ಚಂದ್ರಶೇಖರ್ ಗುರೂಜಿ ಹತ್ಯೆ ಹಿಂದೆ ಬೇನಾಮಿ ಆಸ್ತಿ ವಿವಾದ: ಗುರೂಜಿಗೆ ಕಂಟಕವಾಯ್ತಾ ಮಾಜಿ ಮಹಿಳಾ ಉದ್ಯೋಗಿ ಜೊತೆಗಿನ ಒಡನಾಟ!?
ಸರಳ ವಾಸ್ತುತಜ್ಞ ಚಂದ್ರಶೇಖರ ಗುರೂಜಿ (57) ಅವರನ್ನು ಇಲ್ಲಿನ ಉಣಕಲ್ ಕ್ರಾಸ್‌ನಲ್ಲಿರುವ ದಿ ಪ್ರೆಸಿಡೆಂಟ್ ಹೋಟೆಲ್‌ನ ರಿಸೆಪ್ಶನ್ ಲಾಬಿಯಲ್ಲಿ ಅವರ ಇಬ್ಬರು ಆಪ್ತರು ಮಂಗಳವಾರ ಮಧ್ಯಾಹ್ನ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ.
Published: 06th July 2022 09:40 AM | Last Updated: 06th July 2022 09:40 AM | A+A A-

ಸರಳ ವಾಸ್ತು ಚಂದ್ರಶೇಖರ ಗುರೂಜಿ
ಹುಬ್ಬಳ್ಳಿ: ಸರಳ ವಾಸ್ತುತಜ್ಞ ಚಂದ್ರಶೇಖರ ಗುರೂಜಿ (57) ಅವರನ್ನು ಇಲ್ಲಿನ ಉಣಕಲ್ ಕ್ರಾಸ್‌ನಲ್ಲಿರುವ ದಿ ಪ್ರೆಸಿಡೆಂಟ್ ಹೋಟೆಲ್‌ನ ರಿಸೆಪ್ಶನ್ ಲಾಬಿಯಲ್ಲಿ ಅವರ ಇಬ್ಬರು ಆಪ್ತರು ಮಂಗಳವಾರ ಮಧ್ಯಾಹ್ನ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಕಲಘಟಗಿ ತಾಲ್ಲೂಕಿನ ದುಮ್ಮವಾಡದ ಮಹಾಂತೇಶ ಶಿರೂರ ಮತ್ತು ಧಾರವಾಡದ ಮಂಜುನಾಥ ಮರೇವಾಡ ಹತ್ಯೆ ಆರೋಪಿಗಳು.
ಘಟನೆಗೆ ಸಂಬಂಧಿಸಿದಂತೆ ಗುರೂಜಿ ಅವರ ಸಹೋದರನ ಮಗ ಸಂಜಯ್ ಅಂಗಡಿ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ತಡರಾತ್ರಿ ಪ್ರಥಮ ಮಾಹಿತಿ ವರದಿ( ಎಫ್ ಐ ಆರ್) ದಾಖಲಾಗಿದೆ. ಎಫ್‌ಐಆರ್‌ನಲ್ಲಿ ಮಹತ್ವದ ಅಂಶಗಳು ಬಯಲಾಗಿದೆ.
