ಪಿಎಸ್ಐ ನೇಮಕಾತಿ ಅಕ್ರಮ: ಬಂಧಿತ ಎಡಿಜಿಪಿ ಅಮೃತ್ ಪೌಲ್ 10 ದಿನ ಸಿಐಡಿ ವಶಕ್ಕೆ

ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಎಡಿಜಿಪಿ ಅಮೃತ್ ಪೌಲ್ ಅವರನ್ನು ಹೆಚ್ಚಿನ ವಿಚಾರಣೆಗಾಗಿ 10 ದಿನ ಸಿಐಡಿ ವಶಕ್ಕೆ ನೀಡಿ ನ್ಯಾಯಾಲಯ ಸೋಮವಾರ ಆದೇಶ ಹೊರಡಿಸಿದೆ.
ಅಮೃತ್ ಪೌಲ್
ಅಮೃತ್ ಪೌಲ್

ಬೆಂಗಳೂರು: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಎಡಿಜಿಪಿ ಅಮೃತ್ ಪೌಲ್ ಅವರನ್ನು ಹೆಚ್ಚಿನ ವಿಚಾರಣೆಗಾಗಿ 10 ದಿನ ಸಿಐಡಿ ವಶಕ್ಕೆ ನೀಡಿ ನ್ಯಾಯಾಲಯ ಸೋಮವಾರ ಆದೇಶ ಹೊರಡಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸತತ ಮೂರು ಬಾರಿ ವಿಚಾರಣೆ ಎದುರಿಸಿದ್ದ ಅಮೃತ್ ಪೌಲ್ ರನ್ನು ಇಂದು ಸಿಐಡಿ ಅಧಿಕೃತವಾಗಿ ಬಂಧಿಸಿದೆ. ಅಮೃತ್ ಪೌಲ್ 25 ಅಭ್ಯರ್ಥಿಗಳ ಜೊತೆ 30 ಲಕ್ಷ ರೂಪಾಯಿ ಡೀಲ್ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮತ್ತಷ್ಟು ವಿಚಾರಣೆ ನಡೆಸಲು ಸಿಐಡಿ ಅವರನ್ನು ಬಂಧಿಸಿದೆ.

ಅಮೃತ್ ಪೌಲ್ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ನಂತರ ಬೆಂಗಳೂರಿನ 1ನೇ ಎಸಿಎಂಎಂ ಕೋರ್ಟ್ ಗೆ ಹಾಜರುಪಡಿಸಲಾಯಿತು. ಆರೋಪಿ ಅಧಿಕಾರಿಯನ್ನು ವಿಚಾರಣೆ ನಡೆಸಿದ ಕೋರ್ಟ್, ಹೆಚ್ಚಿನ ವಿಚಾರಣೆಗಾಗಿ ಜುಲೈ 13ರ ವರೆಗೆ ಸಿಐಡಿ ವಶಕ್ಕೆ ನೀಡಿ ಆದೇಶಿಸಿದೆ.

545 ಪಿಎಸ್ಐ ನೇಮಕಾತಿ ಅಕ್ರಮ ಸಂಬಂಧ ಅಮೃತ್ ಪೌಲ್ ಅವರಿಗೆ ಹಲವು ದೂರುಗಳು ಬಂದಿದ್ದು, ಇದನ್ನು ಅವರು ನಿರ್ಲಕ್ಷಿಸಿದ್ದರು ಎಂಬ ಆರೋಪ ಸಹ ಅವರ ವಿರುದ್ಧ ಕೇಳಿಬಂದಿತ್ತು. ಅಕ್ರಮ ಬಯಲಿಗೆ ಬರುತ್ತಿದ್ದಂತೆ ಅಮೃತ್ ಪೌಲ್ ಅವರ ವರ್ಗಾವಣೆಗೆ ಒತ್ತಡ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ನೇಮಕಾತಿ ವಿಭಾಗದ ಎಡಿಜಿಪಿ ಹುದ್ದೆಯಿಂದ ವರ್ಗಾಯಿಸಲಾಗಿತ್ತು.

