ಬೆಂಗಳೂರು: ಕಿಕ್ಕಿರಿದು ತುಂಬಿದ್ದ ರೈಲಿನಲ್ಲಿ ಮಹಿಳೆಯ ಶವ ಗೋಣಿಚೀಲದಲ್ಲಿ ಪತ್ತೆ
ಬಂಗಾರಪೇಟೆಯಿಂದ ಬೆಂಗಳೂರಿಗೆ ಬರುತ್ತಿದ್ದ ಪ್ರಯಾಣಿಕ ರೈಲಿನ ಸೀಟಿನ ಕೆಳಗೆ ಕಳೆದ ಮಂಗಳವಾರ ರಾತ್ರಿ ಕಂಡ ದೃಶ್ಯ ಪ್ರಯಾಣಿಕರನ್ನು ಬೆಚ್ಚಿಬೀಳಿಸಿತು. ಅಲ್ಲಿಂದ ಹೊರಬರುತ್ತಿದ್ದ ದುರ್ವಾಸನೆಯಿಂದ ಪ್ರಯಾಣಿಕರೊಬ್ಬರು ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿದರು.
Published: 09th December 2022 12:13 PM | Last Updated: 09th December 2022 01:46 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಬಂಗಾರಪೇಟೆಯಿಂದ ಬೆಂಗಳೂರಿಗೆ ಬರುತ್ತಿದ್ದ ಪ್ರಯಾಣಿಕ ರೈಲಿನ ಸೀಟಿನ ಕೆಳಗೆ ಕಳೆದ ಮಂಗಳವಾರ ರಾತ್ರಿ ಕಂಡ ದೃಶ್ಯ ಪ್ರಯಾಣಿಕರನ್ನು ಬೆಚ್ಚಿಬೀಳಿಸಿತು. ಅಲ್ಲಿಂದ ಹೊರಬರುತ್ತಿದ್ದ ದುರ್ವಾಸನೆಯಿಂದ ಪ್ರಯಾಣಿಕರೊಬ್ಬರು ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿದರು. ಬಂಗಾರಪೇಟೆ-ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್, ಬೈಯಪ್ಪನಹಳ್ಳಿ ಮೆಮು ಸ್ಪೆಷಲ್ (ಸಂಖ್ಯೆ 06527) ನ ಕಾಯ್ದಿರಿಸದ ರೈಲಿನ ಬೋಗಿಯಲ್ಲಿ ಹಳದಿ ಬಣ್ಣದ ಗೋಣಿಚೀಲ ಇತ್ತು. ಅದನ್ನು ಇತರ ಲಗೇಜ್‌ಗಳೊಂದಿಗೆ ಎಸೆಯಲಾಗಿತ್ತು. ರೈಲು ಬಂಗಾರಪೇಟೆಯಿಂದ ರಾತ್ರಿ 8.45ಕ್ಕೆ ಹೊರಟು ರಾತ್ರಿ 9.45ಕ್ಕೆ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಗೆ ಆಗಮಿಸಿತ್ತು.
ರೈಲು ನಿಲ್ದಾಣ ತಲುಪಿದ ತಕ್ಷಣ, ರೈಲ್ವೆ ರಕ್ಷಣಾ ಪಡೆ (RPF) ಭಾರವಾದ ಗೋಣಿಚೀಲವನ್ನು ತೆಗೆದುನೋಡಿದಾಗ ಹೌಹಾರಿದರು. ಅದರಲ್ಲಿ ಮೂವತ್ತರ ಆಸುಪಾಸಿನ ಮಹಿಳೆಯ ಶವವಿತ್ತು. ಮಹಿಳೆಯ ಶವವನ್ನು ಸೀರೆ ಮತ್ತು ಕಂಬಳಿಯಲ್ಲಿ ಸುತ್ತಿ ಇಡಲಾಗಿತ್ತು. ಕತ್ತಿನ ಸುತ್ತ ಗುರುತುಗಳಿವೆ. ಕತ್ತು ಹಿಸುಕಿ ಮಹಿಳೆಯನ್ನು ಕೊಂದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ರಾಜ್ಯ ವಿಧಿವಿಜ್ಞಾನ ತಂಡ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯ ಸಂಗ್ರಹಿಸಿದೆ. ಮೃತದೇಹವು ಇನ್ನೂ ಕೊಳೆತ ಸ್ಥಿತಿಯಲ್ಲಿಲ್ಲದ ಕಾರಣ ಕೆಲ ಹೊತ್ತಿನ ಮೊದಲು ಸಾವು ಸಂಭವಿಸಿರಬಹುದು ಎಂದು ತೋರುತ್ತದೆ. ಅದನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
GRP ತನ್ನ ವಾಟ್ಸಾಪ್ ಗ್ರೂಪ್‌ಗಳಲ್ಲಿ ಮೃತದೇಹದ ಫೋಟೋಗಳನ್ನು ಪ್ರಸಾರ ಮಾಡಿದೆ. ಗುರುತಿಸಲು ಅನುಕೂಲವಾಗುವಂತೆ ಬಂಗಾರಪೇಟೆ ಮತ್ತು ಬೆಂಗಳೂರು ನಡುವಿನ ಹಳ್ಳಿಗಳಲ್ಲಿ ಫೋಟೋದೊಂದಿಗೆ ಕರಪತ್ರಗಳನ್ನು ವಿತರಿಸಿದೆ. ಜಿಆರ್‌ಪಿಯು ಐಪಿಸಿಯ ಸೆಕ್ಷನ್ 302 (ಕೊಲೆಗೆ ಶಿಕ್ಷೆ) ಮತ್ತು ಸೆಕ್ಷನ್ 201 (ಅಪರಾಧದ ಸಾಕ್ಷ್ಯಾಧಾರಗಳು ಕಣ್ಮರೆಯಾಗಲು ಕಾರಣ) ಅಡಿಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಿದೆ. ಬೆಂಗಳೂರು ವಿಭಾಗೀಯ ರೈಲ್ವೆ ಮ್ಯಾನೇಜರ್ ಶ್ಯಾಮ್ ಸಿಂಗ್ ಕರೆಗಳಿಗೆ ಸ್ಪಂದಿಸಲಿಲ್ಲ.