‘ಹತ್ಯೆ ಆರೋಪಿಗಳಾದ ಮಹಾಂತೇಶ ಮತ್ತು ಮಂಜುನಾಥ ಗುರೂಜಿ ಅವರ ಸರಳ ವಾಸ್ತು ಸಂಸ್ಥೆಯ ಮಾಜಿ ಉದ್ಯೋಗಿಗಳು. ಅಲ್ಲಿಯೇ ಉದ್ಯೋಗ ಮಾಡುತ್ತಿದ್ದ ವನಜಾಕ್ಷಿ ಜೊತೆ ಮಹಾಂತೇಶ ಮದುವೆಯಾಗಿದ್ದ. ಗುರೂಜಿ ಅವರ ಎಲ್ಲ ವ್ಯವಹಾರಗಳು ಮೂವರಿಗೂ ತಿಳಿದಿತ್ತು. ಅಲ್ಲದೆ, ವನಜಾಕ್ಷಿ ಗುರೂಜಿಗೆ ಆಪ್ತಳಾಗಿದ್ದು, ಅವರ ಹೆಸರಲ್ಲಿ ಗೋಕುಲ ರಸ್ತೆಯ ಗುರೂಜಿ ಅಪಾರ್ಟ್‌ಮೆಂಟ್ ಸೇರಿದಂತೆ ಹಲವು ಆಸ್ತಿಗಳನ್ನು ನೋಂದಣಿ ಮಾಡಿಸಿದ್ದರು. ಆಸ್ತಿಯನ್ನು ಬೇರೆಯವರಿಗೆ ಮಾರಾಟ ಮಾಡಿರುವ ಕುರಿತು ಪ್ರಶ್ನಿಸಿದಾಗ ಭಿನ್ನಾಭಿಪ್ರಾಯ ಏರ್ಪಟ್ಟಿತ್ತು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆಸ್ತಿ ಹಾಳಾಗುತ್ತಿದೆ ಎಂದು ಗುರೂಜಿ ಅವರು, ನೋಂದಣಿ ಮಾಡಿರುವ ಆಸ್ತಿಗಳನ್ನು ಮರಳಿಸುವಂತೆ ಕೇಳಿದಾಗ ಗಲಾಟೆ ಆರಂಭವಾಗಿತ್ತು. ಈ ಹಿನ್ನೆಲೆಯಲ್ಲಿ ಗುರೂಜಿ ಅವರ ಹತ್ಯೆ ಆಗಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. ವನಜಾಕ್ಷಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಈ ಕುರಿತು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ದೇಶಾದ್ಯಂತ ಸರಳ ವಾಸ್ತು ಬಗ್ಗೆ ಸಲಹೆ ನೀಡುತ್ತಿದ್ದ ಗುರೂಜಿ ಅವರು ಮುಂಬೈ, ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ಹಲವೆಡೆ ಕಚೇರಿ ತೆರೆದಿದ್ದರು. ಇವರ ಬಳಿ ಸಲಹೆ ಪಡೆಯಲು ದೇಶ-ವಿದೇಶಗಳಿಂದ ಭಕ್ತರು ಆಗಮಿಸುತ್ತಿದ್ದರು. ಉದ್ಯೋಗಿಗಳ ಹೆಸರಿನಲ್ಲಿ ಆಸ್ತಿ ಮಾಡಿದ್ರಾ ಗುರೂಜಿ? ಹತ್ಯೆಗೆ ಆಸ್ತಿ ಕಾರಣ? ಎನ್ನುವ ಹಲವು ಪ್ರಶ್ನೆಗಳು ಉದ್ಭವಿಸಿವೆ.
ಇನ್ನು ಬಹು ಮುಖ್ಯವಾಗಿ ಈ ಕೊಲೆಯ ರೂವಾರಿ ವನಜಾಕ್ಷಿ ಎನ್ನಲಾಗಿದ್ದು, ವನಜಾಕ್ಷಿ ಜೊತೆಗೆ ಚಂದ್ರಶೇಖರ ಗುರುಜಿ ಅತ್ಯಂತ ಸಲುಗೆ ಹೊಂದಿದ್ದರು ಎನ್ನಲಾಗಿದೆ. ಚಂದ್ರಶೇಖರ ಗುರೂಜಿ ಸಾವಿರಾರು ಕೋಟಿ ಒಡೆಯನಾಗಿದ್ದು, ಅನೇಕ ಸಚಿವರು ಶಾಸಕರ ಜೊತೆಗೆ ವ್ಯಾಪಾರ ವಹಿವಾಟು ಮತ್ತು ಪಾಲುದಾರಿಕೆ ಹೊಂದಿದ್ದಾರೆ ಎನ್ನಲಾಗಿದೆ.
ಆದರೆ ಅವರದೇ ಆದ ಸಂಸ್ಥೆಯಲ್ಲಿ ಒಬ್ಬ ಸಾಮಾನ್ಯ ಉದ್ಯೋಗಿ ಜೊತೆಗೆ ಅಷ್ಟೊಂದು ಆಸ್ತಿ ವಹಿವಾಟು ಹೊಂದುವಷ್ಟು ಸಲುಗೆ ಹೊಂದಿದ್ದು ಭಾರೀ ಚರ್ಚೆಗೆ ಮತ್ತು ಅನುಮಾನಕ್ಕೆ ಗ್ರಾಸವಾಗಿದೆ. ಪೊಲೀಸರ ತನಿಖೆಯಿಂದಷ್ಟೇ ಸತ್ಯ ಹೊರಬೀಳಬೇಕಾಗಿದೆ. ಆದರೆ ಹುಬ್ಬಳ್ಳಿಃ ಧಾರವಾಡ ಪೊಲೀಸ್ ಕಮಿಷನರ್ ಲಾಬೂರಾಮ್ ಕೊಲೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ನೀಡಿಲ್ಲ.