ಪರಿಶಿಷ್ಟ ಪಂಗಡಕ್ಕೆ ಕಾಡುಗೊಲ್ಲರ ಸೇರ್ಪಡೆ; ಜನವರಿಯಲ್ಲಿ ಮುಖ್ಯಮಂತ್ರಿಯವರಿಂದ ಕೇಂದ್ರ ಸಚಿವರ ಭೇಟಿ

ಕುರಿ ಕಾಯುವ ವೃತ್ತಿಯಲ್ಲಿರುವ ಕಾಡುಗೊಲ್ಲ ಸಮಾಜವನ್ನು ಪರಿಶಿಷ್ಟ ಪಂಗಡದ ಜಾತಿಗಳ ಪಟ್ಟಿಗೆ ಸೇರಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಜೆ.ಸಿ.ಮಾಧುಸ್ವಾಮಿ ವಿಧಾನಸಭೆಯಲ್ಲಿ ಹೇಳಿದರು.
ಜೆಸಿ ಮಾಧುಸ್ವಾಮಿ ಸಾಂದರ್ಭಿಕ ಚಿತ್ರ
ಜೆಸಿ ಮಾಧುಸ್ವಾಮಿ ಸಾಂದರ್ಭಿಕ ಚಿತ್ರ

ಬೆಳಗಾವಿ: ಕುರಿ ಕಾಯುವ ವೃತ್ತಿಯಲ್ಲಿರುವ ಕಾಡುಗೊಲ್ಲ ಸಮಾಜವನ್ನು ಪರಿಶಿಷ್ಟ ಪಂಗಡದ ಜಾತಿಗಳ ಪಟ್ಟಿಗೆ ಸೇರಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಈ ಕುರಿತು  ಕೇಂದ್ರ ಸಾಮಾಜಿಕ ನ್ಯಾಯ ಸಬಲೀಕರಣ ಸಚಿವರನ್ನು ಭೇಟಿಯಾಗಿ ಚರ್ಚಿಸಲು ಜನೆವರಿ ಮೊದಲ ಅಥವಾ ಎರಡನೇ ವಾರದಲ್ಲಿ ಮುಖ್ಯಮಂತ್ರಿಯವರು ನವದೆಹಲಿಗೆ ತೆರಳಲಿದ್ದಾರೆ ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಜೆ.ಸಿ.ಮಾಧುಸ್ವಾಮಿ ವಿಧಾನಸಭೆಯಲ್ಲಿ ಹೇಳಿದರು.

ಶೂನ್ಯವೇಳೆಯಲ್ಲಿ ಅವರು, ಈ ಮೊದಲು ಹಿಂದುಳಿದ ಬುಡಕಟ್ಟು(ಬಿಟಿ)ಗಳ ಪಟ್ಟಿಯಲ್ಲಿದ್ದ ಕಾಡುಗೊಲ್ಲ ಹಾಗೂ ವಾಲ್ಮೀಕಿ ನಾಯಕ ಜಾತಿಗಳ ಪೈಕಿ ವಾಲ್ಮೀಕಿ ನಾಯಕರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದಾಗ ಕಾಡುಗೊಲ್ಲರನ್ನು ಪ್ರವರ್ಗ 1 ರಲ್ಲಿ ಮುಂದುವರೆಸಲಾಯಿತು.

ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಅಗತ್ಯವಿದ್ದ ಕುಲಶಾಸ್ತ್ರ ಅಧ್ಯಯನ ಕೈಗೊಳ್ಳಲು ಮಾನವಶಾಸ್ತ್ರಜ್ಞರಾದ ಅನ್ನಪೂರ್ಣಮ್ಮ ನೇತೃತ್ವದ ಸಮಿತಿ ರಚಿಸಲಾಯಿತು.ಅವರು ನೀಡಿದ ವರದಿ ಆಧರಿಸಿ 2014 ರಲ್ಲಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಯಿತು.  ಕುಲಶಾಸ್ತ್ರ ಅಧ್ಯಯನದ ಕೆಲವು ಅಂಶಗಳಲ್ಲಿ ಕಾಡುಗೊಲ್ಲರ ಕೆಲವು ಆಚರಣೆಗಳು  ಎಸ್.ಟಿ.ಗೆ ಸೇರ್ಪಡೆ ಮಾಡಲು ಪೂರಕವಾಗಿಲ್ಲ ಎಂದು ಕೇಂದ್ರ ಕೆಲವು ಸ್ಪಷ್ಟನೆಗಳನ್ನು ಕೇಳಿತ್ತು. ಬುಡಕಟ್ಟು ಸಂಶೋಧನಾ ಸಂಸ್ಥೆಯ ಮೂಲಕ ಸ್ಪಷ್ಟನೆಗಳನ್ನು ಪಡೆದು ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದರು. 

ಜನವರಿ ಮೊದಲ ಅಥವಾ ಎರಡನೇ ವಾರದಲ್ಲಿ ಮುಖ್ಯಮಂತ್ರಿಯವರು ನವದೆಹಲಿಗೆ ತೆರಳಿ ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವರನ್ನು ಭೇಟಿ ಮಾಡಲಿದ್ದಾರೆ.ರಾಜ್ಯ ಸರ್ಕಾರ ಈ ವಿಷಯದಲ್ಲಿ ಬದ್ಧತೆ ಹೊಂದಿದೆ ಎಂದು ಮಾಧುಸ್ವಾಮಿ ತಿಳಿಸಿದರು. 

ಹಿರಿಯೂರು ಶಾಸಕಿ ಪೂರ್ಣಿಮಾ ಮಾತನಾಡಿ,ಕಳೆದ ತಿಂಗಳು ನವೃದೆಹಲಿಗೆ ತೆರಳಿದ್ದ ಸಮಾಜದ ನಿಯೋಗಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಅವರ ಸಹಕಾರದಿಂದ ಕೇಂದ್ರ ಸರ್ಕಾರದ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ ಎಂದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ,ಈ ವಿಷಯದಲ್ಲಿ ರಾಜ್ಯ ಸರ್ಕಾರ ಶಿಫಾರಸ್ಸು ಮಾಡಿದರೆ ಸಾಲದು ಕೇಂದ್ರದ ಮೇಲೆ ಒತ್ತಡ ತರಬೇಕು ಎಂದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com