ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತಾದಿಗಳಿಗೆ ಡ್ರೆಸ್ ಕೋಡ್ : ಸಂಸದ ಪ್ರತಾಪ್ ಸಿಂಹ ಬೆಂಬಲ
ದೇವಸ್ಥಾನಗಳಲ್ಲಿ ಡ್ರೆಸ್‍ಕೋಡ್ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಡ್ರೆಸ್‍ಕೋಡ್ ಕಡ್ಡಾಯ ಮಾಡಬೇಕೆಂಬ ಕೂಗು ಜೋರಾಗಿದೆ.
Published: 28th December 2022 09:18 AM | Last Updated: 28th December 2022 09:18 AM | A+A A-

ಪ್ರತಾಪ್ ಸಿಂಹ
ಮೈಸೂರು: ದೇವಸ್ಥಾನಗಳಲ್ಲಿ ಡ್ರೆಸ್‍ಕೋಡ್ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಡ್ರೆಸ್‍ಕೋಡ್ ಕಡ್ಡಾಯ ಮಾಡಬೇಕೆಂಬ ಕೂಗು ಜೋರಾಗಿದೆ. ಈ ಸಂಬಂಧ ಸಂಸದ ಪ್ರತಾಪ್ ಸಿಂಹ ಕೂಡ ದನಿಗೂಡಿಸಿದ್ದಾರೆ.
ಮೈಸೂರಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತಾದಿಗಳಿಗೆ ಡ್ರೆಸ್ ಕೋಡ್ ನಿಗದಿ ಮಾಡುವ ಬಗ್ಗೆ ಸಾರ್ವಜನಿಕರು ನನ್ನ ಗಮನಕ್ಕೂ ತಂದಿದ್ದರು. ಕೆಲವು ವೇಳೆ ಬೆಟ್ಟಕ್ಕೆ ಬರುವವರು ಬೇರೆ ಬೇರೆ ವಸ್ತ್ರಗಳನ್ನು ಧರಿಸಿ ಬರುವುದನ್ನು ನೋಡಿದ್ದೇವೆ.
ಕೇರಳದಲ್ಲಿ ಯಾವುದೇ ದೇವಸ್ಥಾನಕ್ಕೆ ಹೋದರೂ ಪುರುಷ ಹಾಗೂ ಮಹಿಳಾ ಭಕ್ತರಿಗೆ ಡ್ರೆಸ್ ಕೊಡ್ ಕಡ್ಡಾಯಗೊಳಿಸಲಾಗಿದೆ. ದೇವಸ್ಥಾನಕ್ಕೆ ಹೋಗಬೇಕಾದರೆ ಶ್ರದ್ದಾ ಭಕ್ತಿಯಿಂದ ಹೋಗಬೇಕಾಗುತ್ತದೆ. ಈ ರೀತಿಯ ಅಭಿಯಾನವನ್ನು ಚಾಮುಂಡಿ ಬೆಟ್ಟದಲ್ಲೂ ಮಾಡಿ ವಸ್ತ್ರ ಸಂಹಿತೆ ಜಾರಿಗೆ ತರಬೇಕೆಂದು ಹೊರಟಿರುವುದು ಒಳ್ಳೆಯ ಬೆಳವಣಿಗೆ, ಇದಕ್ಕೆ ನನ್ನ ಬೆಂಬಲವೂ ಇದೆ ಎಂದರು. ಇಂತಹ ಕಟ್ಟುಪಾಡುಗಳನ್ನು ಜಾರಿಗೆ ತಂದು ಅನುಷ್ಠಾನ ಮಾಡುವುದಕ್ಕಿಂತ ಬೆಟ್ಟಕ್ಕೆ ಬರುವ ಭಕ್ತರು ಸೂಕ್ತ ವಸ್ತ್ರ ಧರಿಸಿ ಬರುವಂತೆ ನಾನು ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ದೇವಸ್ಥಾನಕ್ಕೆ ಬರುವ ಕೆಲವು ಮಹಿಳೆಯರು, ಯುವತಿಯರು ಅರೆಬರೆ ಬಟ್ಟೆ ಹಾಕಿಕೊಂಡು ಬರುತ್ತಾರೆ. ಪುರುಷರು ಅರ್ಧ ಚಡ್ಡಿ ಧರಿಸಿ ಬರುತ್ತಾರೆ. ಇದು ದೇವಸ್ಥಾನದ ಗೌರವ, ಪಾವಿತ್ರ್ಯತೆ ವಾತಾವರಣ ಹಾಳು ಮಾಡುತ್ತದೆ. ಹೀಗಾಗಿ ಮಹಿಳೆಯರಿಗೆ ದೇವಸ್ಥಾನ ಪ್ರವೇಶಕ್ಕೆ ಸೀರೆ ಅಥವಾ ಚೂಡಿದಾರ, ಪುರುಷರಿಗೆ ದೇವಸ್ಥಾನ ಪ್ರವೇಶಕ್ಕೆ ಪಂಚೆ ಅಥವಾ ಪ್ಯಾಂಟ್ ಕಡ್ಡಾಯ ಮಾಡಿ ವಸ್ತ್ರ ಸಂಹಿತೆ ಜಾರಿಗೆ ತರಬೇಕೆಂದು ಹಲವು ಮಹಿಳಾ ಸಂಘಟನೆಗಳು ಒತ್ತಾಯಿಸಿವೆ.