ಪಿಎಸ್‌ಐ ನೇಮಕಾತಿ ಹಗರಣದಲ್ಲಿ ನಡೆಯುತ್ತಿರುವ ತನಿಖೆಗೆ ಸಂಬಂಧಿಸಿದಂತೆ ಇಂದು ಕಾರ್ಲ್‌ಟನ್ ಹೌಸ್‌ನಲ್ಲಿರುವ ಸಿಐಡಿ ಕಚೇರಿಗೆ 1995 ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಪೌಲ್ ಅವರನ್ನು ಮೂರನೇ ಬಾರಿ ವಿಚಾರಣೆಗೆ ಕರೆಯಲಾಗಿತ್ತು. ಹಗರಣದಲ್ಲಿ ಪೌಲ್ ಸೇರಿದಂತೆ 79 ಜನರನ್ನು ಬಂಧಿಸಿರುವ ಸಿಐಡಿ ಇದುವರೆಗೆ ಎಂಟು ಎಫ್‌ಐಆರ್‌ಗಳನ್ನು ದಾಖಲಿಸಿದೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅವರು ನೇಮಕಾತಿ ಎಡಿಜಿಪಿ ಆಗಿದ್ದ ಸಂದರ್ಭದಲ್ಲಿ  ಪರೀಕ್ಷೆಗಳು ನಡೆದಿದ್ದವು. ಹಗರಣ ಹೊರಬಿದ್ದ ಕೂಡಲೇ ಸರ್ಕಾರವು ಪೌಲ್‌ನನ್ನು ಆಂತರಿಕ ಭದ್ರತಾ ವಿಭಾಗಕ್ಕೆ (ಐಎಸ್‌ಡಿ) ವರ್ಗಾಯಿಸಿತ್ತು.

545 ಪಿಎಸ್‌ಐ ಹುದ್ದೆಗಳ ಡೀಲ್ ನಡೆದಾಗ ಅಮೃತ್ ಪೌಲ್ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದರು. ಡಿವೈಎಸ್‌ಪಿ ಹಾಗೂ ಎಫ್‌ಡಿಎಯೊಂದಿಗೆ ಸೇರಿ ಅಮೃತ್ ಪೌಲ್ ಡೀಲ್ ಮಾಡಿಸಿದ್ದಾರೆ ಎಂಬ ಆರೋಪವಿದೆ. 

ಬಲ್ಲ ಮೂಲಗಳ ಪ್ರಕಾರ, ಇಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಸಿಐಡಿ ಕಚೇರಿಗೆ ಬಂದ ಪೌಲ್ ಅವರನ್ನು ಉಪ ಪೊಲೀಸ್ ಅಧೀಕ್ಷಕ (ಡಿಎಸ್ಪಿ) ಶ್ರೇಣಿಯ ತನಿಖಾಧಿಕಾರಿ ವಿಚಾರಣೆಗೆ ಒಳಪಡಿಸಿದರು. ನಂತರ ಅವರನ್ನು ಮಧ್ಯಾಹ್ನ 2 ಗಂಟೆಗೆ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ವಾರ, ಆರೋಪಿಗಳ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಚ್‌ಪಿ ಸಂದೇಶ್ ಅವರ ಏಕಸದಸ್ಯ ಪೀಠವು ಪಿಎಸ್‌ಐಗಳ ನೇಮಕಾತಿಗೆ ಸಂಬಂಧಿಸಿದಂತೆ ಭ್ರಷ್ಟಾಚಾರವು ಗಂಭೀರ ವಿಷಯವಾಗಿದೆ ಮತ್ತು ತನಿಖೆಯ ಮೇಲೆ ವೈಯಕ್ತಿಕವಾಗಿ ನಿಗಾ ವಹಿಸುವಂತೆ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ), ಸಿಐಡಿ, ಪಿಎಸ್ ಸಂಧು ಅವರಿಗೆ ಸೂಚಿಸಿತ್ತು.

ಸತ್ಯ ಹೊರಬರಬೇಕು. ನ್ಯಾಯಾಲಯವು ತನಿಖೆಯ ಪ್ರಗತಿಯನ್ನು ಸಹ ಮೇಲ್ವಿಚಾರಣೆ ಮಾಡುತ್ತದೆ. ಆರೋಪಿಗಳ ವಿರುದ್ಧ ಸಚಿವರು ಅಥವಾ ಅಧಿಕಾರಿಗಳು ಎಂದು ಲೆಕ್ಕಿಸದೆ ಕ್ರಮ ಕೈಗೊಳ್ಳಬೇಕು,'' ಎಂದು ಸೂಚಿಸಿದ ನ್ಯಾಯಾಲಯ, ಜುಲೈ 7 ರಂದು ತನಿಖೆಯ ಪ್ರಗತಿ ವರದಿಯನ್ನು ಸಲ್ಲಿಸುವಂತೆ ಸಂಧುಗೆ ಸೂಚಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com