ಆನೆಗಳಿಗೆ ಗುಂಡು ಹೊಡೆಯುವೆ ಎಂದಿದ್ದ ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ಗನ್ ಜಪ್ತಿ ಮಾಡಿ: ಮನೇಕಾ ಗಾಂಧಿ ಆಗ್ರಹ

ಆನೆಗಳು ದಾಳಿಗೆ ಯತ್ನಿಸಿದರೆ ಅವುಗಳ ಮೇಲೆ ಗುಂಡು ಹಾರಿಸುತ್ತೇನೆ ಎಂದಿದ್ದ ಸಕಲೇಶಪುರ ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಅವರ ಗನ್ ಜಪ್ತಿ ಮಾಡಬೇಕು ಮತ್ತು ಅವರ ಬಂದೂಕು ಪರವಾನಗಿ ರದ್ದುಪಡಿಸುವಂತೆ ಹಾಗೂ ಅವರ...
ಎಚ್.ಎಂ. ವಿಶ್ವನಾಥ್
ಎಚ್.ಎಂ. ವಿಶ್ವನಾಥ್

ಹಾಸನ: ಆನೆಗಳು ದಾಳಿಗೆ ಯತ್ನಿಸಿದರೆ ಅವುಗಳ ಮೇಲೆ ಗುಂಡು ಹಾರಿಸುತ್ತೇನೆ ಎಂದಿದ್ದ ಸಕಲೇಶಪುರ ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಅವರ ಗನ್ ಜಪ್ತಿ ಮಾಡಬೇಕು ಮತ್ತು ಅವರ ಬಂದೂಕು ಪರವಾನಗಿ ರದ್ದುಪಡಿಸುವಂತೆ ಹಾಗೂ ಅವರ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಎಫ್‌ಐಆರ್ ದಾಖಲಿಸುವಂತೆ ಪ್ರಾಣಿ ಹಕ್ಕುಗಳ ಸಂರಕ್ಷಣಾ ಕಾರ್ಯಕರ್ತೆ, ಮಾಜಿ ಕೇಂದ್ರ ಸಚಿವೆ ಮನೇಕಾ ಗಾಂಧಿ ಅವರು ಹಾಸನ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ. 

ನವೆಂಬರ್ 7ರಂದು ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿ ಬಳಿ ಆನೆ ತುಳಿದು ಮೃತಪಟ್ಟ ಮಧು ಎಂಬಾತನ ಮೃತದೇಹದೊಂದಿಗೆ ಪ್ರತಿಭಟನೆ ನಡೆಸಿದ ಜನರನ್ನುದ್ದೇಶಿಸಿ ಮಾತನಾಡಿದ ಎಚ್‌ಎಂ ವಿಶ್ವನಾಥ್ ಅವರು, ನನ್ನ ಬಳಿ ಡಬಲ್ ಬ್ಯಾರಲ್ ಗನ್ ಇದೆ, ಆನೆಗಳು ನನ್ನ ತೋಟಕ್ಕೆ ನುಗ್ಗಿದರೆ ಗುಂಡು ಹಾರಿಸುತ್ತೇನೆ ಎಂದು ಹೇಳಿದರು. ಅಲ್ಲದೆ ಅರಣ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಎಚ್.ಎಂ.ವಿಶ್ವನಾಥ್ ಅವರು, ಹಿರಿಯ ಅರಣ್ಯ, ಕಂದಾಯ, ಪೊಲೀಸರು ಹಾಗೂ ಹೆಚ್ಚಿನ ಸಂಖ್ಯೆಯ ಗ್ರಾಮಸ್ಥರ ಸಮ್ಮುಖದಲ್ಲಿ ಜನವಸತಿ ಪ್ರದೇಶಗಳಿಗೆ ನುಗ್ಗುವ ಆನೆಗಳನ್ನು ಕೊಲ್ಲಲು ತಂಡ ರಚಿಸುವಂತೆ ಒತ್ತಾಯಿಸಿದರು. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. 

ಈ ವೀಡಿಯೊವನ್ನು ಗಂಭೀರವಾಗಿ ಪರಿಗಣಿಸಿದ ಮನೇಕಾ ಗಾಂಧಿ ಅವರು, ಎಚ್‌ಎಂ ವಿಶ್ವನಾಥ್‌ಗೆ ನೋಟಿಸ್ ಜಾರಿ ಮಾಡುವಂತೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಪಿಸಿಸಿಎಫ್) ಕರ್ನಾಟಕ ಮತ್ತು ಹಾಸನ ಜಿಲ್ಲಾಧಿಕಾರಿಗಳಿಗೆ ಇಮೇಲ್ ಮೂಲಕ ದೂರು ನೀಡಿದ್ದಾರೆ. 

ಸಕಲೇಶಪುರ ಆನೆಗಳ ಚಲನವಲನ ವಲಯವಾಗಿದ್ದು, ಜಿಲ್ಲೆಯಾದ್ಯಂತ ಆನೆಗಳು ಸಂಚರಿಸುತ್ತಿವೆ ಎಂದು ಮನೇಕಾ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಸಾರ್ವಜನಿಕರು, ಪೊಲೀಸರು ಮತ್ತು ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಎಚ್‌ಎಂ ವಿಶ್ವನಾಥ್ ಆನೆಗಳನ್ನು ಕೊಲ್ಲುವಂತೆ ಹೇಳಿದ್ದಾರೆ. ಆನೆ ಹಿಂಡು ಮತ್ತು ವನ್ಯಜೀವಿಗಳಿಗೆ ಈ ರೀತಿಯ ಬೆದರಿಕೆ ಮತ್ತು ಪ್ರಚೋದನೆಯು ಖಂಡಿತವಾಗಿಯೂ ಪ್ರಾಣಿಗಳ ಹತ್ಯೆಗೆ ಕಾರಣವಾಗುತ್ತದೆ. ಮುಖ್ಯ ವನ್ಯಜೀವಿ ವಾರ್ಡನ್ ರಾಜೀವ್ ರಂಜನ್ ಅವರು ಈ ಬಗ್ಗೆ ಗಮನಹರಿಸಿ ಅಗತ್ಯ ಕ್ರಮ ಕೈಗೊಂಡ ನಂತರ ವರದಿ ನೀಡುವಂತೆ ಮನೇಕಾ ಕೇಳಿಕೊಂಡಿದ್ದಾರೆ. 

ಇನ್ನು ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಅವರ ಅನುಪಸ್ಥಿತಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ಅವರು ಮಾಜಿ ಶಾಸಕರಿಗೆ ನೋಟಿಸ್ ಜಾರಿ ಮಾಡಿ ಕುಟುಂಬ ಸದಸ್ಯರ ಬಳಿ ಇರುವ ಡಬಲ್ ಬ್ಯಾರಲ್ ಗನ್ ಮತ್ತು ಶಸ್ತ್ರಾಸ್ತ್ರಗಳನ್ನು ಏಳು ದಿನಗಳೊಳಗೆ ಆಯಾ ಪೊಲೀಸ್ ಠಾಣೆಗೆ ಒಪ್ಪಿಸುವಂತೆ ಸೂಚಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಶಾಸಕ, ಆನೆಗಳ ಹಾವಳಿಯಿಂದ ದಶಕಗಳಿಂದ ಕಂಗೆಟ್ಟಿರುವ ಜನರ ಹಿತದೃಷ್ಟಿಯಿಂದ ನಿಷ್ಠುರವಾಗಿ ಮಾತನಾಡಿದ್ದೇನೆ ಎಂದಿದ್ದಾರೆ. ಅಲ್ಲದೆ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com