ಬೆಳಗಾವಿ ಗಡಿ ವಿವಾದದಲ್ಲಿ ಸ್ಪಷ್ಟ ನಿಲುವನ್ನು ಕೇಂದ್ರ ನಾಯಕರ ಮುಂದೆ ಹೇಳುತ್ತೇನೆ, ಸಂಪುಟ ವಿಸ್ತರಣೆ ವಿಷಯ ಕೂಡ ಚರ್ಚೆ: ಸಿಎಂ ಬೊಮ್ಮಾಯಿ

ಬೆಳಗಾವಿ ಗಡಿ ವಿವಾದಕ್ಕೆ (Belagavi border row) ಸಂಬಂಧಪಟ್ಟ ವಿಷಯಗಳು ಮತ್ತು ಸಚಿವ ಸಂಪುಟ ವಿಸ್ತರಣೆ ಕುರಿತು ಸಿದ್ಧತೆ ಮಾಡಿಕೊಂಡು ಇಂದು ದೆಹಲಿಗೆ ಹೋಗಿ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡುತ್ತಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ
Updated on

ಬೆಂಗಳೂರು: ಬೆಳಗಾವಿ ಗಡಿ ವಿವಾದಕ್ಕೆ (Belagavi border row) ಸಂಬಂಧಪಟ್ಟ ವಿಷಯಗಳು ಮತ್ತು ಸಚಿವ ಸಂಪುಟ ವಿಸ್ತರಣೆ ಕುರಿತು ಸಿದ್ಧತೆ ಮಾಡಿಕೊಂಡು ಇಂದು ದೆಹಲಿಗೆ ಹೋಗಿ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡುತ್ತಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆಗೆ ಬೇಕಾದ ಸಿದ್ಧತೆಯೊಂದಿಗೆ ದೆಹಲಿಗೆ ಹೋಗುತ್ತಿದ್ದೇನೆ. ಅಲ್ಲಿ ಸಾಂದರ್ಭಿಕವಾಗಿ ವಿಷಯ ಪ್ರಸ್ತಾಪವಾದರೆ ಅದರ ಬಗ್ಗೆ ಕೂಡ ಚರ್ಚೆಯಾಗುತ್ತದೆ, ಇವತ್ತು ಸಂಜೆ ಅಮಿತ್ ಶಾ ಅವರು ಸಭೆ ಕರೆದಿದ್ದಾರೆ ಎಂದರು.

ಬೆಳಗಾವಿ ಗಡಿ ವಿವಾದ ಕುರಿತು ಸಭೆ, ಚರ್ಚೆ: ಇಂದು ಸಂಜೆ 7 ಗಂಟೆಗೆ ದೆಹಲಿಯಲ್ಲಿ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು, ಅಧಿಕಾರಿಗಳ ಸಮ್ಮುಖದಲ್ಲಿ ಬೆಳಗಾವಿ ಗಡಿ ವಿವಾದ ಕುರಿತು ಸಭೆ ನಡೆಯುತ್ತದೆ. ಅಲ್ಲಿ ನಮ್ಮ ಸ್ಪಷ್ಟ ನಿಲುವು ಹೇಳುತ್ತೇವೆ. ಕರ್ನಾಟಕ ರಾಜ್ಯ ಪುನರ್ ವಿಂಗಡಣೆ ನಂತರ ನಡೆದುಬಂದ ದಾರಿ, ಈಗಿರುವ ಪರಿಸ್ಥಿತಿ, ಕಾನೂನು, ಸಂವಿಧಾನ ರೀತಿನೀತಿಗಳು, ಕರ್ನಾಟಕ ಸಂವಿಧಾನಬದ್ಧವಾಗಿ ಕಾನೂನುಗಳನ್ನು ಹೇಗೆ ಪಾಲಿಸಿಕೊಂಡು ಬಂದಿದೆ ಎಂದು ಕೇಂದ್ರ ನಾಯಕರಿಗೆ ಸಂಪೂರ್ಣವಾಗಿ ಮನವರಿಕೆ ಮಾಡುತ್ತೇನೆ ಎಂದರು.

ಮಹಾರಾಷ್ಟ್ರಕ್ಕೆ 5-6 ದಶಕಗಳಿಂದ ಬೆಳಗಾವಿ ಗಡಿ ವಿವಾದ ರಾಜಕೀಯ ವಿಷಯವಾಗಿದೆ. ಹೀಗಾಗಿ ಸದಾಕಾಲ ಗಡಿವಿವಾದ ಖ್ಯಾತೆ ತೆಗೆಯುತ್ತಿರುತ್ತಾರೆ. ಆದರೆ ನಮಗೆ ನಮ್ಮ ರಾಜ್ಯದ ಜನ, ಗಡಿ, ನೆಲ-ಜಲ, ರಕ್ಷಣೆ ವಿಚಾರವಾಗಿದೆ ಎಂದರು. 

ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತವರು ಜಿಲ್ಲೆ ಧಾರವಾಡಕ್ಕೆ ಪ್ರವಾಸ ಕೈಗೊಂಡಿದ್ದು, ಜಿಲ್ಲೆಯ ಪ್ರವಾಸ ನಂತರ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ನೇರವಾಗಿ ದೆಹಲಿಗೆ ಪ್ರಯಾಣ ಬೆಳಸಲಿದ್ದಾರೆ. 

ಬೆಳಿಗ್ಗೆ 10-30ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮುಖ್ಯಮಂತ್ರಿಗಳು ವಿಮಾನ ನಿಲ್ದಾಣದಿಂದ ನೇರವಾಗಿ, ನಗರದ ಭೈರಿದೇವರಕೊಪ್ಪದ ರೇಣುಕಾ ನಗರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಏರ್ಪಡಿಸಿರುವ ನಮ್ಮ ಕ್ಲಿನಿಕ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿವಹಿಸಿದ್ದಾರೆ. ನಂತರ ಮಧ್ಯಾಹ್ನ 12-30 ಗಂಟೆಗೆ ಹುಬ್ಬಳ್ಳಿ ಭೈರಿದೇವರಕೊಪ್ಪದ ಸಪ್ತಗಿರಿ ಲೇಔಟ್ ವಿದ್ಯಾನಿಕೇತನ ಪಿಯು ವಿಜ್ಞಾನ ಮಹಾವಿದ್ಯಾಲಯಕ್ಕೆ ಭೇಟಿ ನೀಡುವರು.

ಮಧ್ಯಾಹ್ನ 1-30 ಗಂಟೆಗೆ ಹುಬ್ಬಳ್ಳಿ ವಿಮಾನದ ಮೂಲಕ ದೆಹಲಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಯಾಣ ಮಾಡಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com