೆ, ಆದರೆ ಭದ್ರತೆ ನೀಡುವುದು ಪೊಲೀಸ್​ ಅಧಿಕಾರಿಗಳ ಜವಾಬ್ದಾರಿ. ಮೂರ್ನಾಲ್ಕು ಕಡೆಗಳಲ್ಲಿ ಪ್ರತಿಭಟನೆ ಮಾಡುವುದು ಗೊತ್ತಿದ್ದರೂ ಪೊಲೀಸರು ಸುಮ್ಮನಿದ್ದಾರೆ. ಮುಖ್ಯಮಂತ್ರಿಯವರು ಬರುತ್ತಿದ್ದರೆ ಈ ರೀತಿ ಪೊಲೀಸರು ಮಾಡುತ್ತಿದ್ದರಾ? ಎಂದು ಎಸ್​ಪಿ ಅವರನ್ನು ಪ್ರಶ್ನಿಸಿದರು.

ಶಾಸಕ ಕೆ ಜಿ ಬೋಪಯ್ಯ ಹೇಳಿಕೆ: ವಿಪಕ್ಷ ನಾಯಕರಾಗಿ ಮಳೆಹಾನಿ ಪ್ರದೇಶಕ್ಕೆ ಭೇಟಿ ಕೊಟ್ಟದ್ದು ತಕರಾರಿಲ್ಲ, ಬರಲಿ ಸಮಸ್ಯೆಯಿಲ್ಲ. ಆದರೆ ವೀರ ಸಾವರ್ಕರ್ ಪ್ರತಿಕ್ರಿಯೆ ನೀಡಿದ್ದು ತಪ್ಪು, ಹಿಂದೂ, ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಅದುವೇ ಕಾರಣವಾಗಿದೆ ಎಂದು ಮಡಿಕೇರಿಯಲ್ಲಿ ಶಾಸಕ ಕೆ ಜಿ ಬೋಪಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕೊಡಗಿನ ಜನರಲ್ಲಿ ಟಿಪ್ಪು ಜಯಂತಿ ಆಚರಣೆ ಸಂದರ್ಭದಲ್ಲಿ ಎರಡು ಅಮಾಯಕ ಜೀವಗಳು ಹೋಗಿದೆ. ಆ ಆಕ್ರೋಶ ಇಲ್ಲಿನ ಜನರಲ್ಲಿದೆ. ಟಿಪ್ಪು ಆಡಳಿತದಲ್ಲಿ ಮತಾಂಧತೆ, ಹಿಂದೂ ಜನರ ಮಾರಣಹೋಮ ಬಗ್ಗೆ ಚರಿತ್ರೆಯಲ್ಲಿದ್ದು, ಅದುವೇ ಕೊಡಗಿನ ಹಿಂದೂ ಜನರ, ಹಿಂದೂಪರ ಸಂಘಟನೆಗಳಲ್ಲಿ ಅಸಾಮಾಧನ, ಆಕ್ರೋಶ ಸಹಜವಾಗಿ ಬಂದಿದೆ. ಅದಕ್ಕೆ ಮೂಲ ಕಾರಣ ಸಿದ್ದರಾಮಯ್ಯನಂತವರ ಬೇಜವಾಬ್ದಾರಿ ಹೇಳಿಕೆ.

ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗೆ ಅವಕಾಶವಿದೆ, ನಿನ್ನೆ ತಿತಿಮತಿಯಲ್ಲಿ ಅದನ್ನು ಕಾರ್ಯಕರ್ತರು ತೋರಿಸಿದ್ದಾರೆ ಎಂದು ಸಮರ್ಥಿಸಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com