ಹೈಕೋರ್ಟ್ ಎರಡು ಬಾರಿ ಆದೇಶಿಸಿದರೂ ವಿದ್ಯಾರ್ಥಿಗಳ ಪರಿಷ್ಕೃತ ಫಲಿತಾಂಶ ಪ್ರಕಟಿಸದ ಆರೋಗ್ಯ ವಿವಿ

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ(RGUHS)ದ ವಿದ್ಯಾರ್ಥಿಗಳು ತಮ್ಮ ಹಿಂದಿನ ಪರೀಕ್ಷೆಗಳ ಫಲಿತಾಂಶಕ್ಕಾಗಿ ಇನ್ನೂ ಕಾಯುತ್ತಿದ್ದಾರೆ. ಮುಂದಿನ ಪರೀಕ್ಷೆಗೆ ಒಂದು ತಿಂಗಳಿಗಿಂತ ಕಡಿಮೆ ಸಮಯವಿದೆ...
ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್

ಬೆಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ(RGUHS)ದ ವಿದ್ಯಾರ್ಥಿಗಳು ತಮ್ಮ ಹಿಂದಿನ ಪರೀಕ್ಷೆಗಳ ಫಲಿತಾಂಶಕ್ಕಾಗಿ ಇನ್ನೂ ಕಾಯುತ್ತಿದ್ದಾರೆ. ಮುಂದಿನ ಪರೀಕ್ಷೆಗೆ ಒಂದು ತಿಂಗಳಿಗಿಂತ ಕಡಿಮೆ ಸಮಯವಿದೆ. ಆದರೂ ವಿವಿ ಹಿಂದಿನ ಪರೀಕ್ಷೆಯ ಫಲಿತಾಂಶ ಪ್ರಕಟಿಸಿಲ್ಲ. ವಿದ್ಯಾರ್ಥಿಗಳ ಪರವಾಗಿ ಹೈಕೋರ್ಟ್ ಎರಡು ಬಾರಿ ಆದೇಶಿಸಿದರೂ ವಿಶ್ವವಿದ್ಯಾಲಯ ಫಲಿತಾಂಶ ಬಿಡುಗಡೆ ಮಾಡಿಲ್ಲ.

ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌, ನವೆಂಬರ್ 9 ರಂದು ಮರುಮೌಲ್ಯಮಾಪನ ಮಾಡಿ ಫಲಿತಾಂಶ ಪ್ರಕಟಿಸುವಂತೆ ಆದೇಶಿಸಿತ್ತು.

ಪರೀಕ್ಷೆಯ ಮರುಮೌಲ್ಯಮಾಪನ ವಿಧಾನದ ಬಗ್ಗೆ ವಿದ್ಯಾರ್ಥಿಗಳು ಪ್ರಕರಣ ದಾಖಲಿಸಿದ್ದಾರೆ. ಹಿಂದಿನ ಮೌಲ್ಯಮಾಪನ ವಿಧಾನಗಳು ಶ್ರೇಣೀಕರಣಕ್ಕಾಗಿ ನಾಲ್ಕು ಮೌಲ್ಯಮಾಪಕರನ್ನು ಹೊಂದಿತ್ತು. ಆದರೆ ಹೊಸ ಮರುಮೌಲ್ಯಮಾಪನದ ಅಡಿಯಲ್ಲಿ ಕೇವಲ ಇಬ್ಬರು ಮೌಲ್ಯಮಾಪಕರು ಗ್ರೇಡ್‌ಗಳನ್ನು ನಿರ್ಧರಿಸುತ್ತಾರೆ.

ಮರುಮೌಲ್ಯಮಾಪನ ವಿಧಾನವನ್ನು ಪ್ರಶ್ನಿಸಿ ವಿಶ್ವವಿದ್ಯಾಲಯ ನ್ಯಾಯಾಲಯದಲ್ಲಿ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಿತು. ಡಿಸೆಂಬರ್ 14 ರಂದು ಅರ್ಜಿಯನ್ನು ತಿರಸ್ಕರಿಸಲಾಗಿದೆ. ಆದರೂ ವಿವಿ ಫಲಿತಾಂಶ ಪ್ರಕಟಿಸಿಲ್ಲ.

ಮೂರನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯೊಬ್ಬರು ತಾವು ಮತ್ತು ಇತರ ಅನೇಕರು ಫಲಿತಾಂಶಗಳಿಗಾಗಿ ಬಹಳ ಸಮಯದಿಂದ ಕಾಯುತ್ತಿರುವುದಾಗಿ ಹೇಳಿದ್ದಾರೆ. ಒಂದು ವೇಳೆ ಅನುತ್ತೀರ್ಣರಾದರೆ ಯಾವ ವಿಷಯಕ್ಕೆ ತಯಾರಿ ನಡೆಸಬೇಕು ಎಂಬುದು ಗೊತ್ತಾಗದೆ ವಿದ್ಯಾರ್ಥಿಗಳು ಗೊಂದಲದಲ್ಲಿದ್ದಾರೆ.

ಮುಂದಿನ ಪರೀಕ್ಷೆಗಳು ಜನವರಿ 23 ರಂದು ಪ್ರಾರಂಭವಾಗಲಿದ್ದು, ವಿದ್ಯಾರ್ಥಿಗಳಿಗೆ ತಯಾರಿ ಮಾಡಿಕೊಳ್ಳಲು ಕೇವಲ 27 ದಿನಗಳು ಮಾತ್ರ ಇವೆ. ಪರೀಕ್ಷಾ ಶುಲ್ಕ ಮತ್ತು ಪುನರಾವರ್ತಿತ ಶುಲ್ಕಗಳ ಅಂತಿಮ ದಿನಾಂಕದ ಬಗ್ಗೆ ವಿದ್ಯಾರ್ಥಿಗಳು ಚಿಂತಿತರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com